ಶಿರಂಗಾಲ, ಏ. 18: ಕೊಡಗು ಜಿಲ್ಲಾ ಬಲಿಜ ಸಮಾಜ ವತಿಯಿಂದ ಜಿಲ್ಲೆಯಾದ್ಯಂತ ಬಿರುಸಿನಿಂದ ನಡೆಯುತ್ತಿರುವ ಬಲಿಜ ಗಣತಿ ಉತ್ತಮ ಪ್ರಯತ್ನವಾಗಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಈವರೆಗೂ ತೆರೆಮರೆಯಲ್ಲಿದ್ದ ಬಲಿಜ ಸಮುದಾಯದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಯ ಮಾಹಿತಿ ಲಭ್ಯವಾಗಲಿದೆ ಮತ್ತು ಜಿಲ್ಲೆಯ ಬಲಿಜ ಜನಸಂಖ್ಯೆಯ ನಿಖರ ಮಾಹಿತಿ ಸಿಗಲಿದೆ ಎಂದು ಶಿರಂಗಾಲದ ಹಿರಿಯರು, ಬಲಿಜ ಅಭಿಮಾನಿ ಎಸ್.ಎ. ಶ್ರೀನಿವಾಸ್ ಅವರು ತಾಲೂಕು ಗಣತಿ ಉದ್ಘಾಟಿಸಿ ಅಭಿಪ್ರಾಯಪಟ್ಟರು. ಸೋಮವಾರಪೇಟೆ ತಾಲೂಕು ಬಲಿಜ ಗಣತಿ ಕಾರ್ಯಕ್ರಮವನ್ನು ಶಿರಂಗಾಲದಿಂದ ತಾ. 17 ರಂದು ಅಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭಿಸಲಾಯಿತು. ಶಿರಂಗಾಲ ಶ್ರೀನಿವಾಸ ಅವರ ನಿವಾಸದಿಂದಲೇ ಗಣತಿಗೆ ಚಾಲನೆ ನೀಡಲಾಯಿತು. ಇದೇ ಸಂದರ್ಭ ಮಾತನಾಡಿದ ಅವರು, ಕಳೆದ 50 ವರ್ಷಗಳಿಂದಲೂ ನಡೆಯದ ಉತ್ತಮ ಕಾರ್ಯಕ್ರಮ ಕೊಡಗು ಬಲಿಜ ಸಮಾಜದಿಂದ ನಡೆಯುತ್ತಿದೆ. ಇದು ಯಾರದೇ ವೈಯಕ್ತಿಕ ಕಾರ್ಯಕ್ರಮವಲ್ಲ. ಜಿಲ್ಲೆಯ ಎಲ್ಲ ಬಲಿಜ ಜನಾಂಗ ಪೂರಕ ಸಹಕಾರ ನೀಡಬೇಕು. ಶಿರಂಗಾಲದಲ್ಲಿ 200ಕ್ಕೂ ಅಧಿಕ ಬಲಿಜ ಸಮುದಾಯವಿದ್ದು, ಕೃಷಿಕರು, ಕೂಲಿ ಕಾರ್ಮಿಕರೇ ಅಧಿಕ. ಇವರ ಅಭ್ಯುದಯಕ್ಕೆ ಸಹಕಾರ ನೀಡಲು ಸಿದ್ಧವಿರುವದಾಗಿ ಹೇಳಿದರು.
ಕೊಡಗು ಜಿಲ್ಲಾ ಬಲಿಜ ಕ್ರೀಡೋತ್ಸವವೂ ಉತ್ತಮ ಪ್ರಯತ್ನ ವಾಗಿದ್ದು, ಶಿರಂಗಾಲದಿಂದಲೂ ಅಧಿಕ ಮಂದಿ ಪಾಲ್ಗೊಳ್ಳುವದಾಗಿ ಭರವಸೆ ನೀಡಿದರು. ಕೊಡಗು ಬಲಿಜ ಸಮಾಜ ಶಿರಂಗಾಲ ವಿಭಾಗದ ನಿರ್ದೇಶಕ ಎಸ್.ವಿ. ಕುಮಾರ್ ಅವರು, ಸೋಮವಾರಪೇಟೆ ತಾಲೂಕು ಬಲಿಜ ಗಣತಿ ಶಿರಂಗಾಲ ದಿಂದ ಆರಂಭವಾಗಿರುವದು ಹೆಮ್ಮೆಯ ವಿಚಾರ. ಶಿರಂಗಾಲ ಶ್ರೀ ಯೋಗಿನಾರಾಯಣ ಬಲಿಜ ಸಂಘ ಅಸ್ತಿತ್ವದಲ್ಲಿದ್ದು ಹಲವು ಜನಪರ ಕಾರ್ಯಕ್ರಮ ಏರ್ಪಡಿಸುತ್ತಾ ಬಂದಿದೆ. ಬಲಿಜ ಗಣತಿಗೆ ಪೂರಕ ಸಹಕಾರ ನೀಡಲಾಗುವದು ಎಂದರು.
ಶಿರಂಗಾಲ ಬಲಿಜ ಸಂಘದ ಅಧ್ಯಕ್ಷ ಎಸ್.ಎಸ್. ಉಮೇಶ್ ಅವರು ಇಲ್ಲಿನ ಸಮಗ್ರ ಗಣತಿಗೆ ಪೂರಕ ಸಹಕಾರ ನೀಡಲಾಗುವದು. ಕ್ರೀಡೋತ್ಸವದಂದು ಗ್ರಾಮದಿಂದ ಎರಡು ಕ್ರಿಕೆಟ್ ತಂಡ ಹಾಗೂ ಪುರುಷ ಮತ್ತು ಮಹಿಳಾ ಹಗ್ಗಜಗ್ಗಾಟ ತಂಡ ಭಾಗವಹಿಸಲಿದೆ ಎಂದು ಹೇಳಿದರು. ಜಿಲ್ಲಾ ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ಗ್ರಾಮ ಗ್ರಾಮಗಳಲ್ಲಿ ನಡೆಯುತ್ತಿರುವ ಗಣತಿ ಹಾಗೂ ಬಲಿಜ ಕ್ರೀಡೋತ್ಸವ ಪ್ರಚಾರ ಕಾರ್ಯಕ್ಕೆ ಎಲ್ಲರ ಸಹಕಾರಕ್ಕೆ ಮನವಿ ಮಾಡಿದರು.
ಕಾರ್ಯಕ್ರಮದ ಸಂದರ್ಭ ಮಾಲಂಬಿ ಶಿಕ್ಷಕ ಎಸ್.ಆರ್. ವಿಜಯಕುಮಾರ್, ಜಿಲ್ಲಾ ಉಪಾಧ್ಯಕ್ಷೆ ಶನಿವಾರಸಂತೆ ಗೀತಾ ಹರೀಶ್, ಹರೀಶ್, ಜಿಲ್ಲಾ ಉಪಾಧ್ಯಕ್ಷ ವೀರಾಜಪೇಟೆ ಯತಿರಾಜು ನಾಯ್ಡು, ತಿತಿಮತಿ ಅಮರ್, ಮೂರ್ನಾಡು ಶಿಕ್ಷಕ ಸುಬ್ರಮಣಿ, ಕುಮಾರಿ ಗಗನ, ವಿಸ್ಮಯ ಮುಂತಾದವರು ಪಾಲ್ಗೊಂಡಿದ್ದರು.