ಕುಶಾಲನಗರ, ಏ 18: ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ತಾನು ಶಕ್ತಿ ಮೀರಿ ಪ್ರಯತ್ನಿಸುವದಾಗಿ ಮಡಿಕೇರಿ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಬಿ.ಎ.ಜೀವಿಜಯ ಭರವಸೆ ನೀಡಿದ್ದಾರೆ. ಅವರು ಕುಶಾಲನಗರದಲ್ಲಿ ಕುಮಾರ ಪರ್ವ ಸಮಾವೇಶದಲ್ಲಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಬದಲಾವಣೆ ಖಚಿತ. ಪ್ರಾದೇಶಿಕ ಪಕ್ಷಕ್ಕೆ ಬಲ ತುಂಬುವ ಕೆಲಸವಾಗಬೇಕು. ತನ್ನ ಜೀವಮಾನದ ಕೊನೆಯ ಚುನಾವಣೆ ಇದಾಗಿದ್ದು ಕ್ಷೇತ್ರದ ಮತದಾರರು ಹರಸಿ ಗೆಲುವು ತಂದು ಕೊಡಬೇಕೆಂದು ಕೋರಿದರು.

ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವ ಕಾರ್ಯಕ್ರಮ ಆಗಬೇಕಾಗಿದೆ ಎಂದ ಅವರು, ಜಿಲ್ಲೆಯ ಪ್ರಾಕೃತಿಕ ಸಂಪತ್ತನ್ನು ದೋಚಿ ಮೆರೆಯುತ್ತಿರುವ ವ್ಯಕ್ತಿಗಳ ಮೇಲೆ ತಮ್ಮ ಪಕ್ಷದ ಸರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ ಎಂದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಜೆಡಿಎಸ್ ಚುನಾವಣಾ ಉಸ್ತುವಾರಿ ಜಿ.ಟಿ. ದೇವೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೋಲಿನ ಮೂಲಕ ರಾಜ್ಯದ ಭ್ರಷ್ಟ ಸರಕಾರಕ್ಕೆ ಅಂತಿಮ ಮೊಳೆ ಬೀಳಲಿದೆ ಎಂದರು.