ಸುಂಟಿಕೊಪ್ಪ: ಕೊಡಗರಹಳ್ಳಿಯ ಶ್ರೀ ಚಾಮುಂಡೇಶ್ವರಿ ಪರಿವಾರ ದೇವರುಗಳ 40ನೇ ವಾರ್ಷಿಕೋತ್ಸವ ದೇವಸ್ಥಾನ ಸೇವಾ ಸಮಿತಿಯ ವತಿಯಿಂದ ಕೇರಳದ ಚಂಡೆ ಹಾಗೂ ಕೊಡಗಿನ ವಾಧ್ಯದೊಂದಿಗೆ ವಿವಿಧ ಪೂಜಾ ಕೈಂಕಾರ್ಯಗಳೊಂದಿಗೆ ಅದ್ಧೂರಿ ಚಾಲನೆ ನೀಡಲಾಯಿತು.
ಶ್ರೀ ಚಾಮುಂಡೇಶ್ವರಿ ಪರಿವಾರ ದೇವರುಗಳ ದೇವಾಲಯವನ್ನು ವಿವಿಧ ತಳಿರುತೋರಣ ಹಾಗೂ ವಿದ್ಯುತ್ ದೀಪಾಂಲಕಾರ ಗೊಳಿಸಲಾಗಿದ್ದು ಸೋಮವಾರ ಸಂಜೆ ದೀಪಾರಾಧನೆ ಪೂಜೆಯೊಂದಿಗೆ 7 ಸುತ್ತಿನ ಪ್ರದಕ್ಷಿಣೆ, ಸಿಂಗಾರಿ ಮೇಳಂ ಹಾಗೂ ಚಂಡೆ ಸಹಿತ ವಿಶೇಷ ಪೂಜೆ ನೇರವೇರಿಸಲಾಯಿತು.
ಚಾಮುಂಡೇಶ್ವರಿ ಪರಿವಾರ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಚಂದ್ರಶೇಖರ್, ಅಭಿವೃದ್ಧಿಗೆ ಶ್ರಮಿಸಿದ ಹಿರಿಯರಾದ ಕೊರಗಪ್ಪ, ಪೂವಮ್ಮ, ಕಲಿಸ್ಟಾ ಎಂಬವರನ್ನು ದೇವಸ್ಥಾನದ ಸಮಿತಿ ಪದಾಧಿಕಾರಿಗಳು, ಅರ್ಚಕರು ಗೌರವಿಸಿದರು.ಪ್ರಕೃತಿ ದೇವತೆ ಪೂಜೆ
ಸೋಮವಾರಪೇಟೆ: ಗ್ರಾಮದ ಸಮೃದ್ಧಿಗಾಗಿ ಹಿರಿಕರ ಗ್ರಾಮಸ್ಥರು ಪ್ರಕೃತಿ ದೇವತೆಗೆ ಸಾಮೂಹಿಕ ಪೂಜೆ ಸಲ್ಲಿಸಿದರು.
ಸೋಮವಾರ ರಾತ್ರಿ ಗ್ರಾಮದ ಮಲ್ಲೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಗ್ರಾಮಸ್ಥರು ಮಂಗಳವಾರ ಗ್ರಾಮದ ಮೂರು ಸ್ಥಳಗಳಲ್ಲಿ ಪ್ರಕೃತಿ ಪೂಜೆ ನೆರವೇರಿಸಿ ಉತ್ತಮ ಮಳೆ ಬೆಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪ್ರಕೃತಿ ದೇವಿ ನೆಲೆಯಾಗಿದ್ದಾಳೆ ಎಂದೇ ನಂಬಲಾಗಿರುವ ಮರದ ರೆಂಬೆಗಳನ್ನು ಕಡಿಯದೇ ಸಂರಕ್ಷಿಸಿಕೊಂಡು ಬರಲಾಗುತ್ತಿದ್ದು, ಪ್ರಕೃತಿ ದೇವಿಯ ಆಶೀರ್ವಾದದಿಂದ ನಾಡಿಗೆ ಸಮೃದ್ಧಿಯೆಂದು ಆಶಯ ವ್ಯಕ್ತಪಡಿಸಿದರು. ಗ್ರಾಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸೋಮಪ್ಪ ನೇತೃತ್ವ ವಹಿಸಿದ್ದರು.ಹುಲಿ ಮಸಣಿಕಮ್ಮ
ಸುಂಟಿಕೊಪ್ಪ: ಗುಡ್ಡಪ್ಪ ರೈ ಬಡಾವಣೆಯ ಶ್ರೀ ಹುಲಿ ಮಸಣಿಕಮ್ಮ ದೇವಸ್ಥಾನದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಮಂಗಳವಾರ ನೆರವೇರಿತು. ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕೃತ ಗೊಳಿಸಲಾಯಿತು.
ದೇವಾಲಯದ ದೇವಿಗೆ ಬೆಳಿಗ್ಗೆ 7.30 ರಿಂದ ವಿಶೇಷ ಪೂಜಾ ಕಾರ್ಯಕ್ರಮ ನಡೆದು, 9.30 ರಿಂದ 11 ಗಂಟೆವರೆಗೆ ಅರ್ಪಣೆ ನಡೆಯಿತು. ಮಧ್ಯಾಹ್ನ 1 ಗಂಟೆಗೆ ಮಹಾಪೂಜೆಯನ್ನು ನೇರವೇರಿಸಲಾಯಿತು. ಮಹಾಮಂಗಳಾರತಿಯೊಂದಿಗೆ ಭಕ್ತಾದಿಗಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ನೀಡಲಾಯಿತು. ಸುಂಟಿಕೊಪ್ಪ ಸುತ್ತಮುತ್ತಲಿನ ನೂರಾರು ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾದರು.
ಹೆಗ್ಗಳ ಅಯ್ಯಪ್ಪ ಭಗವತಿ ಉತ್ಸವ
ವೀರಾಜಪೇಟೆ: ವೀರಾಜಪೇಟೆ ಬಳಿಯ ಹೆಗ್ಗಳ ಅಯ್ಯಪ್ಪ ಭಗವತಿ ದೇವರ ಉತ್ಸವ ತಾ. 21 ರಿಂದ 25 ರವರೆಗೆ ಜರುಗಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಎ.ಜಿ. ಬೋಪಣ್ಣ ತಿಳಿಸಿದ್ದಾರೆ.
ವೀರಾಜಪೇಟೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬೋಪಣ್ಣ ಅವರು, ತಾ. 21 ರಂದು ಪಟ್ಟಣಿ, ತಾ. 22 ರಂದು ದೊಡ್ಡ ಹಬ್ಬ, ತಾ. 25 ರಂದು ಶುದ್ಧ ಕಳಶ ಹಾಗೂ ಉತ್ಸವದ ದಿನಗಳಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಸಮಿತಿಯ ಪೊರೇರ ಬಿದ್ದಪ್ಪ ಇತರ ಸದಸ್ಯರುಗಳು ಹಾಜರಿದ್ದರು.