ಸೋಮವಾರಪೇಟೆ, ಏ.18: ಸಮೀಪದ ಹಾನಗಲ್ಲು ಬಾಣೆ ಗ್ರಾಮದಲ್ಲಿರುವ ಶ್ರೀ ಚೌಡೇಶ್ವರಿ ದೇವಿಯ 29ನೇ ವರ್ಷದ ವಾರ್ಷಿಕ ಮಹಾ ಪೂಜೋತ್ಸವ ತಾ. 22ರಿಂದ 24ರವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.

ತಾ. 22ರಂದು ಬೆಳಗ್ಗಿನಿಂದಲೇ ಗಣ ಪೂಜೆ ನಡೆಯಲಿದೆ. ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡೂರು ದೇವರ ಕೆರೆ ಮತ್ತು ಪಟ್ಟಣದ ಆನೆಕೆರೆಯನ್ನು ತಮ್ಮ ಸ್ವಂತ ಹಣದಿಂದ ಹೂಳು ತೆಗೆಸಿ ಕಾಯಕಲ್ಪ ನೀಡಿದ ದಾನಿಗಳಾದ ಹರಪಳ್ಳಿ ರವೀಂದ್ರ ಅವರಿಗೆ ಅಂದು ಸಂಜೆ 6 ಗಂಟೆಗೆ ದೇವಾಲಯ ಆವರಣದಲ್ಲಿ ಆಧುನಿಕ ಭಗೀರಥ ಎಂಬ ಬಿರುದು ನೀಡಿ ಗೌರವಿಸಲಾಗುವದು ಎಂದು ಅವರು ತಿಳಿಸಿದ್ದಾರೆ.

ತಾ.23ರಂದು ಬೆಳಗ್ಗೆ 9 ಗಂಟೆಯಿಂದ ಅಯ್ಯಪ್ಪ ದೇವಾಲಯದ ಪ್ರಧಾನ ಅರ್ಚಕ ಶ್ರೀ ಮಣಿಕಂಠನ್ ನಂಬೂದರಿ ಅವರ ನೇತೃತ್ವದಲ್ಲಿ ಗಣಪತಿ ಹೋಮ ನಡೆಯಲಿದ್ದು, ಮಧ್ಯಾಹ್ನ ಕ್ರೀಡಾಕೂಟ ಆಯೋಜಿಸಲಾಗಿದೆ. ತಾ. 24ರಂದು ವಾರ್ಷಿಕ ಮಹಾ ಪೂಜೋತ್ಸವ ನೆರವೇರಲಿದ್ದು, ಮಧ್ಯಾಹ್ನ ಮಹಾಮಂಗಳಾರತಿ ನಂತರ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.