ಮಡಿಕೇರಿ, ಏ. 18: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಈಗಾಗಲೇ ಒಳಚರಂಡಿ ಕಾಮಗಾರಿಯಿಂದ ಬಹುತೇಕ ರಸ್ತೆಗಳು ಹೊಂಡ-ಗುಂಡಿಗಳಿಂದ ವಾಹನಗಳ ಸಂಚಾರ ದೊಂದಿಗೆ ಪಾದಚಾರಿಗಳ ತಿರುಗಾಟ ಕ್ಕೂ ಅಪಾಯ ತಂದೊಡ್ಡುವಂತಾಗಿದೆ. ಅಲ್ಲಲ್ಲಿ ಕಿತ್ತು ಹೋಗಿರುವ ರಸ್ತೆಗಳು, ಮಳೆ ನೀರಿನಿಂದ ಕೊಚ್ಚಿಕೊಂಡು ಬಂದಿರುವ ಜೆಲ್ಲಿ ರಾಶಿ, ನೀರಿನಿಂದ ಕೊರೆದು ಉಂಟಾಗಿರುವ ಗುಂಡಿಗಳು ಅಪಾಯ ಉಂಟು ಮಾಡತೊಡಗಿದೆ. ಸ್ಟೋನ್ಹಿಲ್ ಬಳಿ ಕ್ರೈಸ್ತ ಸ್ಮಶಾನ ಬಳಿಕ ರಸ್ತೆ, ಇಲ್ಲಿನ ಜನತಾ ಬಜಾರ್ನಿಂದ ಕೊಡವ ಸಮಾಜ ಬಳಿ ತೆರಳುವ ಇಕ್ಕಡೆ ರಸ್ತೆಗಳು ಗುಂಡಿಗಳೊಂದಿಗೆ ಅಲ್ಲಲ್ಲಿ ವಾಹನ ಸವಾರರಿಗೆ ಕುತ್ತು ತಂದೊಡ್ಡುವ ಸನ್ನಿವೇಶ ನಿರ್ಮಾಣಗೊಂಡಿದೆ. ಕೆಲವೆಡೆ ಈಗಿನ ಒಂದರ್ಧ ಗಂಟೆಯ ಮಳೆಗೆ ರಸ್ತೆಗಳಲ್ಲಿ ಕೆರೆಯಂತೆ ನೀರು ನಿಂತು ಚರಂಡಿಗಳಲ್ಲಿ ಹರಿಯದೆ ಕೊಳಕು ಅಕ್ಕ ಪಕ್ಕ ಮನೆ, ಅಂಗಡಿಗಳಿಗೆ ರಾಚುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಮಳೆ ನಿರಂತರ ಅಡಿಯಿಡುವ ಮುನ್ನ ಕಾಯಕಲ್ಪ ನೀಡಬೇಕಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ದಸರಾ ವೇಳೆಗೆ ಮಡಿಕೇರಿಯಲ್ಲಿ ಕೆಸರು-ಕೊಚ್ಚೆಯ ಮಾರ್ಗದಲ್ಲಿ ಎಲ್ಲರು ಸಂಚರಿಸಬೇಕಾದ ಪ್ರಮೆಯ ಎದುರಾದೀತು ಎಂದು ನೆನಪಿಡಬೇಕು. ಮಡಿಕೇರಿ ನಗರದ ಒಳಚರಂಡಿ ಕಾಮಗಾರಿಯ ನಡುವೆ ಅಲ್ಲಲ್ಲಿ ಹಾಳು ಗೆಡವಿದ ರಸ್ತೆಗಳಿಗೆ ಅರ್ಧಂಬರ್ಧ ತೇಪೆ ಕೆಲಸ ಮಾಡಿದ್ದರೂ, ಎಲ್ಲವೂ ಈಗಿನ ಅಡ್ಡ ಮಳೆಯಲ್ಲೆ ಕೊಚ್ಚಿಕೊಂಡು ಹೋಗುವಂತಾಗಿದೆ. ಇತ್ತ ಜನಪ್ರತಿನಿಧಿಗಳ ಸಹಿತ ಇಲ್ಲಿ ಪೌರಾಡಳಿತ ಪ್ರಮುಖರು ನಿಗಾ ವಹಿಸಬೇಕಿದೆ.