ಕಾವೇರಿ ಜೀವಮಾನಕ್ಕೆ ಸಾಕಾಗುವಷ್ಟು ಪಾಠವನ್ನು ಕಲಿಸಿತು. ಒಂದು ಕಡೆ ಯಾವ ಲಾಭವಿಲ್ಲದಿದ್ದರೂ ಕೆಲಸ ಮಾಡುವ ತರುಣ- ತರುಣಿಯರ ನಿಸ್ವಾರ್ಥ ಭಾವ ಕಣ್ಣಿಗೆ ರಾಚುವಂತಿದ್ದರೆ ಮತ್ತೊಂದೆಡೆ ತಾವೇ ಹಾಕಿದ ಕಸವನ್ನು ಯಾರೋ ಬಂದು ಸ್ವಚ್ಛ ಮಾಡುತ್ತಿದ್ದಾಗಲೂ ತಲೆ ಕೆಡಿಸಿಕೊಳ್ಳದ ಸ್ವಾರ್ಥ ಜನಸಮೂಹ. ಆರೋಪಗಳನ್ನು ಮಾಡುವುದು ಎಂದಿಗೂ ನನ್ನ ಗುಣವಲ್ಲ. ಆದರೆ ಕಾವೇರಿಯ ನೆಪದಲ್ಲಿ ಅನೇಕರ ಅಂತರಂಗವನ್ನು ಅರ್ಥೈಸಿಕೊಂಡ ನಂತರ ಯಾಕೋ ಅಸಹ್ಯವೆನಿಸಿತು ಅಷ್ಟೇ.ನಾನಿಲ್ಲಿ ನೆನಪಿಡಬಹುದಾದ ಮತ್ತು ಎಲ್ಲರಿಗೂ ಪ್ರೇರೇಪಣೆ ಕೊಡಬಹುದಾದ ಕೆಲವು ಸಂಗತಿಗಳನ್ನಷ್ಟೇ ಉಲ್ಲೇಖಿಸುತ್ತಿದ್ದೇನೆ. 17 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇನೆಯಿಂದ ನಿವೃತ್ತನಾಗಿ ಬಂದ ಭಾಗಮಂಡಲದ ಶ್ರೀಕಾಂತ ನಮಗೆ ಪರಿಚಯವಾಗಿ ಒಂದು ವಾರವೂ ಕಳೆದಿರಲಿಲ್ಲ. ಕಾವೇರಿ ಸ್ವಚ್ಛತೆಯ ವಿಚಾರವನ್ನು ಕೇಳಿ ಸ್ವಯಂ ಪ್ರೇರಿತನಾಗಿ ನಾವು ಕೊಡಗಿನಲ್ಲಿದ್ದಷ್ಟೂ ದಿನ ನಮ್ಮೊಂದಿಗೆ ನೀರಿಗಿಳಿದ ಪುಣ್ಯಾತ್ಮ ಮಾನವ ಯಂತ್ರದಂತೆ ಕೆಲಸ ಮಾಡಿದ. ಮಧ್ಯಾಹ್ನದ ಊಟ ಕೂಡ ಮಾಡುತ್ತಿರಲಿಲ್ಲ ಆತ. ನಾವೆಲ್ಲರೂ ಕೆಲಸ ಮುಗಿಸಿದ ನಂತರವೂ ಯಾರಿಗೂ ಕಾಯದೇ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಲೇ ಇರುತ್ತಿದ್ದ. ನಮ್ಮ ತಂಡಕ್ಕೆ ಅವನೊಂದು ಹೊಸ ಜೆಸಿಬಿ. ಭಾಗಮಂಡಲದಿಂದ ಈ ಕೆಲಸಕ್ಕೆ ಬರುತ್ತೇನೆಂದು ಭರವಸೆ ಕೊಟ್ಟಿದ್ದವರೆಲ್ಲ ಕೈಕೊಟ್ಟವರೇ! ಉಳಿದದ್ದು ಶ್ರೀಕಾಂತ ಮತ್ತು ಅವನೊಟ್ಟಿಗೆ ಬಂದ ಮೂರು ಜನ ಮಾತ್ರ.
ಕಾವೇರಿಗಾಗಿ ಹೃದಯದಿಂದ ಪರಿತಪಿಸುವ ಚಂದ್ರಮೋಹನ್ ಒಬ್ಬ ಅದ್ಭುತವಾದ ವ್ಯಕ್ತಿ. ಆರಂಭದಿಂದಲೂ ನಮ್ಮೊಂದಿಗೆ ಕಾವೇರಿಯ ವಿಚಾರಕ್ಕೆ ಭಾವನಾತ್ಮಕವಾಗಿ ಜೋಡಿಸಿಕೊಂಡವರು ಅವರು. ಬಲಮುರಿ, ಸಿದ್ಧಾಪುರ, ಕುಶಾಲನಗರಗಳಲ್ಲಿ ವ್ಯವಸ್ಥೆಯ ದೃಷ್ಟಿಯಿಂದ ಅವರು ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ಕಾವೇರಿಯ ಬಗ್ಗೆ ಕಾಳಜಿ ಇದ್ದವರು ಅವರನ್ನು ಭೇಟಿ ಮಾಡಲಿಲ್ಲವೆಂದರೆ ಕಾವೇರಿಯ ಕಾಳಜಿ ಪೂರ್ಣವಾದಂತಾಗುವುದೇ ಇಲ್ಲ. ಎಲ್ಲಕ್ಕಿಂತಲೂ ಅಚ್ಚರಿಯೆಂದರೆ ಚಂದ್ರಮೋಹನರ ಪರಿವಾರವೇ ಸಮಾಜಮುಖಿಯಾದ್ದು. ಅವರದ್ದೊಂದು ಪುಟ್ಟ ಮನೆ. ಆಕಾರದ ದೃಷ್ಟಿಯಿಂದಷ್ಟೇ ಅದು ಪುಟ್ಟದ್ದು. ಗಂಡ-ಹೆಂಡತಿ ಮತ್ತು ಮಗಳು ಚೈತನ್ಯ. ಇವರ ಹೃದಯ ಅದೆಷ್ಟು ವಿಶಾಲವೆಂದರೆ ಆ ಪುಟ್ಟ ಮನೆಯಲ್ಲಿ 25 ಜನರಿಗೆ ಬೇಕಿದ್ದರೂ ಅವರು ಆತಿಥ್ಯ ನೀಡಬಲ್ಲರು. ನೀವು ಕುಳಿತು ಹರಟುತ್ತಿರುವ ವೇಳೆಗಾಗಲೇ ರುಚಿ-ರುಚಿಯಾದ ತಿಂಡಿಯನ್ನು ಮಾಡಿ ನಿಮ್ಮೆದುರಿಗೆ ಹರವಿ ‘ಕಾವೇರಿಗಾಗಿ ಇಷ್ಟು ಮಾಡುವ ನಿಮಗೆ ನಾವಿಷ್ಟೂ ಮಾಡದಿದ್ದರೆ ಹೇಗೆ?’ ಎಂದು ಕಣ್ಣರಳಿಸಿಬಿಡಬಲ್ಲರು. ಕಾವೇರಿಯ ಕೊಳಕು ಮಾಡುವವರ ಕಂಡರೆ ಚಂದ್ರಮೋಹನರು ಉರಿದು ಕೆಂಡವಾಗಿ ಬಿಡುತ್ತಾರೆ. ಉಳಿದಂತೆ ಅವರದ್ದು ಅತ್ಯಂತ ಮೃದು ಸ್ವಭಾವ. ಕಾವೇರಿಯ ವಿಚಾರವಾಗಿ ನಮ್ಮ ಮುಂದಿನ ಹೋರಾಟಕ್ಕೆ ನಮಗೆ ಸಿಕ್ಕ ಅಪರೂಪದ ವಜ್ರ ಚಂದ್ರಮೋಹನ್.
ವ್ಯವಸ್ಥೆಗಾಗಿ ಚಂದ್ರಮೋಹನ್ರು ಇಷ್ಟು ಕಷ್ಟ ಪಡುವ ವೇಳೆಗಾಗಲೇ ಅದೇ ಕೊಡಗಿನವರೊಬ್ಬರು 80 ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಿಕೊಡು ತ್ತೇನೆಂದು ಹೇಳಿ ಇನ್ನು ಐದಾರು ಗಂಟೆಗಳಿರುವಾಗ ‘ನನ್ನಿಂದ ಸಾಧ್ಯವಿಲ್ಲ’ ಎಂದು ಕೈ ಎತ್ತಿದಾಗ ನಾವು ಚಡಪಡಿಸಿಬಿಟ್ಟಿದ್ದೆವು. ನೋಡಲಿಕ್ಕೆ ದೊಡ್ಡವರಂತೆ ಕಂಡವರೆಲ್ಲ ಹೃದಯದಿಂದ ದೊಡ್ಡವರಾಗಿರಬೇಕಿಲ್ಲ ವೆಂದು ಕಾವೇರಿ ಹೀಗೆಯೇ ಪಾಠ ಕಲಿಸಿದ್ದು. ಅನ್ನ-ಸಾಂಬಾರಿನ ಬೆಲೆ 30 ರೂಪಾಯಿ ಎಂದು ಲೆಕ್ಕ ಹಾಕಿದರೂ 80 ಜನರಿಗೆ 2500 ದಾಟುತ್ತಿರಲಿಲ್ಲ. ಅಂದು ರಾತ್ರಿ ರಾಮನಾಥಪುರದಲ್ಲಿ ಕೆಲಸ ಮುಗಿಸಿ ಶ್ರೀರಂಗಪಟ್ಟಣಕ್ಕೆ ಬಂದಿದ್ದ ತರುಣರಿಗೆ ಊಟ ಮಾಡಿಸಿದಾಗ 10 ಗಂಟೆ ದಾಟಿಬಿಟ್ಟಿತ್ತು. ಒಬ್ಬೊಬ್ಬರ ಮುಖಗಳನ್ನು ನೋಡುವಾಗ ಸಂಕಟ ರಾಚುತ್ತಿತ್ತು. ಬಿಡಿ. ಕೆಟ್ಟದ್ದನ್ನು ನೆನಪಿಟ್ಟುಕೊಳ್ಳದಿರೋದೇ ಒಳ್ಳೆಯದು. ಆದರೆ ಅದರಿಂದ ಪಾಠವನ್ನು ಕಲಿಯಲೇಬೇಕು.
ಶ್ರೀರಂಗಪಟ್ಟಣದಲ್ಲಿ ಸ್ವಚ್ಛತೆಗಿಳಿದಿದ್ದ ಹುಡುಗರೊಂದಿಗೆ ನದಿಯಿಂದ ತೆಗೆದ ಕಸದಿಂದಾಗಿ ಅಲರ್ಜಿಯಾಗುತ್ತದೆಂದು ಮೇಲೆ ಕುಳಿತಿದ್ದ ಧಡೂತಿ ಪುರೋಹಿತರೊಬ್ಬರು ಕೂಗಾಡಿದರು. ಅವರು ಹೇಳಿದ್ದರಿಂದಾಗಿಯೇ ಬಂದ ಭಕ್ತರು ಬಟ್ಟೆಯೇ ಮುಂತಾದ ಮಲಿನ ಯುಕ್ತ ಪದಾರ್ಥಗಳನ್ನು ನದಿಗೆ ಎಸೆದಿದ್ದು. ಈಗ ಅದೇ ಅವರಿಗೆ ಅಲರ್ಜಿಕಾರಕ. ಆ ಪುರೋಹಿತರೊಂದಿಗೆ ಜಟಾಪಟಿಯೇ ಆಯ್ತು. ಕೊನೆಗೆ ಕೋಪಿಸಿಕೊಂಡ ಪುರೋಹಿತರು ‘ಭಕ್ತರಿಂದ ನಾನು ಬೇಕೆಂದೇ ನದಿಗೆ ಬಟ್ಟೆಯನ್ನು ಬಿಡಿಸುತ್ತೇನೆ. ನೀವು ಅದೆಷ್ಟು ಸ್ವಚ್ಛ ಮಾಡುತ್ತೀರೋ ನೋಡುತ್ತೇನೆ’ ಎಂದಾಗ ಪುರೋಹಿತಶಾಹಿಯ ಧಾಷ್ಟ್ರ್ರ್ಯ ಮತ್ತು ಅವರನ್ನೇ ದೇವರೆಂದು ಭಾವಿಸಿರುವ ಸಾಮಾನ್ಯರ ಮೌಢ್ಯ ಎರಡೂ ಚೆನ್ನಾಗಿಯೇ ಅರಿವಾಯ್ತು. ಹಾಗಂತ ಎಲ್ಲಾ ಪುರೋಹಿತ ವರ್ಗ ಕೆಟ್ಟದ್ದಲ್ಲ. ರಾಮನಾಥಪುರದಲ್ಲಿ ತರುಣ-ತರುಣಿಯರು ಕೆಲಸ ಮಾಡುವದನ್ನು ಕಂಡು ಭಾವುಕವಾಗಿದ್ದು ಬ್ರಾಹ್ಮಣ ಸಮಾಜವೇ. 200 ಕ್ಕೂ ಹೆಚ್ಚು ಸ್ವಯಂ ಸೇವಕರಿಗೆ ಕಾಲ-ಕಾಲಕ್ಕೆ ಕಬ್ಬಿನ ರಸ, ಮಜ್ಜಿಗೆ, ಟೀ-ಕಾಫಿ, ಊಟ-ತಿಂಡಿ ಇವೆಲ್ಲವನ್ನೂ ವ್ಯವಸ್ಥೆ ಮಾಡಿದ್ದಲ್ಲದೇ ನಮ್ಮ ಒಟ್ಟಾರೆ ಖರ್ಚಿಗೆಂದು 15,000 ರೂಪಾಯಿಯನ್ನು ಕೈಗಿತ್ತು ಕಳಿಸಿದವರು ಅವರೇ. ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಕುಳಿತಿದ್ದ ಧಡೂತಿ ಪುರೋಹಿತನನ್ನು ನೋಡಿ ಎಲ್ಲಾ ಬ್ರಾಹ್ಮಣರು ಹಾಗೇ ಎಂದುಕೊಂಡುಬಿಟ್ಟರೆ ಅದೆಷ್ಟು ತಪ್ಪಾಗಿಬಿಡುವದಲ್ಲವೇ?! ಹಾಗಂತ ಅಂಥವರ ಧಾಷ್ಟ್ರ್ರ್ಯವನ್ನು ಬಯಲಿಗೆಳೆಯದೇ ಬಿಟ್ಟರೇ ಅದೂ ತಪ್ಪಾಗಿಬಿಡುತ್ತದೆ.
ಅನೇಕ ಸ್ವಯಂ-ಸೇವಾ ಸಂಘಟನೆಗಳು ಕೈಜೋಡಿಸುತ್ತೇವೆಂದು ಬಂದರೂ ಒಂದು ಗಂಟೆಗೂ ಹೆಚ್ಚು ಕಾಲ ದುಡಿದವರು ಸಿಗಲಿಲ್ಲ. ಎಲ್ಲರೂ ಕಟ್ಟೆಯ ಮೇಲೆ ನಿಂತು ಕಸವನ್ನು ತಡೆಯಬಲ್ಲ ಉಪಾಯವನ್ನು ಕೊಟ್ಟವರೇ. ಇಂಥವರನ್ನು ಕಂಡಾಗಲೆಲ್ಲ ನೀರಿಗಿಳಿದು ಕೆಲಸ ಮಾಡುತ್ತಿದ್ದ ನಮ್ಮ ಹುಡುಗರು ‘ಇಂಜಿನಿಯರ್ ಬಂದ್ನಪ್ಪೋ’ ಎಂದು ಕಿರುಚುತ್ತಿದ್ದರು. ಕುಶಾಲನಗರದಲ್ಲಿ ಇದೇ ರೀತಿ ಮೇಸ್ತ್ರಿಗಿರಿ ಮಾಡ ಹೋಗಿ ತಾನೂ ಸಮಾಜಸೇವಕನೇ ಎಂದು ಬಾಯ್ತಪ್ಪಿ ಹೇಳಿದ ಮೇಷ್ಟರೊಬ್ಬರನ್ನು ನಮ್ಮ ಹುಡುಗರೆಲ್ಲಾ ಸೇರಿ ‘ಸಮಾಜ ಸೇವಕರಿಗೆ ಜಯವಾಗಲಿ’ ಎನ್ನುತ್ತಲೇ ಕಾವೇರಿಯ ರಾಡಿಯೊಳಗೊಯ್ದುಬಿಟ್ಟರು. ಕಸವನ್ನು ಮುಟ್ಟಲೋ ಬೇಡವೋ ಎಂಬ ಗೊಂದಲದಲ್ಲಿದ್ದ ಮೇಷ್ಟ್ರು ಕೊನೆಗೂ ಬಾಯ್ಬಿಟ್ಟರು, ‘ನಾನು ಮೇಷ್ಟ್ರು. ಕೆಲಸ ಮಾಡಿಸಿ ಗೊತ್ತೇ ಹೊರತು. ಮಾಡಿ ಗೊತ್ತಿಲ್ಲ’ ಎಂದರು. ನಮಗೆ ನಗುವುದಲ್ಲದೇ ಬೇರೆ ದಾರಿಯಿರಲಿಲ್ಲ. ಪಶ್ಚಿಮ ವಾಹಿನಿಯಲ್ಲಿಯೂ ತರುಣನೊಬ್ಬ ಹೀಗೇ ಉದ್ಧಟತನದ ವರ್ತನೆ ತೋರಿದ್ದ. ಆತನನ್ನು ನೀರಿಗೋಯ್ದು ಕಸ ಹೆಕ್ಕಲು ಬಿಟ್ಟೊಡನೆ ಕಾಲಿಗಾದ ಗಾಯ ತೋರಿದ, ನೀರಿನಲ್ಲಿ ಕಲ್ಲು ತರಚಿದ್ದನ್ನು ತೊರಿಸಿದ, ಕೊನೆಗೆ ನಾವೆಲ್ಲ ಕೆಲಸದಲ್ಲಿ ವ್ಯಸ್ತರಾಗಿರುವಾಗಲೇ ಅಲ್ಲಿಂದ ಸದ್ದಿಲ್ಲದೇ ಕಳಚಿಕೊಂಡುಬಿಟ್ಟ. ಇಂಥವರು ಬಹಳ ಮಂದಿ ಬಂದು ಹೋದರು. 300 ಜನ ಬರುತ್ತೇವೆಂದು ಹೇಳಿದ ಒಂದು ಸಂಘಟನೆಯವರು ಕೊನೆಗೆ 3 ಜನರೂ ಬಂದಿರಲಿಲ್ಲ. 25 ಜನರನ್ನು ಕರೆದುಕೊಂಡು ಬಂದಿದ್ದೇನೆಂದು ಬೊಗಳೆ ಬಿಟ್ಟವನ ಹಿಂದೆ ಕೆಲಸ ಮಾಡಿದವರು ಇಬ್ಬರೂ ಇರಲಿಲ್ಲ. ನಮಗೆ ಇಂಥವರನ್ನು ನೋಡಿ ಅಭ್ಯಾಸವಾಗಿ ಹೋಗಿದೆ. ಕಸ ಹೆಕ್ಕಿದವರು ಯಾರಾದರೂ ಇರಲಿ ಅದರೊಂದಿಗೆ ಒಂದು ಸೆಲ್ಫಿ ಬೇಕಷ್ಟೇ!
ಇವೆಲ್ಲದರ ನಡುವೆ ಯುವಾಬ್ರಿಗೇಡಿನ ತರುಣರು ನನ್ನ ಪಾಲಿಗಂತೂ ಬಲು ವಿಶಿಷ್ಟವೆನ್ನಿಸುತ್ತಾರೆ. ದಿನದಲ್ಲಿ 10 ತಾಸುಗಳಷ್ಟು ಕೆಲಸ ಮಾಡಿದರೂ ಒಬ್ಬೊಬ್ಬರದ್ದೂ 10 ಫೋಟೊ ಸಿಗುವುದು ಕಷ್ಟ. ಫೊಟೊ ಬಿಡಿ. ನೀರಿಗಿಳಿದು ಕೆಲಸ ಮಾಡಬೇಕಾದ್ದರಿಂದ ಮೊಬೈಲನ್ನೇ ತೆಗೆದೊಯ್ಯುವಂತಿರಲಿಲ್ಲ. ಶ್ರೀರಂಗಪಟ್ಟಣದಲ್ಲಿ ಬೆಳಿಗ್ಗೆ 6.30 ಕ್ಕೆ ಕೆಲಸ ಶುರುಮಾಡಿದಾಗ ಗೋಕಳ್ಳರ ವಿರುದ್ಧ ಪ್ರತಿಭಟನೆಗೆಂದು ಇಡಿಯ ದಿನ ಉಪವಾಸವಿದ್ದು ಕೆಲಸ ಮಾಡಬಲ್ಲವರೆಷ್ಟು ಜನ ಎಂದು ಕೇಳಿದಾಗ 50 ಕ್ಕೂ ಹೆಚ್ಚು ಜನ ಸಿದ್ಧರಾಗಿ ನಿಂತಿದ್ದರು. ಸಂಜೆ 4 ಗಂಟೆಗೆ ಎಲ್ಲ ಕೆಲಸ ಮುಗಿಸಿ ಸ್ನಾನ ಮಾಡಿ ಕಸದ ಶವಯಾತ್ರೆಯನ್ನು ನಡೆಸಿ ಮರಳಿ ಬರುವ ವೇಳೆಗಾಗಲೇ ನಿಮಿಷಾಂಬ ಮಂದಿರದ ಬಳಿ ಹೆಕ್ಕಿದ ಕಸವನ್ನು ಟ್ರಾಕ್ಟರಿಗೆ ತುಂಬುವುದು ಬಾಕಿ ಇದೆ ಎಂದು ಸುದ್ದಿ ಬಂತು. ಒಂದೆಡೆ ಕೆಲಸ ಮುಗಿದ ಸಂತಸ. ಮತ್ತೊಂದೆಡೆ ಉಪವಾಸ ಮುರಿಯುವ ಆನಂದ. ಇವೆರಡರಲ್ಲೂ ತೇಲುತ್ತಿದ್ದವರಿಗೆ ಮತ್ತಷ್ಟು ಕೆಲಸ ಬಾಕಿ ಇದೆ ಎಂದಾಗ ಹೇಗಾಗಿರಬೇಡ! ಆದರೆ ಒಬ್ಬನೂ ಮರು ಮಾತಾಡಲಿಲ್ಲ. ಸ್ನಾನ ಮುಗಿಸಿ ಹೊಸ ಬಟ್ಟೆ ಧರಿಸಿದ್ದವರೆಲ್ಲ ಮತ್ತೆ ಹಳೆ ಬಟ್ಟೆ ಹಾಕಿಕೊಂಡು ನಿಮಿಷಾಂಬದ ಬಳಿ ಕೆಲಸಕ್ಕೆ ಅಣಿಯಾದರು. ರಣಹದ್ದುಗಳಂತೆ ಕಸದ ಮೇಲೆ ಮುಗಿಬಿದ್ದರು. ನೋಡ-ನೋಡುತ್ತಲೇ ಕಸದ ಬೆಟ್ಟವನ್ನು ಇಂಗಿಸಿಬಿಟ್ಟರು. ಮತ್ತೊಮ್ಮೆ ಸ್ನಾನ ಮುಗಿಸಿ ನಿಮಿಷಾಂಬಾದ ಆವರಣದಲ್ಲಿಯೇ ಕುಳಿತು ಮಂತ್ರ ಉಚ್ಚರಿಸುತ್ತಾ ಗೋಕಳ್ಳರ ವಿರುದ್ಧದ ನಮ್ಮ ಸಾಂಕೇತಿಕ ಉಪವಾಸವನ್ನು ಮುರಿದಾಗ ಹಾಯೆನಿಸುತ್ತಿತ್ತು. ಬೆಳಗ್ಗಿನ ತಿಂಡಿಗೆಂದು ತಂದಿದ್ದ ಚಿತ್ರಾನ್ನ ಸಂಜೆ ಊಟವಾದಾಗಲೂ ಕೂಡ ಅದರ ರುಚಿ ಇಂಗಿರಲಿಲ್ಲ.
ಹೇಳಿದೆನಲ್ಲ. ಕಾವೇರಿ ನಮಗೆ ಬೆಟ್ಟದಷ್ಟು ಪಾಠ ಕಲಿಸಿಬಿಟ್ಟಳು. ಈ ಸ್ವಚ್ಛತೆಗೆಂದು ಬಂದಿದ್ದ ತರುಣರ ನಡುವಿನ ಬಾಂಧವ್ಯ ಮೊದಲಿಗಿಂತ ಹೆಚ್ಚಾಯ್ತು. ರಾಷ್ಟ್ರದ ಯಾವ ಕೆಲಸಕ್ಕಾದರೂ ಇವರು ಸನ್ನದ್ಧರೆಂಬ ಸಂದೇಶ ಬಲು ಜೋರಾಗಿಯೇ ಮುಟ್ಟಿತು. ನನ್ನ ಕನಸಿನ ಕರ್ನಾಟಕದ ನಿರ್ಮಾಣ ಬರಿಯ ಭಾಷಣವಲ್ಲ ಅದು ಆಚರಣೆಗೆ ತರಬಹುದಾದಂತಹ ಸಿದ್ಧಾಂತವೆಂದು ಪ್ರತಿಪಾದಿಸಲು ಸಾಧ್ಯವಾಯ್ತು. ಭಾಗವಹಿಸಿದ ತರುಣರೆಲ್ಲರಿಗೂ ಇದೊಂದು ಜೀವಮಾನಕ್ಕೆ ಸಾಕಾಗುವ ಅನುಭವ. ನಿಸ್ವಾರ್ಥ ಭಾವದಿಂದ ಮಾಡಿದ ಕೆಲಸಕ್ಕೆ ಸೂಕ್ತ ಪ್ರತಿಫಲವಿದ್ದೇ ಇದೆ. ಅವರವರಿಗೇ ಅದು ಕಾಲಕ್ರಮದಲ್ಲಿ ಅನುಭವಕ್ಕೆ ಬರುವುದರಲ್ಲಿ ಅನುಮಾನವಿಲ್ಲ!
#ಜೀವನದಿಗೆ_ಜೀವತುಂಬಿ
-ಚಕ್ರವರ್ತಿ ಸೂಲಿಬೆಲೆ (ಕೃಪೆ: ವಾಟ್ಸಪ್)