ಸೋಮವಾರಪೇಟೆ, ಏ.19: ವಿಧಾನಸಭಾ ಚುನಾವಣಾ ಹಿನ್ನೆಲೆ ಸೋಮವಾರಪೇಟೆ ಪೊಲೀಸ್ ವೃತ್ತ ಸರಹದ್ದಿಗೆ ಒಳಪಡುವ ರೌಡಿ ಶೀಟರ್‍ಗಳ ಪೆರೇಡ್ ಇಲ್ಲಿನ ವೃತ್ತನಿರೀಕ್ಷರ ಕಚೇರಿಯ ಆವರಣದಲ್ಲಿ ನಡೆಯಿತು.

ರೌಡಿ ಶೀಟರ್‍ಗಳನ್ನು ಉದ್ದೇಶಿಸಿ ಮಾತನಾಡಿದ ಡಿವೈಎಸ್‍ಪಿ ಶ್ರೀನಿವಾಸ ಮೂರ್ತಿ, ರೌಡಿಶೀಟರ್‍ಗಳು ಹಾಗೂ ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಚುನಾವಣೆ ಸಂದರ್ಭ ರಾಜಕೀಯದ ಹೆಸರಿನಲ್ಲಿ ದೊಂಬಿ, ಗುಂಪು ಘರ್ಷಣೆ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಂಡು ಅಶಾಂತಿ ಸೃಷ್ಟಿಸಿದರೆ, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.

ತಾಲೂಕು ವ್ಯಾಪ್ತಿಗೆ ಒಳಪಡುವ 135 ರೌಡಿಶೀಟರ್‍ಗಳ ಪೈಕಿ 43 ಮಂದಿ ಠಾಣೆಗೆ ಹಾಜರಾಗಿ ಸಹಿ ಹಾಕಿದ್ದಾರೆ. ಹಾಜರಾಗದೆ ಇರುವವರ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿಗಳನ್ನು ಕಲೆ ಹಾಕಲಿದ್ದಾರೆ ಎಂದು ವೃತ್ತನಿರೀಕ್ಷಕ ನಂಜುಂಡೇಗೌಡ ಹೇಳಿದರು. ಚುನಾವಣಾ ಕರ್ತವ್ಯ ದಲ್ಲಿರುವ ಅಧಿಕಾರಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಕಾನೂನು ಗೌರವಿಸುವದು ಪ್ರತಿಯೊಬ್ಬರ ಕರ್ತವ್ಯ. ಕಾನೂನು ಮೀರಿ ವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದರು.