ಮಡಿಕೇರಿ, ಏ. 19: ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಹೆಸರನ್ನು ದುರುಪಯೋಗಪಡಿಸಿಕೊಂಡ ಕೆಲವರು, ಸಂಘಟನೆಯ ಹೆಸರಿನಲ್ಲಿ ಸಿದ್ದಾಪÀÅರದಲ್ಲಿ ಸಮಾವೇಶವನ್ನು ಆಯೋಜಿಸುವ ಮೂಲಕ ಸಮಾಜ ಬಾಂಧವರಲ್ಲಿ ಗೊಂದಲವನ್ನು ಹುಟ್ಟು ಹಾಕಿದ್ದಾರೆ ಎಂದು ಸಂಘÀದ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಹೆಸರಿನಲ್ಲಿ ಮುಂದಿನ ಮೇ 27 ಮತ್ತು 28 ರಂದು ಸುಂಟಿಕೊಪ್ಪದಲ್ಲಿ ಕ್ರೀಡಾಕೂಟವನ್ನು ನಡೆಸುವದಾಗಿಯೂ ಹೇಳಿಕೆ ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಒಂದೊಮ್ಮೆ ತಮ್ಮ ಸಂಘಟನೆಯ ಹೆಸರಿನಲ್ಲಿ ಕ್ರೀಡಾಕೂಟ ನಡೆಸಿದ್ದೇ ಆದಲ್ಲಿ ಪ್ರತಿಭಟನೆ ಮತ್ತು ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.

ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷರೆಂದು ಜನಾರ್ಧನ ಮತ್ತು ಉಪಾಧ್ಯಕ್ಷರೆಂದು ಕುಶಾಲಪ್ಪ ಎಂಬವರು ಹೇಳಿಕೊಂಡಿರುವದು ಸುಳ್ಳಿನ ಕಂತೆಯೆಂದು ಆರೋಪಿಸಿದ ಸೋಮಪ್ಪ, ಸಂಘÀದ ಹೆಸರನ್ನು ದುರುಪಯೋಗಪಡಿಸಿಕೊಂಡು ಆದಿ ದ್ರಾವಿಡ ಸಮಾಜವನ್ನು ದಾರಿತಪ್ಪಿಸಬೇಡಿ ಎಂದು ಕಿವಿ ಮಾತುಗಳನ್ನಾಡಿ, ಆಸಕ್ತಿ ಇದ್ದಲ್ಲಿ ತಮ್ಮ ಸಂಘಟನೆಯೊಂದಿಗೆ ಸೇರಿಕೊಂಡು ಸಮಾಜದ ಏಳಿಗೆಗೆ ಶ್ರಮಿಸುವಂತೆ ತಿಳಿಸಿದ್ದಾರೆ.

ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘÀವನ್ನು ತಾವು 2016-17ನೇ ಸಾಲಿನಲ್ಲಿ ಅಸ್ತಿತ್ವಕ್ಕೆ ತಂದು ನೋಂದಣಿ ಮಾಡಿಕೊಂಡು, ಸಮಾಜದ ಏಳಿಗೆಗಾಗಿ ಅವಿಶ್ರಾಂತವಾಗಿ ಶ್ರಮಿಸುತ್ತಿರುವದಾಗಿ ತಿಳಿಸಿದ ಸೋಮಪ್ಪ, ಇದರೊಂದಿಗೆ ಕಾರ್ಮಿಕ ಸಂಘಟನೆಯ ಮೂಲಕ ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ, ನಿವೇಶನ ರಹಿತರಿಗೆ ನಿವೇಶನಕ್ಕಾಗಿ ಅರ್ಜಿಯನ್ನು ಸಲ್ಲಿಸಿರುವ ಕಾರ್ಯವನ್ನು ನಡೆಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿ ಸಹಿಸಲಾಗದೆ ಜನಾರ್ಧನ, ಕುಶಾಲಪ್ಪ ಸೇರಿದಂತೆ ಕೆಲವರು ತಮ್ಮ ಸಂಘದ ಹೆಸರನ್ನು ದುರುಪಯೋಗಪಡಿಸಿಕೊಂಡು, ಅನಗತ್ಯ ಆರೋಪಗಳನ್ನು ಮಾಡಿಕೊಂಡು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದಾಗಿ ಹೇಳುತ್ತಿರುವದಾಗಿ ಟೀಕಿಸಿದರು.

ಕೆಲವು ವರ್ಷಗಳ ಹಿದೆ ಮೂಡಬಿದ್ರೆಯ ಸೀನಪ್ಪ ಎಂಬವರು ಜಿಲ್ಲೆಯಲ್ಲಿ ಕರ್ನಾಟಕ ಆದಿದ್ರಾವಿಡ ಮಹಾಮಂಡಳವನ್ನು ಅಸ್ತಿತ್ವಕ್ಕೆ ತಂದು ನೋಂದಣಿ ಮಾಡಿದ್ದರಾದರು, ಬಳಿಕ ನೋಂದಣಿ ನವೀಕರಣವಾಗದೆ ಆ ಸಂಘಟನೆ ರದ್ದುಗೊಳಿಸಲ್ಪಟ್ಟಿದೆಯೆಂದು ಮಾಹಿತಿ ನೀಡಿದ ಸೋಮಪ್ಪ ಅವರು, ಇದೀಗ ತಾವು ಸ್ಥಾಪಿಸಿರುವ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಹೆಸರನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆಯೆಂದು ಬೇಸರ ವ್ಯಕ್ತಪಡಿಸಿದರು.

ಐಗೂರು ಗ್ರಾಮಕ್ಕೆ ನೀರು ಸರಬರಾಜಿಗೆ ತಾನು ಅಡ್ಡಿಪಡಿಸುತ್ತಿರುವದಾಗಿ ಮಾಡಿರುವ ಆರೋಪಕ್ಕೆ ಉತ್ತರಿಸಿದ ಸೋಮಪ್ಪ, ತಾನು ಮಾದಾಪುರ ಗ್ರಾಮ ಪಂಚಾಯ್ತಿಯ ಸದಸ್ಯನಾಗಿದ್ದು, ತಮ್ಮ ಗ್ರಾಪಂನ ಕುಂಬೂರು ಕ್ಷೇತ್ರದಿಂದ ಪಂಚಾಯ್ತಿಯ ಒಪ್ಪಿಗೆ ಇಲ್ಲದೆ ನೆರೆಯ ಪಂಚಾಯ್ತಿಯ ಐಗೂರಿಗೆ ನೀರು ಸರಬರಾಜು ಮಾಡಲಾಗಿದೆ. ಒಂದು ಪಂಚಾಯ್ತಿಯಿಂದ ಮತ್ತೊಂದು ಪಂಚಾಯ್ತಿಗೆ ನೀರನ್ನು ನೀಡುವದಿದ್ದಲ್ಲಿ ಪಂಚಾಯ್ತಿ ಸಭೆಯಲ್ಲಿ ನಿರ್ಣಯವಾಗುವದು ಅತ್ಯವಶ್ಯ. ಇದಾವುದನ್ನು ಪರಿಗಣಿಸದೆ ನೀರು ಸರಬರಾಜಾಗಿರುವ ಬಗ್ಗೆ ತಾನು ಸ್ಥಳ ಪರಿಶೀಲನೆ ಮಾಡಿದ್ದೇನೆಯೇ ಹೊರತು, ಕುಡಿಯುವ ನೀರಿನ ಸರಬರಾಜಿಗೆ ಅಡ್ಡಿ ಮಾಡಿಲ್ಲ. ಇದೊಂದು ಪಂಚಾಯ್ತಿಗೆ ಸಂಬಂಧಿಸಿದ ವಿಚಾರವೆಂದು ಸ್ಪಷ್ಟಪಡಿಸಿದರು.

ಸಿದ್ದಾಪುರದ ಶ್ರೀ ನಾರಾಯಣಗುರು ಹಾಲ್‍ನಲ್ಲಿ ಇತ್ತೀಚೆಗೆ ತಮ್ಮ ಸಂಘಟನೆಯ ಹೆಸರನ್ನು ಬಳಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯಲ್ಲದೆ, ತಮ್ಮ ಸಂಘಟನೆಯ ಹೆಸರಿನಲ್ಲಿ ಅನಧಿಕೃತವಾಗಿ ಹಣವನ್ನು ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ತಕ್ಷಣ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೆÉೀಕೆಂದು ಸೋಮಪ್ಪ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾ ಉಪಾಧ್ಯಕ್ಷ ಪಿ.ಎಲ್. ಸುರೇಶ್, ಗೌರವಾಧ್ಯಕ್ಷ ಪಿ.ಬಿ. ಬಾಬು, ಪ್ರಧಾನ ಕಾರ್ಯದರ್ಶಿ ಕೆ. ಉಮೇಶ್, ಸಹ ಕಾರ್ಯದರ್ಶಿ ಹೆಚ್.ಎಸ್. ಮಧು, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಬಿ. ಮೋಣಪ್ಪ ಉಪಸ್ಥಿತರಿದ್ದರು.