ಸಿದ್ದಾಪುರ, ಏ. 19: ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವಿನೂತನ ಪ್ರಯೋಗವನ್ನು ಪ್ರಾರಂಭಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಕುಶಾಲನಗರ ವಲಯ ಅರಣ್ಯ ಹಾಗೂ ತಿತಿಮತಿ ವಲಯ ಅರಣ್ಯ ಪ್ರದೇಶದ ವ್ಯಾಪ್ತಿಗೆ ಒಳಪಡುವ ಮಾಲ್ದಾರೆ ಹಾಗೂ ತಿತಿಮತಿಯ ಚಿಕ್ಕರೇಷ್ಮೆ ಅರಣ್ಯ ವ್ಯಾಪ್ತಿಯಲ್ಲಿ ಇಲಾಖೆ ಕಾಮಗಾರಿ ಪ್ರಾರಂಭಿಸಿದ್ದು, ಹ್ಯಾಂಗಿಂಗ್ ಸೋಲಾರ್ ಫೆನ್ಸ್ ಹೆಸರಿನಲ್ಲಿ ಸ್ಟೈನ್‍ಲೆಸ್ ಸ್ಟೀಲ್ ತಂತಿಗಳನ್ನು ಬಳಸುವದರ ಮೂಲಕ ಸೋಲಾರ್ ಬೇಲಿಯನ್ನು ನಿರ್ಮಾಣ ಮಾಡಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆ ಸಿದ್ಧತೆ ಕೈಗೊಂಡಿದೆ.
ಕಾಡಾನೆಗಳು ಅರಣ್ಯದಿಂದ ನಾಡಿಗೆ ವಲಸೆ ಬರುವದನ್ನು ತಡೆಗಟ್ಟುವ ಉದ್ದೇಶದಿಂದ ಈ ಯೋಜನೆ ಕೈಗೊಳ್ಳಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆಯು ಪರಿಣಾಮಕಾರಿಯಾಗಿದ್ದು, ಅನೇಕ ಕಡೆಗಳಲ್ಲಿ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ. ಕಾಮಗಾರಿಯನ್ನು ಮೈಸೂರಿನ ಅಂಬರೀಶ್ ಗೌಡ ಎಂಬವರು ಗುತ್ತಿಗೆ ಪಡೆದುಕೊಂಡಿದ್ದು, ಅಂದಾಜು 24 ಕಿ.ಮೀ. ದೂರ ವ್ಯಾಪ್ತಿ ಕಾಡಾನೆ ಉಪಟಳ ಇರುವ ಪ್ರದೇಶದಲ್ಲಿ ಹ್ಯಾಂಗಿಂಗ್ ಸೋಲಾರ್ ಫೆನ್ಸ್ ಅಳವಡಿಸಲಾಗುವದೆಂದು ಅರಣ್ಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರತಿ ಒಂದು ಕಿ.ಮೀ.ಗೆ 2.80 ಲಕ್ಷ ವೆಚ್ಚ ತಗಲುತ್ತದೆ. ಶ್ರೀಲಂಕಾ ದೇಶದಲ್ಲಿ ಹ್ಯಾಂಗಿಂಗ್ ಸೋಲಾರ್ ಫೆನ್ಸ್ ಪ್ರಯೋಗವನ್ನು ಬಳಸಲಾಗಿದ್ದು, ಇದೀಗ ಅಂದಾಜು 15 ರಿಂದ 20 ಅಡಿ ಎತ್ತರದಲ್ಲಿ ಉಕ್ಕಿನ ಕಂಬ ನಿರ್ಮಾಣ ಮಾಡಿ ಅದಕ್ಕೆ ತಂತಿಗಳನ್ನು ಇಳಿಯಬಿಡಲಾಗಿದ್ದು, ನೆಲದಿಂದ ಕೊಂಚ ಮೇಲ್ಪಟದವರೆಗೂ ಸ್ಟೈನ್‍ಲೆಸ್ ತಂತಿಗಳನ್ನು ಬಿಡಲಾಗುತ್ತಿದೆ. - ವಾಸು