ಮಡಿಕೇರಿ, ಏ. 19: ತಾವು ಅಧಿಕೃತವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಸೇರಿದ್ದು, ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲವೆಂದು ಮಾಜಿ ಸಚಿವ ಯಂ.ಸಿ. ನಾಣಯ್ಯ ಸ್ಪಷ್ಟಪಡಿಸಿದ್ದಾರೆ. ಜೆಡಿಎಸ್ ಮುಖಂಡರು ಹಲವು ಸಂದರ್ಭಗಳಲ್ಲಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದು, ಜಾತ್ಯತೀತ ನಿಲುವಿನಿಂದ ತಾವು ಅಧಿಕೃತವಾಗಿ ಕಾಂಗ್ರೆಸ್ ಸೇರಿರುವದಾಗಿ ಪುನರುಚ್ಚ್ಚರಿಸಿದರು.
ತಮ್ಮ ಕೆಲವು ಬೆಂಬಲಿಗರು ಜೆಡಿಎಸ್‍ನಲ್ಲಿಯೇ ಉಳಿಯಲು ನಿರ್ಧಾರ ಕೈಗೊಂಡಿದ್ದಾಗಿ ಹೇಳುತ್ತಿರುವದು ಸುಳ್ಳೆಂದು ಅಭಿಪ್ರಾಯ ಪಟ್ಟಿರುವ ಯಂ.ಸಿ. ನಾಣಯ್ಯ, ತಮ್ಮ ನಿಲುವಿನಲ್ಲಿ ಯಾವದೇ ಗೊಂದಲವಿಲ್ಲವೆಂದು ಪ್ರತಿಕ್ರಿಯೆ ನೀಡಿದರು.
ತಟಸ್ಥ ನಿಲುವು : ಈ ನಡುವೆ ಜೆಡಿಎಸ್‍ನ ಕೆಲವರು ಪೊನ್ನಂಪೇಟೆಯಲ್ಲಿ ಎರಡು ದಿನದ ಹಿಂದೆ ಹಿರಿಯ ಮುಖಂಡ ಪುಚ್ಚಿಮಾಡ ಹರೀಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕಾಂಗ್ರೆಸ್ ಸೇರದೆ, ಜೆಡಿಎಸ್‍ನಲ್ಲೇ ಉಳಿಯುವ ತೀರ್ಮಾನ ಕೈಗೊಂಡಿರುವದಾಗಿ ಪಕ್ಷದ ಪ್ರಮುಖ ಎಸ್.ಎಂ. ಶ್ರೀನಿವಾಸ್ ಸ್ಪಷ್ಟಪಡಿಸಿದರು. ಪಕ್ಷದ ಅಭ್ಯರ್ಥಿ ಸಂಕೇತ್ ಪೂವಯ್ಯ ನಮ್ಮನ್ನು ಸಂಪರ್ಕಿಸದಿದ್ದರೆ, ಚುನಾವಣೆ ವೇಳೆ ತಟಸ್ಥರಾಗಿ ಜೆಡಿಎಸ್‍ನಲ್ಲೇ ಉಳಿಯಲು ನಿರ್ಧರಿಸಿರುವದಾಗಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು. ಪ್ರಮುಖರಾದ ಎಂ.ಟಿ. ಕಾರ್ಯಪ್ಪ, ದಯಾ ಚಂಗಪ್ಪ, ವಿ.ಎ. ವೀರಜ್, ಅಜಿತ್ ಸೇರಿದಂತೆ ಮೂವತ್ತಕ್ಕೂ ಅಧಿಕ ಪ್ರಮುಖರು ಸಭೆಯಲ್ಲಿ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿರುವದಾಗಿ ಅವರು ವಿವರಿಸಿದರು.