ಶನಿವಾರಸಂತೆ, ಏ. 19: ಸಮೀಪದ ದೊಡ್ಡಬಿಳಾಹ ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಮಹಿಳೆಯೊಬ್ಬರು ಕಾಡಾನೆ ಧಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

ಗ್ರಾಮದ ಪ್ರೇಮ್‍ಕುಮಾರ್ ಅವರ ಪತ್ನಿ ರಾಜಮ್ಮ (60) ಕಾಡಾನೆ ಧಾಳಿಗೆ ಸಿಲುಕಿದ ಮಹಿಳೆ. ಈಕೆ ಕೆ.ಟಿ. ಬಸವರಾಜ್ ಎಂಬವರ ಕಾಫಿ ತೋಟದಲ್ಲಿ ಇತರೆ ಕಾರ್ಮಿಕ ರೊಂದಿಗೆ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕಾಡಾನೆ ಧಾಳಿ ಮಾಡಿದೆ. ಕೆಳಗೆ ಬಿದ್ದ ರಾಜಮ್ಮ ಅವರ ಬಲಗಾಲನ್ನು ಕಾಡಾನೆ ತುಳಿದಿದ್ದು, ಮೂಳೆ ಮುರಿದಿದೆ. ಗ್ರಾಮಸ್ಥರ ಕೂಗಾಟಕ್ಕೆ ಕಾಡಾನೆ ಅಲ್ಲಿಂದ ಓಡಿಹೋಗಿದೆ. ಗಂಭೀರವಾಗಿ ಗಾಯಗೊಂಡ ರಾಜಮ್ಮ ಅವರನ್ನು ಗ್ರಾಮಸ್ಥರು ತಕ್ಷಣ ಶನಿವಾರಸಂತೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ವೈದ್ಯಾಧಿಕಾರಿ ಡಾ. ಗಿರೀಶ್ ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ಸಾಗಿಸಲಾಯಿತು. ಆರೋಗ್ಯ ಕೇಂದ್ರದಲ್ಲಿ ಜಮಾಯಿಸಿದ್ದ ದೊಡ್ಡಬಿಳಾಹ, ಕಿರುಬಿಳಾಹ ಹಾಗೂ ಚೆನ್ನಾಪುರ ಗ್ರಾಮಸ್ಥರು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಕೆ. ಕೊಟ್ರೇಶ್, ಉಪ ಅರಣ್ಯಾಧಿಕಾರಿ ಸತೀಶ್ ಹಾಗೂ ಸಿಬ್ಬಂದಿ ಆರೋಗ್ಯ ಕೇಂದ್ರಕ್ಕೆ ಆಗಮಿಸಿದಾಗ ಪ್ರತಿಭಟನೆ ನಡೆಸಿದರು.

3 ಗ್ರಾಮಗಳ ವ್ಯಾಪ್ತಿಯಲ್ಲಿ ಒಂದು ವರ್ಷದಿಂದ ಒಂಟಿ ಸಲಗವೊಂದು ದಾಂಧಲೆ ಮಾಡುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಬೆದರು ಗುಂಡಿ ಹಾಗೂ ಸೋಲಾರ್ ಬೇಲಿ ನಿರ್ಮಿಸಿದ್ದರೂ ಪ್ರಯೋಜನವಾಗಿಲ್ಲ. ಒಂಟಿ ಸಲಗವನ್ನು ಕಾಡಿಗಟ್ಟುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಸ್ಪಂದಿಸಲಿಲ್ಲ. ಇದೀಗ ಗಾಯಾಳು ರಾಜಮ್ಮ ಅವರಿಗೆ ತಕ್ಷಣ ಪರಿಹಾರ ನೀಡಬೇಕು. ರಕ್ಷಣೆಗಾಗಿ ಗುಂಡು ಹಾರಿಸಲು ಜಮೆ ಮಾಡಿರುವ ಬಂದೂಕುಗಳನ್ನು ವಾಪಾಸು ನೀಡಬೇಕು ಎಂದು ಗ್ರಾಮಸ್ಥರಾದ ಮುತ್ತೇಗೌಡ, ಬಿ.ಎಂ. ಪ್ರಕಾಶ್, ಎಂ.ಎಸ್. ರಾಜೇಗೌಡ, ಬಿ.ಎಂ. ವಿಜಯ್, ನಾಗೇಶ್, ಪ್ರಮುಖರಾದ ಎಂ.ವಿ. ಆದಿಲ್ ಪಾಶ, ಡಿ.ಪಿ ಬೋಜಪ್ಪ, ಸಿ.ಜೆ. ಗಿರೀಶ್ ಹಾಗೂ ನೂರಾರು ಮಂದಿ ಗ್ರಾಮಸ್ಥರು ಆಗ್ರಹಿಸಿದರು. ಅರಣ್ಯಾಧಿಕಾರಿ ಕೆ. ಕೊಟ್ರೇಶ್ ಮಾತನಾಡಿ, ಕಾಡಾನೆ ಧಾಳಿಗೆ ಸಿಲುಕಿ ಗಾಯಗೊಂಡ ಮಹಿಳೆಯ ಆಸ್ಪತ್ರೆ ಖರ್ಚು ವೆಚ್ಚವನ್ನು ಇಲಾಖೆ ವತಿಯಿಂದ ಭರಿಸಲಾಗು ವದು. ಮೇಲಧಿಕಾರಿ ಅವರಿಗೆ ವರದಿ ಸಲ್ಲಿಸಿ ಕ್ರಮ ಕೈಗೊಳ್ಳಲಾಗುವದು. ಪೊಲೀಸ್ ಠಾಣೆಯಲ್ಲಿ ಜಮೆ ಮಾಡಿ ರುವ ಬಂದೂಕುಗಳನ್ನು ವಾಪಾಸು ಕೊಡಿಸುವ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಸಮಾಲೋಚನೆ ಮಾಡ ಲಾಗುವದು ಎಂದು ಭರವಸೆಯಿತ್ತರು.