ವೀರಾಜಪೇಟೆ, ಏ. 19 : ಶ್ರೀಮಂಗಲ ಬಳಿಯ ಬಾಡಗರಕೇರಿ ಗ್ರಾಮದ ಬಲ್ಯಮೀದೇರಿರ ಅಮೇಶ ಎಂಬಾತನು ಅದೇ ಗ್ರಾಮದ ಕಾರ್ಯಪ್ಪ ಎಂಬವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಪ್ರಕರಣದಲ್ಲಿ ವಿಚಾರಣೆ ನಡೆಸಿದ ಇಲ್ಲಿನ ಎರಡನೇ ಅಪರ ಮತ್ತು ಸೆಷನ್ಸ್ ನ್ಯಾಯಾಧೀಶ ಮೋಹನ್ ಪ್ರಭು ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ರೂ 30,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಕಳೆದ ತಾ. 14.3.2016ರಂದು ಬಾಡಗರಕೇರಿ ಗ್ರಾಮದ ಅಮೇಶ (35) ಎಂಬಾತ ಮದ್ಯಪಾನ ಮಾಡಿ ಕಾರ್ಯಪ್ಪ ಅವರ ಮನೆ ಮುಂದೆ ಜೋರಾಗಿ ಕೂಗಾಡುತ್ತಿದ್ದಾಗ ಕಾರ್ಯಪ್ಪ ಅವರ ಸಹೋದರ ಕಾರ್ಯಪ್ಪ ಮಲಗಿದ್ದಾರೆ ನಿಶ್ಯಬ್ದ ಕಾಪಾಡುವಂತೆ ಹೇಳಿದಾಗ, ಜಗಳ ತೆಗೆದು ಮನೆಯೊಳಗೆ ತೆರಳಿ ಕತ್ತಿಯಿಂದ ಕಾರ್ಯಪ್ಪನ ಬಲದ ಕೈಗೆ ಹಾಗೂ ದೇಹದ ಇತರ ಭಾಗಗಳಿಗೆ ಕಡಿದು ಗಾಯಗೊಳಿಸಿದ್ದ ಕಾರ್ಯಪ್ಪನನ್ನು ಚಿಕಿತ್ಸೆಗಾಗಿ ಗೋಣಿಕೊಪ್ಪಲು ಆಸ್ಪತ್ರೆಗೆ ಸೇರಿಸಿದಾಗ ಸಾವನ್ನಪ್ಪಿದ್ದರಿಂದ ಶ್ರೀಮಂಗಲ ಪೊಲೀಸರು ಅಮೇಶನ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು. ಕುಟ್ಟ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಸಿ.ಎನ್.ದಿವಾಕರ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.