ಮಡಿಕೇರಿ, ಏ. 19: 2018ರಲ್ಲಿ ಎದುರಾಗಿರುವ ರಾಜ್ಯ ವಿಧಾನಸಭಾ ಚುನಾವಣೆ ನಾಡಿನ ಜನತೆ ಈ ಹಿಂದೆ ಕಂಡು ಕೇಳರಿಯದಂತಿದೆ. ಕರುನಾಡಿನಲ್ಲಿ ಈ ತನಕ ನಡೆದಿರುವ ಯಾವದೇ ಚುನಾವಣೆಗಳು ಈ ರೀತಿಯಾದ ತಿರುವು ಪಡೆದಿರಲಿಲ್ಲವೆನ್ನಬಹುದೇನೋ. ಈಗಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸುತ್ತಿರುವ ಜನಸಾಮಾನ್ಯರು, ಮತದಾರರು ಇಂತಹ ರಾಜಕೀಯ ಮೇಲಾಟದ ಬದಲಾಗಿ ಮಿಲಿಟರಿ ಆಡಳಿತವೇ ಒಳಿತೇನೋ ಎಂದು ಮಾತನಾಡಿಕೊಳ್ಳುವಂತಾಗಿದೆ.
ಚುನಾವಣೆ ಬರುವ ಸಂದರ್ಭದಲ್ಲಿ ಆಯಾ ಪಕ್ಷಗಳ ಟಿಕೆಟ್ ಬಯಸುವ ಸಾಕಷ್ಟು ಮಂದಿ ಇರುವದು ಸಹಜ. ಅದರಲ್ಲೂ ಆಡಳಿತಾರೂಢ ಪಕ್ಷ ಹಾಗೂ ಮುಂದೆ ಅಧಿಕಾರ ಹಿಡಿಯಬಹುದೆಂದು ಭಾವಿಸುವ ಇತರ ವಿರೋಧ ಪಕ್ಷಗಳ ಟಿಕೆಟ್ ಪಡೆಯುವ ನಿಟ್ಟಿನಲ್ಲಿಯೂ ಹಲವಾರು ಮಂದಿ ಆಕಾಂಕ್ಷಿಗಳಾಗಿರುತ್ತಾರೆ. ಇವರೊಂದಿಗೆ ಇನ್ನು ಕೆಲವರು ಹೊಸ ಉದ್ದೇಶವಿರಿಸಿಕೊಂಡೋ ಅಥವಾ ಸ್ವಾರ್ಥ ಪರತೆಯಿಂದಲೋ ತಾವೂ ಸ್ಪರ್ಧಿಗಳೇ ಎಂದು ಬಿಂಬಿಸಿಕೊಳ್ಳುತ್ತಾರೆ. ಏನೇ ಆದರೂ ನಿಗದಿತ ಕ್ಷೇತ್ರದಿಂದ ಜಯಗಳಿಸುವದು ಮಾತ್ರ ಕೇವಲ ಓರ್ವ ಅಭ್ಯರ್ಥಿ ಮಾತ್ರ ಎಂಬದು ಎಲ್ಲರಿಗೂ ಅರಿವಿದೆ.
ಆದರೆ, ಪ್ರಸ್ತುತ ಎದುರಾಗಿರುವ ಚುನಾವಣೆಯನ್ನು ಅವಲೋಕಿಸಿದರೆ, ಕರ್ನಾಟಕದಲ್ಲಿ ಈ ಬಾರಿ ಏನಾಗುತ್ತಿದೆ ಎಂಬ ಆತಂಕ ಮೂಡುತ್ತದೆ. ಕೇವಲ ಒಂದು ಪಕ್ಷ ಮಾತ್ರವಲ್ಲ ಬಹುತೇಕ ಎಲ್ಲಾ ಪಕ್ಷಗಳಲ್ಲೂ ಒಂದು ರೀತಿಯ ವಿಚಿತ್ರ ಬೆಳವಣಿಗೆ ಕಂಡು ಬರುತ್ತಿದೆ. ಹಲವಾರು ವರ್ಷದಿಂದ ಒಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಯಾವ ಪಕ್ಷವಾದರೂ ಸರಿ ಪಕ್ಷಾಂತರಿಗಳಾಗಿ ಬಿಡುತ್ತಾರೆ. ಇನ್ನು ಕೆಲವರು ಬಂಡಾಯವಾಗಿ ಸ್ಪರ್ಧಿಸುತ್ತಾರೆ ಮತ್ತು ಹಲವರು ಸದ್ದಿಲ್ಲದೆ, ಒಳಗಿಂದೊಳಗೇ ಪರಸ್ಪರ ಕಾಲೆಳೆಯುತ್ತಾರೆ.
(ಮೊದಲ ಪುಟದಿಂದ) ನಿಜವಾಗಿ ರಾಜ್ಯದ ಜನತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಬೇಕಿರುವದು ಐದು ವರ್ಷಗಳ ನಿರ್ದಿಷ್ಟವಾದ, ನಿಖರ ದೃಷ್ಟಿಕೋನದ ಜನಪರವಾದ ಆಡಳಿತ. ಒಂದು ಬಾರಿ ಆಡಳಿತದಲ್ಲಿರುವ ಪಕ್ಷ ತನ್ನ ಕೆಲಸವನ್ನು ಸುಸೂತ್ರವಾಗಿ ನಿರ್ವಹಿಸದಿದ್ದರೆ, ಆ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವ ಅಥವಾ ಉತ್ತಮ ಕೆಲಸ ಮಾಡಿದ್ದರೆ ಮತ್ತೆ ಅಧಿಕಾರಕ್ಕೆ ತರುವ ಅಧಿಕಾರ ಇರುವದು ಮತದಾರರಿಗೆ.
ಆದರೆ ಪ್ರಸ್ತುತ ಒಂದು ಪಕ್ಷದ ಅಭ್ಯರ್ಥಿಗೆ ಮತ್ತೊಂದು ಪಕ್ಷ ‘ಗಾಳ’ ಹಾಕುವದು, ಟಿಕೆಟ್ ಸಿಗದಿದ್ದರೆ ಆ ಬಂಡವಾಳವನ್ನೇ ಬಳಸಿಕೊಂಡು ಆಯಾ ಪಕ್ಷದ ಬುಡವನ್ನೇ ಅಲ್ಲಾಡಿಸುವದು, ಜಾತಿ, ಜಾತಿಗಳ ಮಧ್ಯೆ ವಿಷಬೀಜ ಬಿತ್ತುವದು, ತಮ್ಮ ಗೆಲುವಿಗೆ ಮತ್ತೊಬ್ಬರನ್ನು ಕಣಕ್ಕೆ ಇಳಿಸಿ ಶತಾಯ ಗತಾಯವಾಗಿ ಅಧಿಕಾರ ಪಡೆಯಲು ಯತ್ನಿಸುವದು ಸೇರಿದಂತೆ ಒಂದಲ್ಲ್ಲಾ ಒಂದು ಬೆಳವಣಿಗೆಗಳು ದಿನಂಪ್ರತಿ ಕಂಡು ಬರುತ್ತಿದೆ. ಆದರೆ, ಇವೆಲ್ಲಾ ನಡೆಯುತ್ತಿರುವದು ಪಾಪದ ಮತದಾರರಿಂದಲ್ಲ ಕೇವಲ ‘ನಾಯಕರು’ ಎಂಬ ಪಟ್ಟ ಗಿಟ್ಟಿಸಿಕೊಂಡಿರುವವರಿಂದ. ಟಿಕೆಟ್ ಸಿಕ್ಕಿದವರಿಗೆ ಈ ಪರಿಸ್ಥಿತಿ. ಸೀರುಂಡೆಯಂತೂ ಆಗಿರದು ಇನ್ನು ಟಿಕೆಟ್ ಸಿಗದವರು ಬಂಡಾಯ ಸ್ಪರ್ಧೆಯ ‘ಬಾಂಬ್’ ಸಿಡಿಸುತ್ತಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಿರುವ ಸಾಮಾನ್ಯ ಪ್ರಜೆಗಳು ವಾಕರಿಕೆ ಬಂದಂತಹ ಸನ್ನಿವೇಶ ಎದುರಿಸುತ್ತಿದ್ದಾರೆ. ರಾಜ್ಯದ ವಿದ್ಯುನ್ಮಾನ ಮಾಧ್ಯಮಗಳನ್ನು ಈ ಸಂದರ್ಭದಲ್ಲಿ ದಿನಂಪ್ರತಿ ವೀಕ್ಷಿಸಿದರೇ ತಲೆ ಚಿಟ್ಟು ಹಿಡಿಯುತ್ತದೆ ಎಂದು ಹಲವರು ಮಾತನಾಡಿ ಕೊಳ್ಳುವಂತಾಗಿದೆ. ಮತದಾನ ನಿಗದಿಯಾಗಿರುವ ತನಕ ಯಾರು ಏನೇ ಮಾಡಿಕೊಳ್ಳಲಿ. ಆ ದಿನದಂದು ಇಷ್ಟ ಬಂದವರಿಗೆ ಮತ ಚಲಾಯಿಸುವದು ಅಥವಾ ಯಾರನ್ನೂ ಇಷ್ಟವಿಲ್ಲದಿದ್ದ ಪಕ್ಷದಲ್ಲಿ ಚುನಾವಣಾ ಆಯೋಗ ಮಾಡಿರುವ ಕ್ರಮದಂತೆ ‘ನೋಟಾ’ಕ್ಕೆ ಮತ ಚಲಾಯಿಸುವದೇ ಉತ್ತಮ ಎಂಬ ನಿರ್ಧಾರಕ್ಕೆ ಬಂದಂತಿರುವ ಸಾಕಷ್ಟು ಜನರು ರಾಜಕೀಯದ ಆಸಕ್ತಿಯನ್ನೇ ಕಳೆದುಕೊಂಡಂತಿದ್ದಾರೆ.
ಕೊಡಗಿನಲ್ಲೂ ಹೊಸ ಅನುಭವ
ರಾಜ್ಯದ ಇತರೆಡೆಗಳಿಗೆ ಹೋಲಿಸಿದಲ್ಲಿ ಪುಟ್ಟ ಜಿಲ್ಲೆಯಾದ ಕೊಡಗಿನಲ್ಲಿ ಈ ತನಕ ಈ ಮೇಲಿನ ಚಿತ್ರಣಗಳನ್ನು ಜನತೆ ಕಂಡಿರಲಿಲ್ಲ. ಇದೀಗ ಕೊಡಗು ಜಿಲ್ಲೆಯೂ ಹಾಸ್ಯಾಸ್ಪದವಾದ ರಾಜಕೀಯ ಬೆಳವಣಿಗೆಗಳಿಗೆ ಕಾರಣ ವಾಗುತ್ತಿರುವದು ಪ್ರಬುದ್ಧರನ್ನು ಚಿಂತೆಗೀಡುಮಾಡಿದಂತಿದೆ. ವಿವಿಧ ಪಕ್ಷಗಳನ್ನು ಬೆಂಬಲಿಸುವವರು, ಯಾರು ಗೆದ್ದರೆ ಲಾಭ ಯಾರು ಸೋತರೆ ತಮಗೆ ಉಪಕಾರ ಎಂದು ಚಿಂತಿಸುವ ಮಂದಿ ಹಾಗೂ ಮಾಧ್ಯಮದವರನ್ನು ಹೊರತುಪಡಿಸಿದರೆ ಜನಸಾಮಾನ್ಯರು ಕೊಡಗಿನ ಅಲ್ಲಲ್ಲಿ ನಡೆಯುತ್ತಿರುವ ಧಾರ್ಮಿಕ ಉತ್ಸವಗಳು, ಶುಭ ಸಮಾರಂಭಗಳು ಹಾಗೂ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ತಲ್ಲೀನರಾಗುವ ಮೂಲಕ ರಾಜಕೀಯ ಆಸಕ್ತಿ ಕಳೆದು ಕೊಳ್ಳುತ್ತಿರುವದು ಪ್ರಸ್ತುತದ ವಿದ್ಯಮಾನವಾಗಿ ಗೋಚರಿಸುತ್ತಿದೆ. ಹೀಗಾಗಿ ಟಿಕೆಟ್ ಲಭ್ಯವಾದವರು ತಮಗೆ ‘ಸೀರುಂಡೆ’ ಸಿಕ್ಕಿದೆ ಎಂದು ಭಾವಿಸುವದೂ ಬೇಡ. ಬಂಡಾಯದ ಬಾವುಟ ಹಾರಿಸುತ್ತಿರುವವರು ಹೀಗೆಯೇ ನಡೆದುಕೊಳ್ಳುತ್ತಾರೆ ಎಂದು ಊಹಿಸುವದೂ ಬೇಡ ಎಂದು ಜನರು ಮಾತನಾಡಿ ಕೊಳ್ಳುತ್ತಿದ್ದಾರೆ.