ಗೋಣಿಕೊಪ್ಪಲು, ಏ.19: ಕಳೆದ 7 ವರ್ಷಗಳಿಂದ ಯರವ ಸಮಾಜದ ಆಶ್ರಯದಲ್ಲಿ ನಡೆದುಕೊಂಡು ಬರುತ್ತಿರುವ ಕ್ರೀಡಾಕೂಟಕ್ಕೆ ಗುರುವಾರದಂದು ವಿಧ್ಯುಕ್ತ ಚಾಲನೆ ನೀಡಲಾಯಿತು. ತಾಲೂಕಿನ ವಿವಿಧ ಭಾಗಗಳಿಂದ ಯರವ ಸಮುದಾ ಯದ ಯುವಕ ಯುವತಿಯರು ಅತ್ಯಂತ ಉತ್ಸಾಹದಲ್ಲಿ ಪಾಲ್ಗೊಂಡು ಗಮನ ಸೆಳೆದರು. ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ಕ್ರೀಡಾ ಕೂಟ ನಡೆಯಲಿದೆ. ಸಮಾಜ ಬಾಂಧವರು ಸಾಂಪ್ರದಾಯಿಕವಾಗಿ ಗುರು ಹಿರಿಯರಿಗೆ, ದೇವಾನು ದೇವತೆಗಳಿಗೆ ಮುಂಜಾನೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಆರಂಭಿಸಿದರು. ಅತಿಥಿಗಳನ್ನು ಯರವ ಸಾಂಪ್ರದಾಯಿಕ ದುಡಿಕೊಟ್ಟಿನ ಮೂಲಕ ಮೈದಾನಕ್ಕೆ ಕರೆತಂದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಂiÀi ಸಮಿತಿಯ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಮಾತನಾಡಿ, ಯರವ ಸಮಾಜವು ಈ ರೀತಿಯ ಕ್ರೀಡೆಯನ್ನು ನಡೆಸುತ್ತಿರುವದು ಶ್ಲಾಘನೀಯ. ಹಿಂದುಳಿದ ಸಮಾಜ ಬಾಂಧವರಿಗೆ ಸರ್ಕಾರ ಸ್ಪಂದಿಸುವಂತಾಗಬೇಕು. ಗ್ರಾಮೀಣ ಕ್ರೀಡೆಗಳು ನಶಿಸುತ್ತಿದ್ದು, ಇದನ್ನು ಉಳಿಸುವ ಕೆಲಸವನ್ನು ಸಮಾಜ ಬಾಂಧÀವರು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ದಾನಿಗಳು, ಜಯಲಕ್ಷ್ಮಿ ಜ್ಯುವೆಲ್ಲರಿ ಮಾಲೀಕ ಎಂ.ಜಿ. ಮೋಹನ್
(ಮೊದಲ ಪುಟದಿಂದ) ಮಾತನಾಡಿ ಅಳಿವಿನ ಅಂಚಿನಲ್ಲಿರುವ ಯರವ ಸಮುದಾಯವನ್ನು ರಕ್ಷಿಸುವ ಜವಾಬ್ದಾರಿ ಈ ನಾಡಿನ ಪ್ರತಿಯೊಬ್ಬನ ಕರ್ತವ್ಯವಾಗಿದೆ. ಶಿಸ್ತು ಬದ್ಧವಾಗಿ ಕ್ರೀಡೆಯನ್ನು ಆಯೋಜಿಸಲಾಗಿದೆ. ವಿದ್ಯಾಭ್ಯಾಸಕ್ಕೆ ಸಮಾಜ ಬಾಂಧವರು ಒತ್ತು ನೀಡಬೇಕು. ವರ್ಷವಿಡೀ ದುಡಿಯುವ ಕಾಯಕದ ನಡುವೆ ಇಂತಹ ಕ್ರೀಡೆ ನಡೆಸುವ ಮೂಲಕ ಒಂದೆಡೆ ಸೇರುತ್ತಿರುವದು ಉತ್ತಮ ಬೆಳವಣಿಗೆ ಎಂದರು. ಕಾನೂರು ತಾಲೂಕು ಪಂಚಾಯ್ತಿ ಸದಸ್ಯರಾದ ವೈ.ಎಂ.ಪ್ರಕಾಶ್ ಯರವ ಭಾಷೆಯಲ್ಲಿಯೇ ತಮ್ಮ ಭಾಷಣವನ್ನು ಆರಂಭಿಸಿ ನೆರೆದಿದ್ದ ಯರವ ಸಮಾಜದ ಬಾಂಧವರಿಗೆ ಶುಭ ಹಾರೈಸಿದರು. ಭಯದ ವಾತಾವರಣದಲ್ಲಿ ಬದುಕನ್ನು ಕಂಡಿದ್ದ ನಾವು ಇಂದು ಎಲ್ಲರೊಂದಿಗೂ ಮುಕ್ತವಾಗಿ ಬೆರೆಯುವ ಅವಕಾಶ ಲಭ್ಯವಾಗಿದೆ. ನಮ್ಮ ಸಂಸ್ಕøತಿಯೊಂದಿಗೆ ವಿದ್ಯಾಭ್ಯಾಸಕ್ಕೆ ಗಮನ ಹರಿಸಬೇಕೆಂದರು.
ಸಭೆಯ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಯರವ ಸಮಾಜದ ಅಧ್ಯಕ್ಷ ಶಾಂತಕುಮಾರ್, ಮುಂದಿನ ವರ್ಷದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳುವ ತಂಡಗಳು ನಮ್ಮ ಜಮ್ಮಾ ಹೆಸರಿನ ಮನೆತನದ ಹೆಸರಿನಲ್ಲಿಯೇ ನೋಂದಾವಣೆ ಮಾಡಿಕೊಂಡು ನಮ್ಮ ಜನಾಂಗವನ್ನು ಮುನ್ನಡೆಸಲು ಸಹಕರಿಸಬೇಕು. ಸರ್ಕಾರ ಮುಂದಿನ ಸಾಲಿನಿಂದ ನಮ್ಮನ್ನು ಗುರುತಿಸಿ ಕ್ರೀಡೆಗೆ ಅನುದಾನ ಬಿಡುಗಡೆ ಮಾಡಬೇಕು. ಕಳೆದ 7 ವರ್ಷಗಳಿಂದ ದಾನಿಗಳು ನೀಡುತ್ತಿರುವ ಸಹಾಯವನ್ನೇ ನಂಬಿಕೊಂಡು ಕ್ರೀಡೆಯನ್ನು ನಡೆಸುತ್ತಿದ್ದೇವೆ. ಜನಾಂಗದ ಒಗ್ಗಟ್ಟಿಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಯರವ ಸಮಾಜದ ಗುರುಗಳಾದ ಮಣಿ, ದೈಯದಹಡ್ಲುವಿನ ಮುಖಂಡರಾದ ಬಸವ, ಹಿರಿಯರಾದ ಚೋಮಿ, ನಾಗಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯರವ ಸಮಾಜದ ಕಾರ್ಯದರ್ಶಿ ಸಂಜೀವ ಸ್ವಾಗತಿಸಿದರು. ಸಂಚಾಲಕ ಸಿದ್ದಪ್ಪ ಕಾರ್ಯಕ್ರಮ ನಿರೂಪಿಸಿ, ಸದಸ್ಯ ರವಿ ಪ್ರಾರ್ಥಿಸಿ, ನಿತಿನ್ ವಂದಿಸಿದರು. ಈ ಬಾರಿ 60 ತಂಡಗಳು ನೊಂದಾವಣೆಗೊಂಡಿವೆ. ಸಮಾರೋಪ ಸಮಾರಂಭವು ತಾ. 22 ರಂದು ನಡೆಯಲಿದೆ. -ಜಗದೀಶ್