ಗೋಣಿಕೊಪ್ಪಲು, ಏ.19: ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಎದುರಾದರೂ ಇದನ್ನು ಧೈರ್ಯದಿಂದ ಎದುರಿಸಲು ಸಜ್ಜಾಗಿದ್ದೇನೆಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಎಂಎಲ್‍ಸಿ ಸಿ.ಎಸ್.ಅರುಣ್ ಮಾಚಯ್ಯ ಕೋಣನಕಟ್ಟೆಯ ತಮ್ಮ ನಿವಾಸದಲ್ಲಿ ‘ಶಕ್ತಿ’ಗೆ ವಿಶೇಷ ಸಂದರ್ಶನ ನೀಡಿ ಅಭಿಪ್ರಾಯ ಹಂಚಿಕೊಂಡರು.‘ಶಕ್ತಿ’: ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯ ಬಗ್ಗೆ ನಿಮ್ಮ ಉತ್ತರವೇನು.?ಅರುಣ್ ಮಾಚಯ್ಯ: ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಪ್ರಾದೇಶಿಕ ಪಕ್ಷ ಜೆಡಿಎಸ್‍ನ್ನು ಅಲ್ಲಗಳೆಯುವಂತಿಲ್ಲ. ಸ್ಪರ್ಧೆಗೆ ನಾನು ಸಿದ್ಧನಿದ್ದೇನೆ. ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರು ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.‘ಶಕ್ತಿ’: ಕೊಡಗಿನ ಸೂಕ್ಷ್ಮ ಪರಿಸರ ವಿಚಾರದಲ್ಲಿ ನಿಮ್ಮ ನಿಲುವೇನು.?
ಅರುಣ್ ಮಾಚಯ್ಯ: ಕೊಡಗಿನ ಸೂಕ್ಷ್ಮ ಪರಿಸರ ತಾಣ, ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖಿಸಿದ ಮತ್ತು ಬಫರ್ ಜೋನ್ ಈ ವಿಚಾರದಲ್ಲಿ ರಾಜಕೀಯ ರಹಿತವಾಗಿ ಹೋರಾಟದ ಮುಂಚೂಣಿ ವಹಿಸಿದ್ದಲ್ಲದೆ ಪರಿಸರವಾದಿಗಳನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡಿರುತ್ತೇನೆ. ಇದನ್ನು ಶೂನ್ಯ ಕಿ.ಮೀ.ಗೆ ಇಳಿಸಲು ಎಲ್ಲರ ಒತ್ತಾಯವಿದೆ.‘ಶಕ್ತಿ’: ಕೊಡಗಿನ ರೈಲು ಮಾರ್ಗ ವಿಚಾರದಲ್ಲಿ ಅಭಿಪ್ರಾಯವೇನು.?
ಅರುಣ್ ಮಾಚಯ್ಯ: ಈಗಾಗಲೇ ಕುಶಾಲನಗರದವರೆಗೆ ರೈಲು ಮಾರ್ಗಕ್ಕೆ ಹಸಿರು ನಿಶಾನೆ ದೊರಕಿದೆ. ದ.ಕೊಡಗಿನ ಮೂಲಕ ಹಾದು ಹೋಗುವ ರೈಲು ಮಾರ್ಗಕ್ಕೆ ನನ್ನ ವಿರೋಧವಿದೆ. ಈ ಭಾಗದಿಂದ ರೈಲು ಮಾರ್ಗ ಹೋಗಲು ವೈನಾಡಿನ ಸಂಸದರ ವಿರೋಧವೂ ಕಂಡು ಬಂದಿದೆ. ಇದೊಂದು ಚರ್ಚೆಯ ವಿಷಯವಾಗಬೇಕು. ಜನರ ಧ್ವನಿಯಾಗಿ ಕೆಲಸ ಮಾಡುವೆ.
‘ಶಕ್ತಿ’: ಕ್ಷೇತ್ರದ ಜ್ವಲಂತ ಸಮಸ್ಯೆಗಳ ನಿಮ್ಮ ನಿಲುವೇನು.?
ಅರುಣ್ ಮಾಚಯ್ಯ: ಕ್ಷೇತ್ರದಲ್ಲಿ ಅನೇಕ ಜ್ವಲಂತ ಸಮಸ್ಯೆಗಳು ಇರುವದನ್ನು ಮನಗಂಡಿದ್ದೇನೆ. ಗಾರ್ಬೇಜ್ ಮುಕ್ತವಾಗಿ ಮಾಡಬೇಕೆಂಬ ಭಯಕೆ ನನ್ನದು ಪರಿಸರ, ಕಲೆ, ಸಂಸ್ಕøತಿ, ಆಚಾರ - ವಿಚಾರಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ.
‘ಶಕ್ತಿ’: ಪೊನ್ನಂಪೇಟೆ ಹೊಸ ತಾಲೂಕು ರಚನೆಯ
(ಮೊದಲ ಪುಟದಿಂದ) ಬಗ್ಗೆ ಹಿನ್ನಡೆ ಯಾಕಾಯ್ತು.?
ಅರುಣ್ ಮಾಚಯ್ಯ: ಪೊನ್ನಂಪೇಟೆ ಹೊಸ ತಾಲೂಕು ರಚನೆಗೆ 2008ರಲ್ಲಿ ಅಧಿಕಾರದಲ್ಲಿದ್ದ ಜನಪ್ರತಿನಿಧಿಗಳು ಸ್ಪಂದಿಸಲಿಲ್ಲ. ಹುಂಡೇಕರ್ ನೀಡಿದ ವರದಿಯಲ್ಲಿ ಕಾವೇರಿ, ಪೊನ್ನಂಪೇಟೆ ತಾಲೂಕು ರಚನೆಯ ಬಗ್ಗೆ ಯಾವದೇ ಉಲ್ಲೇಖವಿರುವದಿಲ್ಲ. ಹೋರಾಟಕ್ಕೆ ಹಿನ್ನಡೆಯಾಗಿರುವದು ಒಪ್ಪಿ ಕೊಳ್ಳುತ್ತೇನೆ. ಮುಂದೆ ಹೋರಾಟದ ಮೂಲಕ ತಾಲೂಕು ಪಡೆದೇ ತೀರುತ್ತೇನೆ.
‘ಶಕ್ತಿ’: ಕಾಂಗ್ರೆಸ್‍ನ ಬಿ.ಟಿ. ಪ್ರದೀಪ್ ಸೋಲಲು ತಾವೇ ಕಾರಣ ಎಂಬ ಗಂಭೀರ ಆರೋಪಕ್ಕೆ ನಿಮ್ಮ ಉತ್ತರ.?
ಅರುಣ್ ಮಾಚಯ್ಯ: ದಿ. ಬಿ.ಟಿ. ಪ್ರದೀಪ್ ಅವರ ಸೋಲಿಗೆ ನಾನು ಖಂಡಿತ ಕಾರಣನಲ್ಲ. ನನಗೆ ನೀಡಿದ ಜವಾಬ್ದಾರಿಯ ಬೂತ್‍ಗಳಲ್ಲಿ ಹೆಚ್ಚಿನ ಮತಗಳನ್ನು ಪಡೆದಿದ್ದೇವೆ. ಈ ಬಗ್ಗೆ ಕೇವಲ ಊಹಪೋಹ ಮಾತುಗಳು ಕೇಳಿ ಬಂದಿದೆ. ಅವರಿಗೆ ನಾಪೊಕ್ಲು ಬಾಕ್‍ನಲ್ಲಿಯೇ ಹಿನ್ನಡೆಯಾಗಿದೆ. ಈ ಬಗ್ಗೆ ರಾಜ್ಯ ವರಿಷ್ಠರು ಸಂಪೂರ್ಣ ವರದಿಯನ್ನು ತರಿಸಿಕೊಂಡ ನಂತರ ಅವರಿಗೂ ಸತ್ಯಾಂಶ ಮನವರಿಕೆ ಯಾಗಿದೆ. ಆದ್ದರಿಂದಲೇ ನಾನು ಈ ಬಾರಿಯ ಚುನಾವಣೆಯ ಅಭ್ಯರ್ಥಿ ಯಾಗಲು ಅವಕಾಶವಾಗಿದೆ.
‘ಶಕ್ತಿ’: ಈ ಬಾರಿ ಟಿಕೆಟ್ ಸಿಗಲು ಕಾರಣವೇನು.?
ಅರುಣ್ ಮಾಚಯ್ಯ: ಕ್ಷೇತ್ರದಲ್ಲಿ ನಾನು ಕಾಂಗ್ರೆಸ್‍ನ ಹಿರಿಯ ಸದಸ್ಯನಾಗಿದ್ದೇನೆ. ಹಿರಿತನವೇ ನನಗೆ ವರದಾನವಾಗಿದೆ. ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಹೆಚ್ಚಿನ ಮತಗಳನ್ನು ಪಡೆದಿದ್ದೇನೆ. ಪಕ್ಷಕ್ಕೆ ಸಲ್ಲಿಸಿದ ನಿರಂತರ ಸೇವೆಯನ್ನು ಪಕ್ಷದ ವರಿಷ್ಠರು ಗುರುತಿಸಿದ್ದಾರೆ. ಗೆಲ್ಲುವ ಅಭ್ಯರ್ಥಿಗೆ ಈ ಬಾರಿ ಟಿಕೆಟ್ ನೀಡಿದ್ದಾರೆ.
‘ಶಕ್ತಿ’: ಟಿಪ್ಪು ಜಯಂತಿಯ ಬಗ್ಗೆ ನಿಮ್ಮ ಸ್ಪಷ್ಟ ಅಭಿಪ್ರಾಯವೇನು.?
ಅರುಣ್ ಮಾಚಯ್ಯ: ಟಿಪ್ಪು ಜಯಂತಿ ಉಳಿದ ಜಯಂತಿ ಯಂತೆಯೇ ಇದೊಂದು ಸರ್ಕಾರಿ ಕಾರ್ಯಕ್ರಮ ರಾಜ್ಯದಲ್ಲಿ ಹಲವು ಜಯಂತಿಗಳು ನಡೆದಿವೆÉ. ಜಿಲ್ಲೆಯಲ್ಲಿಯೂ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಎಲ್ಲರೂ ಸಾಮರಸ್ಯದಿಂದ ಜೀವನ ಸಾಗಿಸಬೇಕು. ಜಾತಿ, ಜನಾಂಗದ ಮಧ್ಯೆ ಕಂದಕಗಳು ಏರ್ಪಡಬಾರದು.
“ಶಕ್ತಿ’: ಕ್ಷೇತ್ರದ ಪ್ರಚಾರಕ್ಕೆ ರಾಜ್ಯ, ರಾಷ್ಟ್ರ ನಾಯಕರ ಆಗಮನವಿದೆಯೇ.?
ಅರುಣ್ ಮಾಚಯ್ಯ: ಜಿಲ್ಲೆಗೆ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಆಗಮನದ ನಿರೀಕ್ಷೆಯಲ್ಲಿದ್ದೇವೆ. ಈ ಸಂದರ್ಭ ರಾಜ್ಯ ನಾಯಕರು ರಾಷ್ಟ್ರ ನಾಯಕರು ಆಗಮಿಸಲಿದ್ದಾರೆ. ಕ್ಷೇತ್ರದ ಪ್ರಚಾರಕ್ಕೆ ಆಗಮಿಸುವಂತೆ ಮನವಿಯನ್ನು ಮಾಡಿಕೊಂಡಿದ್ದೇವೆ. ನಾಯಕರು ಬರುವದರಿಂದ ಕಾರ್ಯಕರ್ತರಲ್ಲಿ ಹೆಚ್ಚಿನ ಹುರುಪು ತುಂಬಲು ಅನುಕೂಲವಾಗಲಿದೆ.
‘ಶಕ್ತಿ’: ನಿಮ್ಮ ಬಗ್ಗೆ ಅಲ್ಪಸಂಖ್ಯಾತರಲ್ಲಿ ವಿರೋಧವಿದೆ ಎಂಬ ಮಾತಿದೆ.?
ಅರುಣ್ ಮಾಚಯ್ಯ: ಇದೆಲ್ಲ ಸುಳ್ಳು. ಕೆಲವು ವಿರೋಧಿಗಳು ಇದನ್ನು ಹೇಳುತ್ತಿದ್ದಾರೆ. ಅಲ್ಪಸಂಖ್ಯಾತರ ಒಲವು ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಪರವಾಗಿದೆ. ಸಿದ್ದರಾಮಯ್ಯನವರ ಕಾರ್ಯಕ್ರಮಗಳ ಮೇಲೆ ಜನರಿಗೆ ನಂಬಿಕೆ ಇದೆ. ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್‍ಗೆ ಕ್ರೋಢೀಕರಣವಾಗಲಿದೆ.
‘ಶಕ್ತಿ’: ತಾವು ಗುಂಪಿನ ನಾಯಕರೆಂಬ ಆರೋಪಕ್ಕೆ ಉತ್ತರವೇನು.?
ಅರುಣ್ ಮಾಚಯ್ಯ: ನಾನು ಗುಂಪಿನ ನಾಯಕನಾಗಿ ಗುರುತಿಸಿಕೊಂಡಿಲ್ಲ. ನಮ್ಮಲ್ಲಿರುವದು ಒಂದೇ ಗುಂಪು. ಅದುವೇ ಕಾಂಗ್ರೆಸ್ ಗುಂಪು ಎಲ್ಲಾ ಮುಂಚೂಣಿ ಘಟಕಗಳು ಪಕ್ಷದ ಗೆಲುವಿಗಾಗಿ ಈ ಬಾರಿ ಶ್ರಮಿಸಲಿವೆ.
‘ಶಕ್ತಿ’: ಸ್ವಪಕ್ಷೀಯ ಮುಖಂಡರು ನಿಮ್ಮನ್ನು ಸೋಲಿಸುವದಿಲ್ಲವೆ.?
ಅರುಣ್ ಮಾಚಯ್ಯ: ನಮ್ಮ ಪಕ್ಷದ ಮುಖಂಡರನ್ನು ರಾಜ್ಯ ವರಿಷ್ಠರು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂಬ ಸೂಚನೆ ನೀಡಿ ಆಗಿದೆ. ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಗೊಂದಲವಿರುವದು ಸಹಜ. ಇವರನ್ನೆಲ್ಲಾ ವಿಶ್ವಾಸಕ್ಕೆ ಪಡೆದು ಒಟ್ಟಾಗಿ ಕೆಲಸ ಮಾಡುತ್ತೇವೆ.
‘ಶಕ್ತಿ’: ಬಂಡಾಯ ಎದ್ದಿರುವ ನಿಮ್ಮ ಮುಖಂಡರ ಬಗ್ಗೆ ನಿಲುವೇನು.?
ಅರುಣ್ ಮಾಚಯ್ಯ: ಕಾಂಗ್ರೆಸ್‍ನಲ್ಲಿ ಬಂಡಾಯ ಸಾಧ್ಯವಿಲ್ಲ. ಟಿಕೆಟ್ ಆಕಾಂಕ್ಷಿಯಾಗಿದ್ದ ಅರಣ್ಯ ನಿಗಮದ ಉಪಾಧ್ಯಕ್ಷೆ ಪದ್ಮಿನಿಪೊನ್ನಪ್ಪ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಉಸ್ತುವಾರಿ ಸಚಿವರ ಆಪ್ತ ಸಹಾಯಕ ಹರೀಶ್ ಬೋಪಣ್ಣ ನಿರೀಕ್ಷೆಗೂ ಮೀರಿ ಅನುದಾನವನ್ನು ಜಿಲ್ಲೆಗೆ ತಂದಿದ್ದಾರೆ. ಇವರನ್ನು ಪಕ್ಷದ ವರಿಷ್ಠರು ಮನವೊಲಿಸಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಖಾತೆ ತೆರೆಯಲು ಇವರ ಸಹಾಯ ಅತ್ಯಮೂಲ್ಯವಾಗಿದೆ. ಎಲ್ಲವೂ ಸರಿ ಹೋಗಲಿದೆ.
‘ಶಕ್ತಿ’: 269 ಬೂತ್‍ಗಳಲ್ಲಿ ಸಂಚಾರ ನಡೆಸಲು ಸಾಧ್ಯವೇ.?
ಅರುಣ್ ಮಾಚಯ್ಯ: ಬಹುದೊಡ್ಡ ಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ತಲುಪುವದು ಕಷ್ಟವಾಗುತ್ತಿದೆ. ಪಂಚಾಯ್ತಿ ಮಟ್ಟದಲ್ಲಿ ತಲುಪಲು ವ್ಯವಸ್ಥೆ ಮಾಡಲಾಗಿದೆ. ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತೇನೆ. ವಿವಿಧ ಸಮಾರಂಭದಲ್ಲಿ ಕ್ರೀಡಾ ಉತ್ಸವಗಳಲ್ಲಿ ಮತಯಾಚನೆ ನಡೆಸುತ್ತೇನೆ. ಸಾಧ್ಯವಾದಷ್ಟು ಮತದಾರರ ಬಳಿ ತೆರಳುವ ಪ್ರಯತ್ನ ಮಾಡುತ್ತೇನೆ.
‘ಶಕ್ತಿ’: ಬಿಜೆಪಿಯ ಗೊಂದಲ ನಿಮಗೆ ವರದಾನವೇ.?
ಅರುಣ್ ಮಾಚಯ್ಯ: ಪಕ್ಷಗಳಲ್ಲಿ ಗೊಂದಲ ಸರ್ವೆ ಸಾಮಾನ್ಯ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿರುವದರಿಂದ ಇವರ ಗೊಂದಲ ಶಮನವಾಗಲಿದೆ. ವೈಯಕ್ತಿಕ ಟೀಕೆ ಟಿಪ್ಪಣಿ ಮಾಡಲಾರೆ. ಕಾಂಗ್ರೆಸ್‍ನ ಅಭಿವೃದ್ದಿ ಕೆಲಸಗಳೇ ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿದೆ.
‘ಶಕ್ತಿ’: ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್‍ಗೆ ಗೆಲುವು ಸಾಧ್ಯನಾ.?
ಅರುಣ್ ಮಾಚಯ್ಯ: ಚುನಾವಣೆ ಒಂದು ಸ್ಪರ್ಧೆ ಇದ್ದಂತೆ; ಇದರಲ್ಲಿ ಗೆಲ್ಲಲೇಬೇಕೆಂಬ ತೀರ್ಮಾನ ನನ್ನದು. ಸಿದ್ದರಾಮಯ್ಯನವರ ಕಾರ್ಯಕ್ರಮಗಳು ಜನರ ಬಾಗಿಲಿಗೆ ಈಗಾಗಲೇ ತಲುಪಿದೆ. ಇದನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಡಬೇಕಾಗಿದೆ. ಕಾಂಗ್ರೆಸ್‍ನ ಸ್ವಚ್ಛ, ದಕ್ಷ ಆಡಳಿತದ ಅಭಿವೃದ್ಧಿ ಕೆಲಸಗಳು ನಮ್ಮ ಕೈ ಹಿಡಿಯಲಿವೆ. ಬಿಜೆಪಿ ಭದ್ರಕೋಟೆಯನ್ನು ಭೇದಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ವಿಶ್ವಾಸ ನನಗಿದೆ.