ಮಡಿಕೇರಿ, ಏ. 19: ಒಂದೆಡೆ ನಗರದ ಐತಿಹಾಸಿಕ ಕೋಟೆಯಲ್ಲಿರುವ ಅರಮನೆ ಕಟ್ಟಡ ಹಂತ ಹಂತ ವಾಗಿ ಕುಸಿಯುವ ದೃಶ್ಯ ಎದು ರಾಗಿದೆ. ಇನ್ನೊಂದೆಡೆ ಅಲ್ಲಲ್ಲಿ ಕೋಟೆಗೆ ಸುತ್ತ ನಿರ್ಮಿ ಸಿರುವ ಹಳೆಯ ತಡೆಗೋಡೆಯಲ್ಲಿ ಆಳೆತ್ತರದ ಗಿಡಗಂಟಿಗಳು ಬೆಳೆದು ಕಲ್ಲುಕಟ್ಟಡ ಸಡಿಲಗೊಂಡು ಅಪಾಯ ಎದುರಾಗುವಂತಾಗಿದೆ.

ಇನ್ನೊಂದೆಡೆ ಶತಮಾನಗಳ ಹಿಂದಿನ ಕಟ್ಟಡದ ಗೋಡೆಗಳು ಈ ಗಿಡಗಂಟಿಗಳಿಂದ ಸಡಿಲಗೊಂಡು ಬೀಳುವ ಸ್ಥಿತಿ ನಿರ್ಮಾಣವಾಗಿದ್ದರೆ, ಮತ್ತೊಂದೆಡೆ ನೂತನವಾಗಿ ರಕ್ಷಣೆಯ ಗೋಡೆ ಅಲ್ಲಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿ ವಿಚಿತ್ರವೆಂದರೆ ಇರುವ ಐತಿಹಾಸಿಕ ಕಟ್ಟಡ ಅಥವಾ ತಡೆಗೋಡೆ ಉಳಿಸಿಕೊಳ್ಳಲು ಏನೇನೂ ಪ್ರಯತ್ನ ಕಂಡುಬರುತ್ತಿಲ್ಲ.

ಬದಲಾಗಿ ನೂತನವಾಗಿ ಕೋಟೆ ಹೊರ ಆವರಣದ ಅಲ್ಲಲ್ಲಿ ಯಾರೊಬ್ಬರ ಉಸ್ತುವಾರಿಯಿಲ್ಲದೆ ಕೇವಲ ಕೆಲಸಗಾರರು ಮನಬಂದಂತೆ ಕಲ್ಲಿನ ತಡೆಗೋಡೆ ನಿರ್ಮಿಸುವದು ಕಂಡುಬಂದಿದೆ. ಈ ಬಗ್ಗೆ ವಿಚಾರಿಸಿದರೆ ಕೇಂದ್ರ ಪ್ರಾಚ್ಯವಸ್ತು ಇಲಾಖೆಗೆ ಸಂಬಂಧಿಸಿದಂತೆ ಕೆಲಸ ಮಾಡಲಾಗುತ್ತಿದೆ ಎಂದು ಕಾರ್ಮಿಕರು ಉತ್ತರಿಸ ತೊಡಗಿದ್ದಾರೆ. ಯಾರೋ ತಮಿಳುನಾಡು ಮೂಲದ ಗುತ್ತಿಗೆದಾರರು ಕೆಲಸ ವಹಿಸಿ ಕೊಂಡಿದ್ದು, ತಾವು ಕಾಮಗಾರಿ ಯಷ್ಟೇ ಮಾಡುತ್ತಿರುವದಾಗಿ ಮುಗ್ಧ ಕಾರ್ಮಿಕರು ನುಡಿಯು ತ್ತಿದ್ದಾರೆ. ಪ್ರಸಕ್ತ ನಗರ ಪೊಲೀಸ್ ಠಾಣೆಯ ಎದುರುಗಡೆ ಈ ಕೋಟೆಗೆ ಹೊಂದಿಕೊಂಡಂತೆ ಕಾಮಗಾರಿ ನಡೆಯುತ್ತಿದೆ.

ಆದರೆ ಇಲ್ಲಿ ನಡೆಯುತ್ತಿರುವ ಕೆಲಸವಾಗಲೀ, ಕಾಮಗಾರಿಯ ಗುಣಮಟ್ಟದ ಬಗ್ಗೆಯಾಗಲೀ ಯಾರೂ ಗಮನಿಸುತ್ತಿರುವದು ಕಂಡುಬರುತ್ತಿಲ್ಲ. ಇನ್ನು ಇಂತಹ ನಿರರ್ಥಕ ಕೆಲಸಗಳನ್ನು ಕೈಗೊಳ್ಳುವ ಬದಲು ಇರುವಂತಹ ಐತಿಹಾಸಿಕ ಕೋಟೆಯ ಶತಶತಮಾನಗಳ ಹಿಂದಿನ ಸುಂದರ ಆವರಣದ ಸಂರಕ್ಷಣೆಗೆ ಕಾಳಜಿ ವಹಿಸಬೇಕಿದೆ. ಆ ದಿಸೆಯಲ್ಲಿ ಸಂಬಂಧಿಸಿದ ಇಲಾಖೆಯು ಅನಿವಾರ್ಯ ಗಮನ ಹರಿಸದಿದ್ದರೆ, ಅನೇಕ ಕಡೆ ಅರಮನೆ ಕಟ್ಟಡ ಸಹಿತ ಹಳೆಯ ತಡೆಗೋಡೆ ಕುಸಿಯುವ ಅಪಾಯವಿದೆ. -ಶ್ರೀಸುತ.