ಮಡಿಕೇರಿ, ಏ. 19: ಯಾವದೇ ಚುನಾವಣೆ ಎದುರಾದಾಗ ಕೊಡಗು ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಹಲವು ತಿಂಗಳುಗಳ ಮೊದಲೇ ಬಿರುಸಿನ ಚಟುವಟಿಕೆ ನಡೆಸುವದು ಈ ನಾಡಿನ ವೈಶಿಷ್ಠ್ಯ. ದಿನಗಳು ಉರುಳಿದಂತೆ ಹಲವು ದಶಕಗಳಿಂದ ಕಂಡುಬರುತ್ತಿದ್ದ ರಾಜಕೀಯ ಮೇಲಾಟಕ್ಕೆ ಈ ಬಾರಿ ವ್ಯತಿರಿಕ್ತ ಬೆಳವಣಿಗೆ ಕಾಣುವಂತಾಗಿದೆ.ಜಿಲ್ಲೆಯ ಕೇಂದ್ರ ಸ್ಥಳ ಮಡಿಕೇರಿಯಲ್ಲಿ ಪ್ರಮುಖವಾಗಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಕಚೇರಿಗಳು ಕಾರ್ಯಕರ್ತರ ಸುಳಿವೇ ಇಲ್ಲದಂತೆ ಬಣಗುಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಪಕ್ಷದ ಕಚೇರಿಗಳ ಒಂದೆಡೆ ಒಂದಿಬ್ಬರು ಸಿಬ್ಬಂದಿ ಕಣ್ಣಿಗೆ ಬಿದ್ದರೂ, ಚುನಾವಣೆ ಸಂಬಂಧ ಏನೇನೂ ಮಾಹಿತಿ ಅವರಿಗಿಲ್ಲ. ಬದಲಾಗಿ ತಮ್ಮ ಪಕ್ಷದ ಅಭ್ಯರ್ಥಿಗಳು ಅಥವಾ ಅಧ್ಯಕ್ಷರಾದಿಯಾಗಿ ಯಾವೊಬ್ಬರು ಪದಾಧಿಕಾರಿಗಳ ಕುರಿತು ಮಾಹಿತಿಯೂ ಗೊತ್ತಿಲ್ಲವಂತೆ. ಇನ್ನು ಚುನಾವಣಾ ಪ್ರಕ್ರಿಯೆ ವಿಷಯವಂತೂ ಇಲ್ಲಿ ಹೇಳುವವರು ಕೇಳುವವರು ಕೂಡ ಲಭಿಸದಂತಾಗಿದೆ. ಕಾರಣ ಯಾರೂ ಅತ್ತ ಇನ್ನು ತಲೆಕೆಡಿಸಿಕೊಂಡಂತಿಲ್ಲ!

ರಂಜನ್ ನಾಮಪತ್ರ: ಕೊಡಗಿನಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ರಾಜಕೀಯ ಜಿದ್ದಾಜಿದ್ದಿನಲ್ಲಿ ಇನ್ನೂ ಕೂಡ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುವಲ್ಲಿ ಗೊಂದಲ ಮುಂದುವರಿದಿದೆ. ಈ ನಡುವೆ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ತಾ. 20 ರಂದು (ಇಂದು) ತಮ್ಮ ಉಮೇದು ವಾರಿಕೆ ಸಲ್ಲಿಸುವದಾಗಿ ಎಂ.ಪಿ. ಅಪ್ಪಚ್ಚು ರಂಜನ್ ಸ್ಪಷ್ಟಪಡಿಸಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಹಿತೈಷಿಗಳೊಂದಿಗೆ ಪೂಜೆ ಸಲ್ಲಿಸುವ ಮುಖಾಂತರ; ಚುನಾವಣಾಧಿಕಾರಿ ಕಚೇರಿ ತನಕ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸುವದಾಗಿ ಅವರು ವಿವರಿಸಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ತನ್ನೊಂದಿಗೆ ಐವರ ತಂಡ ತೆರಳಿ ಚುನಾವಣಾಧಿಕಾರಿಗೆ ಉಮೇದುವಾರಿಕೆ ಸಲ್ಲಿಸುವದಾಗಿಯೂ ಅಪ್ಪಚ್ಚು ರಂಜನ್ ನೆನಪಿಸಿದರು.

ಶುಭ ದಿನ ನೋಡಿ ಸಲ್ಲಿಕೆ: ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಧಿಕೃತ ಅಭ್ಯರ್ಥಿ ಬಿ.ಎ. ಜೀವಿಜಯ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ, ತಾನು ಇನ್ನೂ ದಿನಾಂಕ ನಿರ್ಧರಿಸಿಲ್ಲವೆಂದೂ, ಒಳ್ಳೆಯ ದಿನದೊಂದಿಗೆ ಶುಭ ಮುಹೂರ್ತ ತಿಳಿದುಕೊಂಡು ಮುಂದಿನ ದಿನಗಳಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಲಿರುವದಾಗಿ ಸ್ಪಷ್ಟಪಡಿಸಿದರು.

ಜೆಡಿಎಸ್ ವರಿಷ್ಠರ ಭೇಟಿಯೊಂದಿಗೆ ‘ಬಿ’ ಫಾರಂ ಪಡೆದುಕೊಳ್ಳಲು ರಾಜಧಾನಿ ಬೆಂಗಳೂರಿನಲ್ಲಿದ್ದು, ಹಿಂತಿರುಗಿದ ಬಳಿಕ ಪ್ರಮುಖರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ ನಾಮಪತ್ರ ಸಲ್ಲಿಕೆಯ ಶುಭ ದಿನವನ್ನು ನಿರ್ಧರಿಸಲಾಗುವದು ಎಂದು ಜೀವಿಜಯ ತಿಳಿಸಿದರು.

ಸಂಕೇತ್ ಸುಳಿವು: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಕೂಡ ತಾನು ತಾ. 22 ಅಥವಾ 23 ರಂದು

(ಮೊದಲ ಪುಟದಿಂದ) ಉಮೇದುವಾರಿಕೆ ಸಲ್ಲಿಸುವದಾಗಿ ಪ್ರತಿಕ್ರಿಯಿಸಿದರು. ಇನ್ನು ಕೂಡ ಅಧಿಕೃತ ದಿನವನ್ನು ನಿರ್ಧರಿಸಿಲ್ಲ ವೆಂದು ಸ್ಪಷ್ಟಪಡಿಸಿದ ಅವರು, ಎಲ್ಲರೊಡಗೂಡಿ ಸಮಾಲೋಚಿಸಿ ದಿನ ನಿಗದಿಗೊಳಿಸಲಾಗುವದು ಎಂದರು.

ಅರುಣ್ ನಿರ್ಧಾರ: ಅರುಣ್ ಮಾಚಯ್ಯ ಅವರು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ತಾ. 23 ರಂದು ತಮ್ಮ ಉಮೇದುವಾರಿಕೆ ಸಲ್ಲಿಸಲಿರುವದಾಗಿ ಪುನರುಚ್ಚರಿಸಿದ್ದಾರೆ.

ಬಗೆಹರಿಯದ ಗೊಂದಲ: ಇತ್ತ ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಎಸ್. ಚಂದ್ರಮೌಳಿ ಅವರ ಟಿಕೆಟ್ ಅನ್ನು ಪಕ್ಷದ ಹೈಕಮಾಂಡ್ ತಡೆ ಹಿಡಿದಿರುವ ಹಿನ್ನೆಲೆ ಇನ್ನೂ ಕೂಡ ಗೊಂದಲ ಬಗೆಹರಿದಿಲ್ಲವೆಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ. ಹೀಗಾಗಿ ಇವರು ನಾಮಪತ್ರ ಸಲ್ಲಿಸುವ ಕುರಿತಾಗಿಯೂ ಇನ್ನೂ ಯಾವದೇ ತೀರ್ಮಾನ ತೆಗೆದುಕೊಂಡಂತಿಲ್ಲ.

ಚಂದ್ರಮೌಳಿ ಸ್ಪಷ್ಟನೆ: ತಾನು ಓರ್ವ ವಕೀಲನಾಗಿ ತನ್ನ ಬಳಿ ಬಂದ ಕಕ್ಷಿದಾರನಿಗೆ ನ್ಯಾಯ ಕೊಡಿಸಲು ವಕಾಲತ್ತು ವಹಿಸುವದು ತನ್ನ ವೃತ್ತಿ ಧರ್ಮ ಎಂದು ಸ್ಪಷ್ಟಪಡಿಸಿರುವ ವಕೀಲ ಚಂದ್ರಮೌಳಿ, ಆರ್ಟಿಕಲ್ 19ರ ಅನ್ವಯ ಯಾರಾದರೂ ಆರೋಪಿ ಪರ ವಕಾಲತ್ತು ವಹಿಸದಿದ್ದರೆ ಸ್ವತಃ ನ್ಯಾಯಾಧೀಶರೇ ಈ ಅವಕಾಶ ನೀಡಲಿದ್ದು, ಇದು ನ್ಯಾಯಾಲಯದಲ್ಲಿ ನಿಷ್ಪಕ್ಷಪಾತ ನಿರ್ಧಾರ ಕೈಗೊಳ್ಳಲು ಅಡಿಪಾಯವಾಗಿದೆ. ತಾನು ಪ್ರಕರಣವೊಂದರಲ್ಲಿ ವಕಾಲತು ವಹಿಸಿದ ವಿಷಯದಲ್ಲಿ ತನ್ನ ವಿರುದ್ಧ ಕಾಂಗ್ರೆಸ್ ವರಿಷ್ಠರಿಗೆ ತಪ್ಪು ಮಾಹಿತಿಯೊಂದಿಗೆ ಬ್ರಿಜೇಶ್ ಕಾಳಪ್ಪ ಗೊಂದಲ ಸೃಷ್ಟಿಸಿರುವದಾಗಿ ವಿಷಾದಿಸಿದರು.

ಪ್ರಸಕ್ತ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿರುವ ಕಾರಣ ಗೊಂದಲ ಬಗೆಹರಿದಿಲ್ಲವೆಂದು ಹೇಳಲಾಗುತ್ತಿದ್ದು, ಅವರು ವಿಡಿಯೋ ಕಾನ್ಫರೇನ್ಸ್ ಮೂಲಕ ಈ ಗೊಂದಲ ಬಗೆಹರಿಸುವವರಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.

ಬಿಜೆಪಿಯಲ್ಲೂ ಗೊಂದಲ: ಇನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕೆ.ಜಿ. ಬೋಪಯ್ಯ ಹೆಸರು ಅಂತಿಮಗೊಂಡಿದೆ ಎಂದು ಅವರ ಆಪ್ತ ವಲಯ ಹೇಳಿಕೊಂಡಿದ್ದರೂ, ಬಿಜೆಪಿ ವರಿಷ್ಠರಿಂದ ಯಾವದೇ ಅಧಿಕೃತ ಆದೇಶ ಹೊರಟಿದ್ದಿಲ್ಲ. ಒಂದು ವೇಳೆ ಗೊಂದಲ ಬಗೆಹರಿದು ಬೋಪಯ್ಯ ಅವರಿಗೆ ‘ಬಿ’ ಫಾರಂ ಖಾತರಿಯಾದರೆ ತಾ. 23 ರಂದು ಅವರೂ ಕೂಡ ಉಮೇದುವಾರಿಕೆ ಸಲ್ಲಿಸಲಿದ್ದಾರೆ ಎಂದು ಈ ಮೂಲಗಳು ಸುಳಿವು ನೀಡಿವೆ.

ಕಾದು ನೋಡುವ ತಂತ್ರ: ಈಗಾಗಲೇ ವರಿಷ್ಠರು ತಮಗಳಿಗೆ ಸ್ಪರ್ಧೆಗೆ ಅವಕಾಶ ಕಲ್ಪಿಸದಿರುವ ಬಗ್ಗೆ ಕಾಂಗ್ರೆಸ್‍ನಿಂದ ವೀರಾಜಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕದ್ದಣಿಯಂಡ ಹರೀಶ್ ಬೋಪಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಸ್ಪರ್ಧಾಕಾಂಕ್ಷಿ ನಾಪಂಡ ಎಂ. ಮುತ್ತಪ್ಪ ಅವರುಗಳು ಈಗ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿರುವದಾಗಿ ಗೊತ್ತಾಗಿದೆ.

ಇಂದು ರಾಜಧಾನಿಯಲ್ಲಿ ಕೆಪಿಸಿಸಿ ವರಿಷ್ಠರು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿರುವ ಹಿನ್ನೆಲೆ, ಯಾವದೇ ಮಾತುಕತೆ ಫಲಪ್ರದವಾಗದ ಕಾರಣ ಒಂದೆರಡು ದಿನ ಈ ಇಬ್ಬರು ಅಂತಿಮ ನಿರ್ಧಾರದ ವಿಚಾರವನ್ನು ಮುಂದಿಡುವದಾಗಿ ಗೊತ್ತಾಗಿದೆ.

ಬಂಡಾಯ ಬಾವುಟ: ಇನ್ನು ಪ್ರಬಲ ಟಿಕೆಟ್ ಆಕಾಂಕ್ಷಿ ಪದ್ಮಿನಿ ಪೊನ್ನಪ್ಪ ಮಾತ್ರ ಯಾವದೇ ಕಾರಣಕ್ಕೂ ಚುನಾವಣಾ ಕಣಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿಯುವದಿಲ್ಲವೆಂದು ಪುನರುಚ್ಚರಿಸಿದ್ದಾರೆ. ತಾನು ಮೂರು ದಶಕಗಳಿಂದ ಪಕ್ಷಕ್ಕಾಗಿ ಶ್ರಮಿಸಿದ್ದು, ಕೆಪಿಸಿಸಿ ವರಿಷ್ಠರು ‘ಹಾವೂ ಸಾಯಬಾರದು-ಕೋಲೂ ಮುರಿಯಲು ಬಾರದು’ ಎಂಬಂತೆ ದ್ವಂಧ್ವ ನಿಲುವಿನಿಂದ ಕೊಡಗಿನ ಬಗ್ಗೆ ಸದಾ ಮಲತಾಯಿ ಧೋರಣೆ ಅನುಸರಿಸಿಕೊಂಡು ಬಂದಿದ್ದಾಗಿ ವಿಷಾದಿಸಿದರು.

ಈ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿರುವ ತಾನು ತಾ. 23 ಅಥವಾ 24 ರಂದು ನಿಶ್ಚಿತವಾಗಿ ಬಂಡಾಯ ಸ್ಪರ್ಧೆ ಮಾಡಲಿರುವದಾಗಿ ಅವರು ಪುನರುಚ್ಚರಿಸಿದರು.

ಹುದ್ದೆ ನಿರಾಕರಣೆ: ಈ ನಡುವೆ ನಾಪಂಡ ಮುತ್ತಪ್ಪ ಅವರಿಗೆ ಪಕ್ಷದ ವರಿಷ್ಠರು ರಾಜ್ಯಮಟ್ಟದಲ್ಲಿ ಸ್ಥಾನಮಾನದೊಂದಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯ ಬಳುವಳಿ ನೀಡುವದಾಗಿ ಸಮಾಧಾನ ಪಡಿಸಿದ್ದರೂ, ಮುತ್ತಪ್ಪ ಅಂತಹ ಹುದ್ದೆ ನಿರಾಕರಿಸಿದ್ದಾಗಿ ಅವರ ಆಪ್ತ ಮೂಲಗಳು ತಿಳಿಸಿವೆ. ಚಂದ್ರಮೌಳಿ ಬದಲು ತನಗೆ ಟಿಕೆಟ್ ನೀಡದಿದ್ದರೆ ಸ್ಪರ್ಧೆ ನಡೆಸುವದಾಗಿ ಮುತ್ತಪ್ಪ ಪುನರುಚ್ಚರಿಸಿದ್ದಾಗಿಯೂ ಗೊತ್ತಾಗಿದೆ.

ವಿರೂಪಾಕ್ಷಯ್ಯ ನುಡಿ: ಮಡಿಕೇರಿ ಕ್ಷೇತ್ರದ ಮತ್ತೋರ್ವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿರೂಪಾಕ್ಷಯ್ಯ ಅವರು ತಾನು ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಇತರರೊಂದಿಗೆ ಮಾತುಕತೆ ನಡೆಸಿದ್ದು, ಯಾವ ತೀರ್ಮಾನವನ್ನೂ ಕೈಗೊಂಡಿಲ್ಲವೆಂದು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಉಭಯ ಸಂಕಟ: ಒಂದು ರೀತಿಯಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನ ಅಧಿಕೃತ ಅಭ್ಯರ್ಥಿಗಳ ಘೋಷಣೆಯೊಂದಿಗೆ, ಸ್ವತಃ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರವಾಗಿ ಅಧಿಕೃತ ಪ್ರಚಾರ ನಡೆಸಿದ್ದಾಗಿದೆ.

ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎರಡು ತಿಂಗಳು ಮೊದಲೇ ತನ್ನ ಪಕ್ಷದ ಅಭ್ಯರ್ಥಿಗಳಾಗಿ ಅಪ್ಪಚ್ಚು ರಂಜನ್ ಹಾಗೂ ಬೋಪಯ್ಯ ಅವರುಗಳನ್ನು ಘೋಷಿಸಿ ಹಿಂತೆರಳಿದ್ದರಾದರೂ, ಇದೀಗ ವೀರಾಜಪೇಟೆ ಕ್ಷೇತ್ರದಲ್ಲಿ ಗೊಂದಲ ಮುಂದುವರಿದಿದೆ.

ಇನ್ನು ಕಾಂಗ್ರೆಸ್ ತನ್ನ ಅಧಿಕೃತ ಅಭ್ಯರ್ಥಿಗಳನ್ನು ಪ್ರಕಟಿಸಿದ ಬೆನ್ನಲ್ಲೇ ಅತೃಪ್ತರಿಂದಲೇ ಸೃಷ್ಟಿಯಾಗಿರುವ ಗೊಂದಲ ಚಂದ್ರಮೌಳಿ ಅವರಿಗೆ ಸಂಕಟ ತಂದೊಡ್ಡಿದೆ. ಪರಿಣಾಮ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಇಲ್ಲಿ ತನ್ನ ಅಭ್ಯರ್ಥಿಗಳನ್ನು ಅಧಿಕೃತ ಘೋಷಿಸುವಲ್ಲಿ ಉಭಯ ಸಂಕಟಕ್ಕೆ ಸಿಲುಕಿರುವಂತಿದೆ.

ಈ ಎಲ್ಲ ಬೆಳವಣಿಗೆ ನಡುವೆ ಮುಂದಿನ 22 ದಿನಗಳಲ್ಲಿ ಚುನಾವಣಾ ಪ್ರಕ್ರಿಯೆ ಮುಗಿದು, ಮತದಾರ ಪ್ರಭು ತನ್ನ ಹಕ್ಕು ಚಲಾಯಿಸುವದು ಕೂಡ ಮುಗಿದು ಹೋಗುವ ದಿನಗಳು ಸನ್ನಿಹಿತವಾಗಿವೆ. ಹೀಗಿದ್ದರೂ ಚುನಾವಣಾ ಅಖಾಡಕ್ಕೆ ಅಭ್ಯರ್ಥಿಗಳು ಇಳಿಯದಿರುವ ಪರಿಣಾಮ ಜಿಲ್ಲೆಯಲ್ಲಿ ಇನ್ನೂ ಚಟುವಟಿಕೆ ಸಹಿತವಾದ ರಾಜಕೀಯ ರಂಗು ಮೂಡಿದಂತಿಲ್ಲ.

ಒಂದೆಡೆ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಡಳಿತ ಮಾತ್ರ ಈ ಪ್ರಕ್ರಿಯೆ ಎದುರಿಸಲು ಸಂಪೂರ್ಣ ಸನ್ನದ್ಧಗೊಂಡಿದ್ದು, ಈ ಬಾರಿಯ ಚುನಾವಣೆಗೆ ಒಂದು ರೀತಿ ರಾಜಕೀಯ ಹಿನ್ನಡೆ ಸರ್ವತ್ರ ಗೋಚರಿಸತೊಡಗಿದ್ದು ವಾಸ್ತವ.