ಸೋಮವಾರಪೇಟೆ,ಏ.19: ಇಲ್ಲಿನ ವೀರಶೈವ ಸಮಾಜ ಹಾಗೂ ಬಸವೇಶ್ವರ ಯುವಕ ಸಂಘದ ಆಶ್ರಯದಲ್ಲಿ ಬಸವೇಶ್ವರ ದೇವಾಲಯದಲ್ಲಿ ಬಸವೇಶ್ವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ರಾತ್ರಿ ಅಲಂಕೃತ ಮಂಟಪದಲ್ಲಿ ಬಸವೇಶ್ವರರ ಮೂರ್ತಿಯನ್ನಿರಿಸಿ ಮಂಗಳ ವಾದ್ಯ ಘೋಷ, ವೀರಗಾಸೆ, ಕಲಾ ತಂಡ ಹಾಗೂ ಪಟಾಕಿ ಸಿಡಿ ಮದ್ದಿನೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿದ ನಂತರ ವೀರಗಾಸೆ ಪ್ರದರ್ಶನ ನಡೆಸಿದರು. ಅನುಮತಿ ಪಡೆಯದೆ ಪ್ರಮುಖ ಬೀದಿಗಳಲ್ಲಿ ಬ್ಯಾಂಡ್ ಸೆಟ್ ಬಳಸಿ ಮೆರವಣಿಗೆ ನಡೆಸಿದ್ದಲ್ಲದೆ, ಖಾಸಗಿ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿದ್ದನ್ನು ಗಮನಿಸಿದ ಸಬ್ ಇನ್ಸ್ ಪೆಕ್ಟರ್ ಶಿವಣ್ಣ ತ್ಯಾಗರಾಜ ರಸ್ತೆಯಲ್ಲಿ ಮೆರವಣಿಗೆಗೆ ತಡೆಯೊಡ್ಡಿದರು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳಿಗೆ ಹಾಗೂ ಮೆರವಣಿಗೆಗೆ ಅನುಮತಿ ಪಡೆಯಬೇಕೆಂಬ ನಿಯಮವಿದೆ. ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪಡೆಯಲಾಗಿದೆಯೆ? ಎಂದು ಸಂಘಟಕರನ್ನು ಪ್ರಶ್ನಿಸಿದ ಸಂದರ್ಭ ಕೆಲವರ ನಡುವೆ ಮಾತಿನ ಚಕಮಕಿ ನಡೆದು ನಂತರ ಮೆರವಣಿಗೆಯನ್ನು ಮೊಟಕುಗೊಳಿಸಲಾಯಿತು.

ಈ ಸಂದರ್ಭ ವೀರಶೈವ ಸಮಾಜದ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ತೇಜಸ್ವಿ, ಕಾರ್ಯದರ್ಶಿ ಜೆ.ಸಿ.ಶೇಖರ್, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಚಂದ್ರ ಶೇಖರ್, ಪ್ರಮುಖರಾದ ಗಿರೀಶ್, ಸಚಿನ್, ಚಿರಂತ್ ಹಾಗೂ ಮುಂತಾದವರು ಹಾಜರಿದ್ದರು.