ಕುಶಾಲನಗರ, ಏ. 19: ಬಸವಣ್ಣನವರ ವಚನಗಳ ಸಾರಗಳನ್ನು ಇಂದಿನ ಜನಾಂಗಕ್ಕೆ ಪ್ರಸ್ತುತ ಪಡಿಸುವ ಕಾರ್ಯ ನಡೆಯಬೇಕಾಗಿದೆ ಎಂದು ತ್ರಿಭಾಷಾ ಲೇಖಕರು ಹಾಗೂ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಕರೆ ನೀಡಿದ್ದಾರೆ.

ಸ್ಥಳೀಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯ ಸುದ್ದಿಮನೆ ಸಭಾಂಗಣದಲ್ಲಿ ವಚನ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಾಜ ಪರಿವರ್ತನೆಯ ಕಾರ್ಯ ಕೈಗೊಂಡ ಕ್ರಾಂತಿಕಾರಿ ಬಸವಣ್ಣನವರ ವಚನಗಳು ಎಲ್ಲಾ ಕಾಲಕ್ಕೂ ಅನ್ವಯವಾಗುತ್ತವೆ ಎಂದರು. ಈ ಸಂದರ್ಭ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ನಿವೃತ್ತ ಶಿಕ್ಷಕಿ ರಾಣು ಅಪ್ಪಣ್ಣ, ಬಸವಣ್ಣನವರ ವಚನಗಳು ಜೀವನ, ಆದರ್ಶ ಹಾಗೂ ಸಾಮಾಜಿಕ ಬದುಕಿನ ವಿವಿಧ ಮಜಲುಗಳನ್ನು ಪರಿಚಯಿಸುವಲ್ಲಿ ಉತ್ತಮ ದಿಕ್ಸೂಚಿಯಾಗಿದೆ ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಸಬಲಂ ಭೋಜಣ್ಣ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಎಂ.ಎನ್. ಚಂದ್ರಮೋಹನ್, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಮೂರ್ತಿ ಮತ್ತಿತರರು ಇದ್ದರು.

v ಕುಶಾಲನಗರದ ವೀರಶೈವ ಸಮಾಜದ ವತಿಯಿಂದ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಬಸವ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ. ಮಹದೇವಪ್ಪ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು. ನೆರೆದಿದ್ದವರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ವೀರಶೈವ ಮಹಾಸಭಾದ ನಿರ್ದೇಶಕ ಟಿ.ಎಸ್. ಶಾಂಭಮೂರ್ತಿ ಮಾತನಾಡಿ, ಮಹಾ ಮಾನವತಾವಾದಿ, ಶ್ರೇಷ್ಠ ಚಿಂತಕ ಬಸವಣ್ಣನವರ ವಿಚಾರಧಾರೆಗಳು, ಆದರ್ಶಗಳು ಇಂದಿನ ಸಮಾಜಕ್ಕೆ ಪೂರಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಕಾರ್ಯದರ್ಶಿ ಎಸ್.ಎಸ್. ವಿರೂಪಾಕ್ಷ, ಎಸ್.ಆರ್. ಶಿವಲಿಂಗ, ಕದಲಿ ವೇದಿಕೆ ಅಧ್ಯಕ್ಷೆ ಲೇಖಾ ಧರ್ಮೇಂದ್ರ, ಪ್ರಮುಖರಾದ ಹೆಚ್.ಪಿ. ಉದಯ್, ಸದಾಶಿವ, ಲೋಕೇಶ್, ಕಮಲಮ್ಮ, ಲತಾ ಮತ್ತಿತರರು ಇದ್ದರು.