ಶ್ರೀಮಂಗಲ, ಏ. 19 : ಜಿಲ್ಲೆಯ ಬೆಳೆಗಾರರು ತಮ್ಮ ಸ್ವಂತ ಕೃಷಿ ಚಟುವಟಿಕೆಗಾಗಿ ಬಳಸುವ ಹಳದಿ ನಂಬರ್ ಪ್ಲೇಟ್ ಹೊಂದಿರುವ ಪಿಕಪ್ ವಾಹನಗಳ ಮಾಲೀಕರು ವೃತ್ತಿ ತೆರಿಗೆ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟೀಸ್ ಜಾರಿ ಮಾಡಿರುವದನ್ನು ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟ ತೀವ್ರವಾಗಿ ವಿರೋಧಿಸಿ ಈ ಬಗ್ಗೆ ವಾಣಿಜ್ಯ ಇಲಾಖೆಯ ಅಧೀನದ ವೀರಾಜಪೇಟೆ ವಿಭಾಗದ ವೃತ್ತಿ ತೆರಿಗೆ ಅಧಿಕಾರಿ ಸುದರ್ಶನ್ ದೇವು ಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಬೆಳೆಗಾರರು ಕೇವಲ ಕೃಷಿ ಚಟುವಟಿಕೆಗಳಿಗೆ ಪಿಕಪ್ ವಾಹನಗಳನ್ನು ಬಳಸುತ್ತಿದ್ದು, ಅದು ವೃತ್ತಿ ತೆರಿಗೆ ವ್ಯಾಪ್ತಿಗೆ ಬರುವದಿಲ್ಲ. ಆದ್ದರಿಂದ ಬೆಳೆಗಾರರಿಗೆ ವೃತ್ತಿ ತೆರಿಗೆ ಪಾವತಿಸುವಂತೆ ನೋಟೀಸು ಜಾರಿ ಮಾಡುವದನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿದರು. ಬೆಳೆಗಾರರು ತಮ್ಮ ಕೃಷಿ ಚಟುವಟಿಕೆಗೆ ಪಿಕಪ್ ವಾಹನಗಳನ್ನು ಉಪಯೋಗಿಸುತ್ತಿರುವದನ್ನು ಖಾತ್ರಿ ಪಡಿಸಿಕೊಳ್ಳಲು ಪಿಕಪ್ ವಾಹನ ಹೊಂದಿರುವ ಬೆಳೆಗಾರರಿಂದ ಆರ್‍ಟಿಸಿಗಳನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಸಲ್ಲಿಸಿ ಬೆಳೆಗಾರರು ಎಂಬದಾಗಿ ಖಾತ್ರಿಪಡಿಸಿಕೊಂಡು ಯಾವದೇ ವೃತ್ತಿ ತೆರಿಗೆ ಪಾವತಿಸದಂತೆ ಅಧಿಕಾರಿಗಳಲ್ಲಿ ಆಗ್ರಹಿಸಲಾಯಿತು. ಯಾವದೇ ಬೆಳೆಗಾರರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ತಮ್ಮ ಪಿಕಪ್ ವಾಹನಗಳಿಗೆ ತೆರಿಗೆ ಪಾವತಿಸುವಂತೆ ನೋಟೀಸು ಬಂದಲ್ಲಿ ಯಾವದೇ ತೆರಿಗೆ ಪಾವತಿಸುವ ಅವಶ್ಯಕತೆ ಇಲ್ಲ. ಬೆಳೆಗಾರರ ಮಾಲೀಕತ್ವದ ವಾಣಿಜ್ಯ ಉದ್ದೇಶಕ್ಕೆ ಬಳಸುವ ಯಾವದೇ ವಾಹನಕ್ಕೆ ಈ ನೀತಿ ಅನ್ವಯ ಮಾಡುವ ಅಗತ್ಯತೆ ಇಲ್ಲ ಎಂದು ಬೆಳೆಗಾರರ ಒಕ್ಕೂಟ ಮನವಿ ಮಾಡಿದೆ.
ಈ ಬಗ್ಗೆ ವಾಣಿಜ್ಯ ಇಲಾಖೆಯ ವೃತ್ತಿ ತೆರಿಗೆ ಅಧಿಕಾರಿ ಸುದರ್ಶನ್ ದೇವು ಪ್ರಸಾದ್ ಅವರು ಪ್ರತಿಕ್ರಿಯಿಸಿ ಈ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆದು ಬೆಳೆಗಾರರು ತಮ್ಮ ಸ್ವಂತ ಕೃಷಿ ಚಟುವಟಿಕೆಗೆ ಬಳಸುವ ಹಳದಿ ನಂಬರ್ ಪ್ಲೇಟ್ ಹೊಂದಿರುವ ಪಿಕಪ್ ವಾಹನ, ಗೂಡ್ಸ್ ವಾಹನಗಳಿಗೆ ಯಾವದೇ ತೆರಿಗೆ ಪಾವತಿಸಲು ಸೂಚಿಸಿ ನೋಟೀಸು ಜಾರಿ ಮಾಡದಂತೆ ಹಾಗೂ ಯಾವದೇ ತೆರಿಗೆ ವಸೂಲಾತಿ ಮಾಡದಂತೆ ಶಿಫಾರಸ್ಸು ಮಾಡಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.
ಈ ಸಂದರ್ಭ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ, ಉಪಾಧ್ಯಕ್ಷ ಕೇಚಂಡ ಕುಶಾಲಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಖಜಾಂಜಿ ಮಾಣೀರ ವಿಜಯ ನಂಜಪ್ಪ, ತಾಂತ್ರಿಕ ಸಲಹೆಗಾರ ಚೆಪ್ಪುಡೀರ ಶೆರಿ ಸುಬ್ಬಯ್ಯ ಹಾಜರಿದ್ದರು.