ಮಡಿಕೇರಿ, ಏ. 19: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತಿಚೀಗೆ ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಫ್ಲಯಿಂಗ್ ಸ್ಕ್ವಾಡ್ ಅಧಿಕಾರಿಗಳ ಮತ್ತು ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡದ ಅಧಿಕಾರಿಗಳ ಜವಾಬ್ದಾರಿಯಲ್ಲಿ ಪ್ರಗತಿಯ ಸಮಗ್ರ ಪರಿಶೀಲನೆಯ ಕುರಿತು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ವಿಧಾನಸಭೆ ಚುನಾವಣೆ ಹಿನ್ನೆಲೆ ಅಧಿಕಾರಿಗಳು ಇದುವರೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಮಾಹಿತಿ ಪಡೆದು ಮಾತನಾಡಿದ ಅವರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ನಂತರ ಹೆಚ್ಚಿನ ಜವಾಬ್ದಾರಿ ಅಧಿಕಾರಿಗಳಿಗೆ ಇರುವದರಿಂದ ನಿಯೋಜನೆಗೊಂಡ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು. ಪ್ರತಿನಿತ್ಯ ಮಾಹಿತಿ ಪಡೆದುಕೊಳ್ಳಬೇಕು. ಹಾಗೆಯೇ ವರದಿ ನೀಡಬೇಕು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಯಾವದೇ ಸಂದರ್ಭದಲ್ಲಿ ಚುನಾವಣಾ ಅಕ್ರಮಗಳಿಗೆ ಅವಕಾಶವಿರಬಾರದು. ಸಂಶಯಾಸ್ಪದ ಚಟುವಟಿಕೆಗಳು, ಖರ್ಚು ವೆಚ್ಚಗಳ ಕುರಿತಂತೆ ತೀವ್ರ ನಿಗಾವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರು ಮಾತನಾಡಿ, ಜಿಲ್ಲೆಯೊಳಗೆ ಪ್ರವೇಶವಾಗುವ ಯಾವದೇ ವಾಹನಗಳಿಗೂ ವಿನಾಯತಿ ನೀಡದೇ ಪ್ರತಿಯೊಂದು ವಾಹನವನ್ನು ಪರಿಶೀಲನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್, ಜಿ.ಪಂ.ಸಿಇಓ ಪ್ರಶಾಂತ ಕುಮಾರ್ ಮಿಶ್ರ, ಉಪವಿಭಾಗಾಧಿಕಾರಿ ರಮೇಶ್ ಪಿ.ಕೊನರೆಡ್ಡಿ, ಎಂ.ಸಿ.ಸಿ ನೋಡಲ್ ಅಧಿಕಾರಿಗಳು, ಫ್ಲಯಿಂಗ್ ಸ್ಕ್ವಾಡ್ ಅಧಿಕಾರಿಗಳು, ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡದ ಅಧಿಕಾರಿಗಳು ಇತರರು ಇದ್ದರು.