ಮಡಿಕೇರಿ, ಏ. 19: ಕೊಡವ ಕೌಟುಂಬಿಕ ಹಾಕಿ ಉತ್ಸವದ ನಡುವೆ ನಾಪೋಕ್ಲುವಿನಲ್ಲಿ ಆಯೋಜಿತ ಗೊಂಡಿದ್ದ ದೇಶದ ನಾಲ್ಕು ಪ್ರತಿಷ್ಠಿತ ತಂಡಗಳು ಪಾಲ್ಗೊಂಡಿರುವ ಫ್ಲಡ್‍ಲೈಟ್ ಹಾಕಿ ಪಂದ್ಯಾಟ (ಹೊನಲು ಬೆಳಕು) ಇದೀಗ ಹಲವು ಅಡೆತಡೆಗಳಿಂದಾಗಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ‘ಟರ್ಫ್’ ಮೈದಾನಕ್ಕೆ ವರ್ಗಾವಣೆಗೊಂಡಿದೆ. ಕುಲ್ಲೇಟಿರ ಕಪ್ ಹಾಕಿ ಉತ್ಸವದ ನಡುವೆ ಸಂಜೆ ನಾಪೋಕ್ಲುವಿನ ಮೈದಾನದಲ್ಲೇ ಈ ಪ್ರತ್ಯೇಕ ಪಂದ್ಯಾಟ ನಿಗದಿಯಾಗಿತ್ತು. ಆದರೆ ಸಂಜೆ ವೇಳೆ ಸುರಿಯುತ್ತಿರುವ ಮಳೆ ಹಾಗೂ ಮರುದಿನ ಬೆಳಿಗ್ಗೆ ನಿಗದಿತ ಪಂದ್ಯಾಟಗಳು ಮುಂದುವರಿಯುವದ ರಿಂದ ದೇಶವನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿರುವ ಖ್ಯಾತನಾಮ ಆಟಗಾರರು ಪಾಲ್ಗೊಂಡಿರುವ ನಾಲ್ಕು ಪ್ರಮುಖ ತಂಡಗಳ ಪಂದ್ಯಾಟವನ್ನು ಮಡಿಕೇರಿಗೆ ವರ್ಗಾಯಿಸಲಾಗಿದೆ ಎಂದು ಈ ಪಂದ್ಯಾಟದ ಆಯೋಜನೆಯ ಜವಾಬ್ದಾರಿ ಹೊತ್ತಿರುವ ಕೊಡಗಿನ ವರೇ ಆದ ಪೂನಾದ ಬಿ.360 ಪೂನಾದ ಮಂಡೇಟಿರ ಭರತ್ ಅಯ್ಯಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ. ಸದ್ಯದ ಮಟ್ಟಿಗೆ ಟರ್ಫ್ ಮೈದಾನದಲ್ಲಿ ಪಂದ್ಯವಾಡಲು ಅನುಮತಿ ಪಡೆಯಲಾಗಿದ್ದು, ಚುನಾವಣಾ ನೀತಿ ಸಂಹಿತೆಯ ಕಾರಣ ಹೊನಲು ಬೆಳಕಿನ ವ್ಯವಸ್ಥೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪ್ರಯತ್ನ ನಡೆಸಿರುವದಾಗಿ ಅವರು ತಿಳಿಸಿದ್ದಾರೆ.
ಇಂಡಿಯನ್ ಆಯಿಲ್, ಮುಂಬೈ ಇಲವೆನ್, ಕರ್ನಾಟಕ ಇಲವೆನ್ ಹಾಗೂ ಸೌತ್ ಸೆಂಟ್ರಲ್ ರೈಲ್ವೆ ತಂಡಗಳು ಇದರಲ್ಲಿ ಪಾಲ್ಗೊಂಡಿವೆ. ತಾ. 18ರಿಂದಲೇ ಪಂದ್ಯ ಮಡಿಕೇರಿ ಯಲ್ಲಿ ನಡೆಯುತ್ತಿದ್ದು, ತಾ. 22ರಂದು ಫೈನಲ್ ಪಂದ್ಯ ಜರುಗಲಿದೆ. ಇದೀಗ ಸಂಜೆ 4ರ ಸಮಯದಲ್ಲಿ ಪಂದ್ಯ ನಡೆಸಲಾಗುತ್ತಿದೆ. ಹೊನಲು ಬೆಳಕಿಗೆ ವ್ಯವಸ್ಥೆ ಹಾಗೂ
(ಮೊದಲ ಪುಟದಿಂದ) ಅನುಮತಿ ದೊರೆತಲ್ಲಿ ನಸುಗತ್ತಲ ವೇಳೆಯಲ್ಲಿ ಪಂದ್ಯಾಟ ವೀಕ್ಷಿಸಬಹುದಾಗಿದೆ. ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಾಟ ನಡೆಯುತ್ತಿದ್ದು, ತಾ. 18ರಂದು ನಡೆದ ಪಂದ್ಯದಲ್ಲಿ ಇಂಡಿಯನ್ ಆಯಿಲ್ ತಂಡ ಕರ್ನಾಟಕ ಇಲವೆನ್ ತಂಡವನ್ನು 2-1 ಗೋಲಿನಿಂದ ಮಣಿಸಿದೆ. ತಾ. 19ರಂದು ನಡೆದ ಮತ್ತೊಂದು ಪಂದ್ಯದಲ್ಲಿ ಕರ್ನಾಟಕ ಇಲವೆನ್ ತಂಡ ಮುಂಬೈ ಇಲವೆನ್ ವಿರುದ್ಧ 5-3 ಗೋಲಿನಿಂದ ಜಯ ಗಳಿಸಿದೆ. ತಾ. 20ರಂದು (ಇಂದು) ಎರಡು ಪಂದ್ಯಗಳು ಜರುಗಲಿವೆ. ಪ್ರಥಮ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್‍ನಲ್ಲಿ ಆಡಲಿವೆ.
ಇಂಡಿಯನ್ ಆಯಿಲ್ ಕಾರ್ಪೋರೇಷನ್ ತಂಡದಲ್ಲಿ ದೀಪಕ್ ಠಾಕೂರ್, ದೇವೇಶ್ ಚೌಹಾಣ್, ಅಫಾನ್ ಯೂಸಫ್, ರೋಷನ್ ಮೆನ್ಸ್, ವಿ.ಆರ್. ರಘುನಾಥ್, ವಿಕ್ರಂಕಾಂತ್, ಜೂನಿಯರ್ ಇಂಡಿಯಾ ವಿಶ್ವಕಪ್ ವಿಜೇತ ತಂಡದ ಮನಪ್ರೀತ್ ಅವರಂತಹ ಆಟಗಾರರಿದ್ದಾರೆ.
ಮುಂಬೈ ಇಲವೆನ್ ಪರ ಬೊವ್ವೇರಿಯಂಡ ಮುತ್ತಣ್ಣ ನಾಯಕರಾಗಿದ್ದರೆ, ದೇವೇಂದ್ರ ವಾಲ್ಮೀಕಿ, ಯುವರಾಜ್ ವಾಲ್ಮೀಕಿ, ಅಮಿತ್ ಗೌಡ, ಸುಧೀರ್, ಕರ್ನಾಟಕ ಇಲವೆನ್ ಪರ ನಿತಿನ್ ತಿಮ್ಮಯ್ಯ, ಪ್ರಧಾನ್ ಸೋಮಣ್ಣ, ಪಿ.ಆರ್. ಅಯ್ಯಪ್ಪ, ಸೌತ್ ಸೆಂಟ್ರಲ್ ರೈಲ್ವೆಯಲ್ಲಿ ಎಂ.ಬಿ. ಪೂಣಚ್ಚ ಅವರಂತಹ ಪ್ರಮುಖ ಆಟಗಾರರಿದ್ದಾರೆ.