ಕುಶಾಲನಗರ, ಏ. 20: ಕಾವೇರಿ ನದಿಗೆ ಕಸ ಎಸೆದು ಕಲುಷಿತಗೊಳಿಸುವ ಜನರಿಗೆ ಕುಷ್ಠರೋಗ ಬರುತ್ತದಂತೆ.....! ಇದು ಕುಶಾಲನಗರ ಕಾವೇರಿ ನದಿ ಸೇತುವೆ ಮೇಲೆ ಅಳವಡಿಸಿರುವ ಫಲಕವೊಂದರಲ್ಲಿ ನದಿ ಕಲುಷಿತ ಗೊಳಿಸುವ ಮಂದಿಗೆ ನೀಡಿರುವ ಎಚ್ಚರಿಕೆಯ ಸೂಚನೆ.

ಕಳೆದ ಕೆಲವು ದಿನಗಳ ಹಿಂದೆ ಕೊಡಗು ಜಿಲ್ಲೆ ಸೇರಿದಂತೆ ವಿವಿಧೆಡೆ ಯುವಬ್ರಿಗೇಡ್‍ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಸ್ಥಳೀಯ ಸಂಘಸಂಸ್ಥೆಗಳ ಕಾರ್ಯ ಕರ್ತರು ಜೀವನದಿಗೆ ಜೀವತುಂಬಿ ಕಾರ್ಯಕ್ರಮದೊಂದಿಗೆ ಹತ್ತಾರು ಟನ್ ಕಲುಷಿತ ತ್ಯಾಜ್ಯವನ್ನು ನದಿಯಿಂದ ತೆರವುಗೊಳಿಸಿ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾವೇರಿ ನದಿ ತಟಗಳಲ್ಲಿ ಹಲವು ಫಲಕಗಳನ್ನು ಅಳವಡಿಸಲಾಗಿದೆ.

ಕೊಡಗು ಜಿಲ್ಲೆಯ ಬಲಮುರಿ, ನೆಲ್ಲಿಹುದಿಕೇರಿ, ಕುಶಾಲನಗರ, ಹಾಸನ ಜಿಲ್ಲೆಯ ರಾಮನಾಥಪುರ ಹಾಗೂ ಮಂಡ್ಯ ಭಾಗದ ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ನೂರಾರು ಸಂಖ್ಯೆಯಲ್ಲಿ ಬ್ರಿಗೇಡ್ ಕಾರ್ಯಕರ್ತರು ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಸಂಪೂರ್ಣ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಯಶಸ್ಸು ಕಂಡಿದ್ದರು. ತದನಂತರದ ದಿನಗಳಲ್ಲಿ ಮತ್ತೆ ಎಂದಿನಂತೆ ಮಾಂಸ ತ್ಯಾಜ್ಯಗಳು ಧಾರ್ಮಿಕ ತ್ಯಾಜ್ಯಗಳು, ಬಟ್ಟೆ ಬರೆಗಳು ನದಿಗೆ ಎಸೆಯದಂತೆ ಕುಶಾಲನಗರದಲ್ಲಿ ಕಾವೇರಿ ಸ್ವಚ್ಛತಾ ಆಂದೋಲನದ ತಂಡ ಕಾರ್ಯ ತತ್ಪರವಾಗಿದ್ದು ನದಿ ತಟಗಳಲ್ಲಿ ಸ್ಥಳೀಯ ಪಂಚಾಯಿತಿ ಸಹಕಾರದೊಂದಿಗೆ ಸಾರ್ವಜನಿಕರಿಗೆ ಅರಿವು ಜಾಗೃತಿ ಮೂಡಿಸುವ ಎಚ್ಚರಿಕೆ ಫಲಕಗಳನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ಪೂಜಾ ಸಾಮಗ್ರಿಗಳೇ ನದಿ ಪಾಲಾಗುತ್ತಿರುವದು ಕಂಡುಬಂದಿದೆ. ದಿನ ಬೆಳಗಾದರೆ ಮನೆಯಿಂದ ಅಥವಾ ಮಂದಿರಗಳಿಂದ ತ್ಯಾಜ್ಯಗಳನ್ನು ಪ್ಲಾಸ್ಟಿಕ್‍ಗಳಲ್ಲಿ ತುಂಬಿ ವಾಹನಗಳಲ್ಲಿ ತಂದು ನದಿಗೆ ಎಸೆಯುತ್ತಿರುವದು ದಿನನಿತ್ಯದ ರೂಢಿಯಾಗಿದೆ.

ಕುಶಾಲನಗರ ಕೊಪ್ಪ ಬಳಿ ನದಿ ಸೇತುವೆ ಮೇಲ್ಭಾಗದಿಂದ ದಿನನಿತ್ಯ ತ್ಯಾಜ್ಯಗಳನ್ನು ಎಸೆಯುತ್ತಿರುವದು ಕಂಡುಬಂದಿದ್ದು, ಯಾವದೇ ತ್ಯಾಜ್ಯಗಳನ್ನು ನದಿಗೆ ಎಸೆದಲ್ಲಿ ದಂಡ ಅಥವಾ ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಲಾಗುವದು ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದ್ದಾರೆ. ಈ ಸಂಬಂಧ ಕಚೇರಿ ಸಿಬ್ಬಂದಿಗಳನ್ನು ಅಂತಹ ಸ್ಥಳಗಳಲ್ಲಿ ನಿಯೋಜಿಸಿ ನದಿ ಕಲುಷಿತಗೊಳಿಸುವ ಜನರಿಗೆ ದಂಡ ವಿಧಿಸುವ ಕ್ರಮಕ್ಕೆ ಮುಂದಾಗುವದಾಗಿ ತಿಳಿಸಿದ್ದಾರೆ.

ಯುವಬ್ರಿಗೇಡ್ ಕಾರ್ಯಕರ್ತರು ಸ್ವಚ್ಛತೆ ಮಾಡಿದ ನಂತರ ಕೊಪ್ಪ ಸೇತುವೆ ಬಳಿ ತ್ಯಾಜ್ಯಗಳನ್ನು ನದಿಗೆ ಎಸೆಯದಂತೆ ಬೆಳಗ್ಗೆ ಹಾಗೂ ಸಂಜೆ ವೇಳೆ ಯುವಕರ ತಂಡ ಕಾವಲು ಕಾಯುತ್ತಿರುವ ದೃಶ್ಯ ಕಂಡುಬಂದಿದೆ. ನದಿಗೆ ಕಸ ಎಸೆಯುವ ಜನರಿಗೆ ಅರಿವು ಮೂಡಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ಅಲ್ಲದೆ ಕೊಪ್ಪ ಅರಣ್ಯ ತಪಾಸಣಾ ಗೇಟ್ ಬಳಿಯಿರುವ ಅಧಿಕಾರಿಗಳು, ಸಿಬ್ಬಂದಿಗಳು ಕೂಡ ಈ ನಿಟ್ಟಿನಲ್ಲಿ ಗಮನಹರಿಸುತ್ತಿದ್ದು, ನದಿಗೆ ಬೀಳುತ್ತಿರುವ ತ್ಯಾಜ್ಯಗಳು ಬಹುತೇಕ ತಪ್ಪಿಸುವಲ್ಲಿ ಕೈಜೋಡಿಸುತ್ತಿದ್ದಾರೆ.

ಕರಪತ್ರಗಳನ್ನು ಹಂಚುವದು, ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಮಾಹಿತಿ ನೀಡುವದರೊಂದಿಗೆ ನದಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ನಡೆಸಲಾಗುತ್ತಿದೆ ಎಂದು ಸ್ಥಳೀಯ ಸಮಾಜ ಸೇವಕ ಕೆ.ಎನ್. ದೇವರಾಜ್ ತಿಳಿಸಿದ್ದಾರೆ.

ಕುಶಾಲನಗರ-ಕೊಪ್ಪ ಸೇತುವೆ ಮೇಲ್ಭಾಗ, ಅಯ್ಯಪ್ಪಸ್ವಾಮಿ ದೇವಾಲಯ ಮತ್ತಿತರ ವ್ಯಾಪ್ತಿಯಲ್ಲಿ ನದಿಗೆ ಕಸ ಅಥವಾ ಇನ್ಯಾವದೇ ತ್ಯಾಜ್ಯ ಎಸೆಯದಂತೆ ಅರಿವು ಜಾಗೃತಿ ಮೂಡಿಸುವ ಫಲಕಗಳೊಂದಿಗೆ ಕೊಪ್ಪ ಸೇತುವೆ ಮೇಲ್ಭಾಗದಲ್ಲಿ ತ್ಯಾಜ್ಯ ಎಸೆಯುವ ವಾಹನಗಳ ಹಾಗೂ ಕಣ್ಗಾವಲಿಗಾಗಿ ಸಿಸಿ ಕ್ಯಾಮೆರಾ ಅಳವಡಿಸಲು ಚಿಂತನೆ ಹರಿಸಲಾಗಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ.

ಅಂತಹ ವ್ಯಕ್ತಿಗಳನ್ನು ಅಥವಾ ವಾಹನಗಳನ್ನು ಪತ್ತೆಹಚ್ಚಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಗುವದು ಎಂದಿದ್ದಾರೆ. ಇದರೊಂದಿಗೆ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಅರ್ಚಕರ ಮೂಲಕ ಧಾರ್ಮಿಕ ತ್ಯಾಜ್ಯಗಳ ವಿಲೇವಾರಿಗೆ ಬದಲೀ ಮಾರ್ಗ ಸೂಚಿಸುವಂತೆ ತಿಳಿಹೇಳುವ ಕೆಲಸ ನಡೆಸಲಾಗುವದು ಎಂದಿದ್ದಾರೆ. - ಸಿಂಚು