ಮಡಿಕೇರಿ, ಏ. 20: ಬರುವ ಮೇ 12 ರಂದು ಕರ್ನಾಟಕದ ವಿಧಾನಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಸಂಬಂಧ, ಇಂದು ಮಡಿಕೇರಿ ಕ್ಷೇತ್ರದಿಂದ ಹಾಲಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ನಾಮಪತ್ರ ಸಲ್ಲಿಸಿದರು. ತಾ. 24 ರಂದು ಬೆಳಿಗ್ಗೆ 11 ಗಂಟೆಗೆ ವೀರಾಜಪೇಟೆ ಕ್ಷೇತ್ರದ ಶಾಸಕರಾಗಿರುವ ಕೆ.ಜಿ. ಬೋಪಯ್ಯ ಉಮೇದುವಾರಿಕೆ ಸಲ್ಲಿಸಲಿದ್ದು, ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಜೈತ್ರಯಾತ್ರೆ ಆರಂಭಗೊಂಡಿದೆ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯ ಪಟ್ಟಿದ್ದಾರೆ.

ಇಂದು ಇಲ್ಲಿನ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆಯಲ್ಲಿ ತೆರಳುವ ಮೂಲಕ ಜಿಲ್ಲಾ ಆಡಳಿತ ಭವನದ ಚುನಾವಣಾಧಿಕಾರಿ ಕಚೇರಿಯಲ್ಲಿ ಅಪ್ಪಚ್ಚುರಂಜನ್ ನಾಮಪತ್ರ ಸಲ್ಲಿಕೆ ಬಳಿಕ, ಸಂಸದರು ಸುದ್ದಿಗಾರರೊಂದಿಗೆ ಮಾತನಾಡಿ, ಮೇಲಿನಂತೆ ನುಡಿದರಲ್ಲದೆ, ಸತತ ಐದನೇ ಬಾರಿಗೆ ಕರ್ನಾಟಕ ವಿಧಾನಸಭೆಗೆ ಸ್ಪರ್ಧೆ ಮಾಡುತ್ತಿರುವ ಅಪ್ಪಚ್ಚುರಂಜನ್ ಹಾಗೂ ನಾಲ್ಕನೇ ಬಾರಿಗೆ ಸ್ಪರ್ಧಿಸುತ್ತಿರುವ ಕೆ.ಜಿ. ಬೋಪಯ್ಯ ಈ ಬಾರಿ ಗೆಲುವಿನ ಮುನ್ನುಡಿಯೊಂದಿಗೆ, ಭವಿಷ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಬಿ.ಎಸ್. ಯಡಿಯೂರಪ್ಪ ಅವರಿಗೆ ಶಕ್ತಿ ತುಂಬಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದರು. ಇಂದಿನಿಂದ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸಿನೊಂದಿಗೆ ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುವಂತಾಗಿದೆ ಎಂದು ಅವರು ಭವಿಷ್ಯ ನುಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಈ ಸಂದರ್ಭ ಮಾತನಾಡಿ, ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿನೊಂದಿಗೆ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಕನಸಿನ 150 ಸ್ಥಾನಗಳ ಗುರಿ ಸಾಧನೆಗೆ ಕೊಡಗು ಕೊಡುಗೆ ನೀಡುವದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಕೆಜಿಬಿ ಆಶಯ: ತಮ್ಮ ಹೆಸರು ಅಧಿಕೃತ ಪ್ರಕಟಗೊಳ್ಳದಿದ್ದರೂ ಬೆಳಿಗ್ಗೆ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಎಂ.ಪಿ. ಅಪ್ಪಚ್ಚುರಂಜನ್ ಅವರೊಂದಿಗೆ ಉತ್ಸಾಹದಿಂದಲೇ ಭಾಗಿಯಾಗಿದ್ದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು, ಕೇಂದ್ರದಲ್ಲಿ ಪ್ರಧಾನಿ ಮೋದಿ ನಾಯಕತ್ವದ ಸರಕಾರದ ಉತ್ತಮ ಕೆಲಸಗಳು ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಜನತೆ ಆಶೀರ್ವದಿಸಿ ಗೆಲುವು ತಂದುಕೊಡುವಂತೆ ಈ ಸಂದರ್ಭ ಕರೆ ನೀಡಿದರು. ತಮಗೆ ಟಿಕೆಟ್ ವಿಳಂಬದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಬೋಪಯ್ಯ

(ಮೊದಲ ಪುಟದಿಂದ) ‘ನೋ ಕಮೆಂಟ್ಸ್’ ಎಂದಷ್ಟೇ ಪ್ರತಿಕ್ರಿಯಿಸಿದರು.

ಅಪ್ಪಚ್ಚು ರಂಜನ್ ವಿಶ್ವಾಸ : ಉಮೇದುವಾರಿಕೆ ಸಲ್ಲಿಸಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡುತ್ತಾ, ಬಿಜೆಪಿಯ ಗೆಲುವು ನಿಶ್ಚಿತವೆಂದು ವಿಶ್ವಾಸದ ನುಡಿಯಾಡಿದರು. ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ದಿನಗಳಲ್ಲಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದ್ದಾಗಿ ಬೊಟ್ಟು ಮಾಡಿದರು. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೊಡಗಿನ ಬಗ್ಗೆ ಮಲತಾಯಿ ಧೋರಣೆ ತಳೆದಿದ್ದಾಗಿ ಬೊಟ್ಟು ಮಾಡಿದರು.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಭ್ರಮನಿರಸನಗೊಂಡಿದ್ದು, ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಬಿಜೆಪಿಗೆ ಆಶೀರ್ವದಿಸುವ ಮೂಲಕ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ಅವಕಾಶ ಕಲ್ಪಿಸಲಿರುವದಾಗಿ ವಿಶ್ವಾಸದ ನುಡಿಯಾಡಿದರು.

ನಾಲ್ಕು ಜತೆ ನಾಮಪತ್ರ : ಜಿಲ್ಲೆಯಲ್ಲಿ ಸಮಗ್ರ ಅಭಿವೃದ್ಧಿಗಾಗಿ ಇನ್ನಷ್ಟು ಉತ್ತಮ ಕೆಲಸ ಮಾಡುವ ಆಶಯದಿಂದ ಮತ್ತೆ ಜನತೆಯ ಆಶೀರ್ವಾದ ಬಯಸುವದಾಗಿ ನುಡಿದ ಅವರು, ಇಂದು ನಾಲ್ಕು ಜತೆ ಉಮೇದುವಾರಿಕೆ ಪತ್ರ ಸಲ್ಲಿಸಿರುವದಾಗಿ ವಿವರ ನೀಡಿದರು. ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಿಂದ ನೂರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಗಾಂಧಿ ಮೈದಾನ ತನಕ ತೆರಳಲಾಯಿತು. ಜಿಲ್ಲಾಧಿಕಾರಿ ಕಚೇರಿ ಪ್ರವೇಶ ದ್ವಾರದ ಕಾಫಿ ಬೆಳೆಗಾರ ಸಹಕಾರ ಸಂಘದ ಕಟ್ಟಡ ಬಳಿ ಬಿಗಿ ಭದ್ರತೆಯೊಂದಿಗೆ ಕಾರ್ಯಕರ್ತರಿಗೆ ತಡೆಯಲಾಯಿತು. ಹೀಗಾಗಿ ನಗರದ ಮುಖ್ಯ ಬೀದಿಗಳಲ್ಲಿ ಸಾಗಿದ ಬಿಜೆಪಿ ಮೆರವಣಿಗೆ ಮೊಟಕುಗೊಂಡಿತು.

ಐವರಿಗೆ ಪ್ರವೇಶ : ಅಲ್ಲಿಂದ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲು ಐದು ಮಂದಿಗೆ ಮಾತ್ರ ಅಭ್ಯರ್ಥಿಯ ಸಹಿತ ಪ್ರವೇಶಾವಕಾಶ ಕಲ್ಪಿಸಲಾಯಿತು. ಹೀಗಾಗಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚುರಂಜನ್ ಅವರೊಂದಿಗೆ ಇನ್ನೋರ್ವ ಶಾಸಕ ಕೆ.ಜಿ. ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಸಂಸದ ಪ್ರತಾಪ್ ಸಿಂಹ ಹಾಗೂ ಚುನಾವಣಾ ಪ್ರತಿನಿಧಿಯಾಗಿ ಬಿಜೆಪಿಯ ಎಂ.ಬಿ. ಅಭಿಮನ್ಯು ಕುಮಾರ್ ತೆರಳಿ ಉಮೇದುವಾರಿಕೆ ಸಲ್ಲಿಸಲು ಸಾಥ್ ನೀಡಿದರು.

ಮಾದ್ಯಮದವರಿಗೂ ತಡೆ : ನಾಮಪತ್ರ ಸಲ್ಲಿಕೆ ಸಭಾಂಗಣಕ್ಕೆ ಮಾದ್ಯಮದವರಿಗೂ ಪೊಲೀಸರು ತಡೆಯೊಡ್ಡಿದರು. ಹೀಗಾಗಿ ಮಾದ್ಯಮ ಮಂದಿ ಸಭಾಂಗಣ ಬಾಗಿಲು ಬಳಿಯಿಂದಲೇ ಈ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ಚಿತ್ರೀಕರಿಸಿಕೊಳ್ಳಬೇಕಾಯಿತು. ಪೊಲೀಸ್ ಇಲಾಖೆಯ ಚುನಾವಣಾ ನೋಡಲ್ ಅಧಿಕಾರಿ ಕೆ.ಎಸ್. ಸುಂದರ್‍ರಾಜ್ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಬಿಜೆಪಿ ಮುಖಂಡರಾದ ವಿ.ಕೆ. ಲೋಕೇಶ್, ಶಾಂತೆಯಂಡ ರವಿಕುಶಾಲಪ್ಪ, ರಾಬಿನ್ ದೇವಯ್ಯ, ಬಾಲಚಂದ್ರ ಕಳಗಿ, ಎಂ.ಎನ್. ಕುಮಾರಪ್ಪ, ತಳೂರು ಕಿಶೋರ್ ಕುಮಾರ್, ಐನಂಡ ಜಪ್ಪು ಅಚ್ಚಪ್ಪ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಶಜಿಲ್ ಕೃಷ್ಣನ್, ಎನ್.ಎಂ. ಕಾಳಪ್ಪ, ಪಿ.ಕೆ. ಶೇಷಪ್ಪ, ಬೆಲ್ಲು ಸೋಮಯ್ಯ, ರವಿ ಬಸಪ್ಪ, ಎಂ.ಕೆ. ಅರುಣ್ ಕುಮಾರ್, ಮಹೇಶ್ ಜೈನಿ ಸೇರಿದಂತೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ವಿ.ಎನ್. ವಸಂತ್‍ಕುಮಾರ್ ಒಳಗೊಂಡಂತೆ ವಿವಿಧ ಮೋರ್ಚಾ ಪದಾಧಿಕಾರಿಗಳು, ಮಹಿಳಾ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರಮುಖರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.