ಮಡಿಕೇರಿ, ಏ. 20: ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ವರಿಷ್ಠರು ಮತ್ತೊಮ್ಮೆ ಅವಕಾಶ ನೀಡುವದರೊಂದಿಗೆ, ತನ್ನ ಮೇಲೆ ವಿಶ್ವಾಸವಿಟ್ಟಿದ್ದಕ್ಕೆ ಅಭಾರಿಯಾಗಿ ರುವೆ ಎಂದು ಹಾಲಿ ಶಾಸಕ ಕೆ.ಜಿ. ಬೋಪಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.
ಇಂದು ಸಂಜೆ ಅಧಿಕೃತವಾಗಿ ಪಕ್ಷದಿಂದ ಟಿಕೆಟ್ ಘೋಷಣೆ ಯಾಗುವ ತನಕ ಸಂಯಮದಿಂದ ನಡೆದುಕೊಂಡಿದ್ದ ಅವರು ಟಿಕೆಟ್ ಖಾತರಿಗೊಂಡ ಬೆನ್ನಲ್ಲೆ ಮೇಲಿನಂತೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು.ಅಲ್ಲದೆ 2004 ರಿಂದ ಸತತವಾಗಿ ಜಿಲ್ಲೆಯ ಜನತೆ, ಸಂಘಸಂಸ್ಥೆಗಳ ಪ್ರಮುಖರು, ವಿಶೇಷವಾಗಿ ಪಕ್ಷದ ಕಾರ್ಯಕರ್ತರು ತನ್ನ ಮೇಲೆ ವಿಶ್ವಾಸವಿಟ್ಟು ಮತ್ತೊಮ್ಮೆ ಸೇವೆ ಸಲ್ಲಿಸಲು ಈ ಮೂಲಕ ಅನುವು ಮಾಡಿಕೊಟ್ಟಿದ್ದಕ್ಕೆ ಪ್ರಾಮಾಣಿಕ ನೆಲೆಯಲ್ಲಿ ಉತ್ತಮ ಸೇವೆಯಲ್ಲಿ ತೊಡಗಿಸಿಕೊಳ್ಳುವದಾಗಿ ಅವರು ಮಾರ್ನುಡಿದರು.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸ್ವಚ್ಛ ಭಾರತ್ ಯೋಜನೆ ಯಂತಹ ಕಾರ್ಯಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿ ಅನುಷ್ಠಾನಗೊಳಿಸಲು ಶ್ರಮಿಸುವದರೊಂದಿಗೆ, ಜನತೆಯ ನಿರೀಕ್ಷೆಗೆ ಧಕ್ಕೆಯಾಗ ದಂತೆ ಸ್ಪಂದಿಸುವದಾಗಿ ವಿಶ್ವಾಸದ ನುಡಿಯಾಡಿದರು.
ಮೆರವಣಿಗೆ: ತಾ. 24 ರಂದು ಬೆಳಿಗ್ಗೆ 10 ಗಂಟೆಗೆ ವೀರಾಜಪೇಟೆಯ ದೊಡ್ಡಟ್ಟಿ ಚೌಕ್ ಬಳಿ ಬಿಜೆಪಿ ಕಚೇರಿಯಿಂದ ಚುನಾವಣಾಧಿಕಾರಿ ಕಚೇರಿಯ ತನಕ ಮೆರವಣಿಗೆಯಲ್ಲಿ ತೆರಳಿ ಉಮೇದುವಾರಿಕೆ 11 ಗಂಟೆಗೆ ಸಲ್ಲಿಸುವದಾಗಿ ಬೋಪಯ್ಯ ಅವರು ನುಡಿದರು. ಅಲ್ಲದೆ ತಾಲೂಕು ಮೈದಾನದಲ್ಲಿ ಕಾರ್ಯಕರ್ತರು, ಹಿತೈಷಿಗಳೊಂದಿಗೆ ಸಮಾಲೋಚನೆ ನಡೆಸುವದಾಗಿ ವಿವರಿಸಿದರು.