ಮಡಿಕೇರಿ, ಏ. 20: ನಾಪೋಕ್ಲುವಿನಿಂದ ಮಡಿಕೇರಿಗೆ ವರ್ಗಾವಣೆಗೊಂಡಿರುವ ಪ್ರತಿಷ್ಠಿತ ನಾಲ್ಕು ತಂಡಗಳ ಹಾಕಿ ಪಂದ್ಯಾಟದಲ್ಲಿ ಇದೀಗ ಮತ್ತೊಂದು ಬದಲಾವಣೆ ಯಾಗಲಿದೆ. ಪ್ರಸಿದ್ಧ ತಂಡಗಳು, ಖ್ಯಾತ ಆಟಗಾರರು ಆಡುತ್ತಿದ್ದರೂ ಮಡಿಕೇರಿಯಲ್ಲಿ ಕ್ರೀಡಾಪ್ರೇಮಿಗಳು ವಿರಳವಾಗಿ ಪಂದ್ಯವೀಕ್ಷಿಸಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಪಂದ್ಯಾವಳಿಯ ಫೈನಲ್ ಪಂದ್ಯಾಟವನ್ನು ಹಾಕಿಗೆ ಹೆಚ್ಚು ಉತ್ತೇಜನ ಸಿಗುವ ಪೊನ್ನಂಪೇಟೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಸಂಘಟಕರಾದ ಪೂನಾ ಬಿ. 360ರ ಮಂಡೇಟಿರ ಭರತ್ ಅಯ್ಯಪ್ಪ ತಿಳಿಸಿದ್ದಾರೆ.

ತಾ. 20 ರಂದು ನಡೆದ ಪಂದ್ಯದಲ್ಲಿ ಸೌತ್‍ಸೆಂಟ್ರಲ್ ರೈಲ್ವೆ ತಂಡ ಕರ್ನಾಟಕ ಇಲವೆನ್ ತಂಡವನ್ನು 2-1 ಗೋಲಿನಿಂದ ಸೋಲಿಸಿದೆ. ಮತ್ತೊಂದು ಪಂದ್ಯದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ತಂಡ ಮುಂಬೈ ಇಲವೆನ್ ತಂಡವನ್ನು 3-2 ಗೋಲಿನಿಂದ ಸೋಲಿಸಿದ್ದು, ಅಗ್ರಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದೆ. ಇತರ ತಂಡಗಳ ಸ್ಥಾನ ತಾ. 21ರ ಪಂದ್ಯದಿಂದ ನಿರ್ಧಾರವಾಗಬೇಕಿದೆ. ತಾ. 21ರ ಒಂದು ಪಂದ್ಯ ಮಡಿಕೇರಿಯಲ್ಲೇ ಜರುಗಲಿದೆ. ಅಪರಾಹ್ನ 3ಕ್ಕೆ ಸೌತ್ ಸೆಂಟ್ರಲ್ ರೈಲ್ವೆ ಹಾಗೂ ಮುಂಬೈ ಇಲವೆನ್ ನಡುವಿನ ಪಂದ್ಯಾಟ ಜರುಗಲಿದ್ದು, ತಾ. 22ರ ಪಂದ್ಯ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯಲಿರುವದಾಗಿ ಭರತ್ ತಿಳಿಸಿದ್ದಾರೆ. ಮೂರು ಹಾಗೂ ನಾಲ್ಕನೇ ಸ್ಥಾನದ ಪಂದ್ಯ ಅಂದು ಅಪರಾಹ್ನ 2ಕ್ಕೆ ಹಾಗೂ ಫೈನಲ್ ಪಂದ್ಯ ಸಂಜೆ 4 ಕ್ಕೆ ಪೊನ್ನಂಪೇಟೆ ಯಲ್ಲಿ ಜರುಗಲಿರುವದಾಗಿ ಅವರು ಮಾಹಿತಿ ನೀಡಿದ್ದಾರೆ.