ಮಡಿಕೇರಿ, ಏ. 20: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ಗಮನ ಸೆಳೆದಿರುವ ಎಂ.ಆರ್. ಸೀತಾರಾಂ ಅವರು ಬೆಂಗಳೂರಿನ ಮಲ್ಲೇಶ್ವರಂನಿಂದ ಟಿಕೆಟ್ ಪಡೆಯಲು ಹಿಂದೆ ಸರಿದಿದ್ದು, ಇಲ್ಲಿನ ಟಿಕೆಟ್ ಅನ್ನು ಈ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಹಿರಿಯ ವಕೀಲ ದಿವಾಕರ್ ಅವರಿಗೆ ನೀಡಲಾಗಿದೆ. ಸಚಿವ ಸೀತಾರಾಮ್ ಅವರು ಮಲ್ಲೇಶ್ವರಂ ಟಿಕೆಟ್ ನಿರಾಕರಿಸಿರುವದರ ಹಿಂದೆ ಹಲವು ರಾಜಕೀಯ ಕಾರಣಗಳಿರುವದಾಗಿ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ನಿಂದ ಸೀತಾರಾಂ ಅವರಿಗೆ ಟಿಕೆಟ್ ಘೋಷಿಸಲಾಗಿ ತ್ತಾದರೂ ಸೀತಾರಾಂ ಅವರು ಇದಕ್ಕೆ ಒಪ್ಪಿಲ್ಲ ಮಲ್ಲೇಶ್ವರಂನಿಂದ ಬಿಜೆಪಿ ಅಭ್ಯರ್ಥಿಯಾಗಿ ಅಶ್ವಥ್ ನಾರಾಯಣ ಗೌಡ ಅವರು ಅಭ್ಯರ್ಥಿಯಾಗಿದ್ದು, ಇಲ್ಲಿ ಜಾತಿ ಆಧಾರವೇ ಪ್ರಬಲ ವಾಗಲಿದೆ ಎನ್ನಲಾಗುತ್ತಿದೆ. ಅಶ್ವಥ್ನಾರಾಯಣ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಈ ಕ್ಷೇತ್ರದಲ್ಲಿ ಒಕ್ಕಲಿಗರೊಂದಿಗೆ ಬ್ರಾಹ್ಮಣ ಮತದಾರರೂ ಹೆಚ್ಚಿದ್ದಾರೆ. ಸೀತಾರಾಂ ಅವರು ಹಿಂದುಳಿದ ವರ್ಗಕ್ಕೆ ಸೇರಿದ್ದು, ಇಲ್ಲಿ ನಿಂತರೆ ಗೆಲುವು ಕಷ್ಟ ಎಂದು ಹೇಳಲಾಗುತ್ತಿತ್ತು. ಈ ಕಾರಣದಿಂದಲೇ ಸೀತಾರಾಂ ಟಿಕೆಟ್ ಪಡೆಯಲು ಹಿಂದೇಟು ಹಾಕಿರುವರಂತೆ. ಈ ವಿಚಾರ ಕೊಡಗಿಗೆ ಯಾಕೆ ಎಂದು ಕೌತುಕವೇ? ಈ ವಿಚಾರದಲ್ಲಿ ರಾಜಕೀಯದ ಸೋಂಕು ಇರುವದಾಗಿ ಹೇಳಲಾಗುತ್ತಿದೆ.ಒಂದು ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮತ್ತೆ ಬಂದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಅವರಿಗೆ ಈ ಬಾರಿ ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್ ಅವರಿಂದ ತೀವ್ರ ಸ್ಪರ್ಧೆ ಖಚಿತ. ಇವರ ಬಳಿಕದ ಮತ್ತೊಂದು ಹೆಸರು ಇರುವದು ಸಚಿವ ಸೀತಾರಾಂ ಅವರದ್ದಂತೆ. ಈ ಹಿಂದೆ ಸೀತಾರಾಂ ಅವರು ಕೆಲವು ವಿಚಾರಗಳಲ್ಲಿ ಸಿದ್ದರಾಮಯ್ಯ
(ಮೊದಲ ಪುಟದಿಂದ) ಅವರಿಗೆ ಕೆಲ ವಿಚಾರದಲ್ಲಿ ಮನಸ್ತಾಪವಾಗಿದೆ. ಹೈಕಮಾಂಡ್ ಒಟ್ಟಿಗೆ ಉತ್ತಮ ಬಾಂಧವ್ಯ ಇರುವ ಸೀತಾರಾಂ ತಮಗೇನು ಬೇಕು ಅದನ್ನು ಹೈಕಮಾಂಡ್ನಿಂದಲೇ ನೇರವಾಗಿ ಪಡೆದಿದ್ದಾರೆ. ಮತ್ತೆ ನಾಲ್ವರ ಪೈಪೋಟಿ ನಡುವೆ ಇವರಿಗೆ ಅಚಾನಕ್ ಆಗಿ ಉತ್ತಮ ಅವಕಾಶ ದೊರೆತರೂ ದೊರೆಯಬಹುದು ಎಂಬದು ಲೆಕ್ಕಾಚಾರವಂತೆ.
ಈ ವಿಚಾರವೇ ಕೊಡಗಿಗೂ ಥಳಕು ಹಾಕಿರುವದಾಗಿ ಹೇಳಲಾಗುತ್ತಿದೆ. ಸಚಿವ ಸೀತಾರಾಂ ಅವರ ಆಪ್ತರಾಗಿರುವ ಕದ್ದಣಿಯಂಡ ಹರೀಶ್ ಬೋಪಣ್ಣ ಅವರ ಹೆಸರು ಪಕ್ಷ ನಡೆಸಿರುವ ಸೀ.ಫೋರ್ ಸಮೀಕ್ಷೆಯಲ್ಲಿದ್ದು, ಅವರು ಗೆಲುವಿನ ವಿಚಾರದಲ್ಲಿ ಮುಂಚೂಣಿಯಲ್ಲಿದ್ದರಂತೆ ಆದರೆ ಅವರು ಸೀತಾರಾಂ ಆಪ್ತರಾಗಿರುವದು ಹಾಲಿ ಸಿಎಂಗೆ ಅಷ್ಟಕಷ್ಟೆ. ಬದಲಿಗೆ ಅರುಣ್ ಮಾಚಯ್ಯ ಸಿದ್ದರಾಮಯ್ಯ ಅವರಿಗೆ ಆಪ್ತರು. ಈ ಕಾರಣದಿಂದ ಹರೀಶ್ಗೆ ಟಿಕೆಟ್ ತಪ್ಪಿದೆ ಎಂಬದು ಅವರ ಬೆಂಬಲಿಗರ ಮಾತು. ಪ್ರಸ್ತುತ ಅರುಣ್ಗೆ ಟಿಕೆಟ್ ದೊರೆತಿದ್ದರೂ ಸದ್ಯದ ಮಟ್ಟಿಗೆ ದಾರಿ ಸುಗಮವಾಗಿಲ್ಲ. ಬದಲಿಗೆ ಬಂಡಾಯ ಸ್ಪರ್ಧೆಗೆ ಹರೀಶ್ಗೆ ಅವರ ಸ್ನೇಹಿತರು ಒತ್ತಡ ಹಾಕುತ್ತಿದ್ದಾರೆನ್ನಲಾಗಿದೆ.
ಆದರೆ, ಹರೀಶ್ ಅವರು ಸದ್ಯದ ಮಟ್ಟಿಗೆ ಬಂಡಾಯ ಸ್ಪರ್ಧೆಗೆ ಬಯಸಿಲ್ಲ. ಏಕೆಂದರೆ, ಇನ್ನೂ ಲಭ್ಯವಿರುವ ಕೆಲವೇ ಅವಧಿಯಲ್ಲಿ ಇಡೀ ಕ್ಷೇತ್ರವನ್ನು ಸುತ್ತಿ , ಪ್ರಚಾರ ನಡೆಸಿ, ಜನ ಸಂಪರ್ಕ ನಡೆಸುವದು ಕಷ್ಟ ಸಾಧ್ಯ ಎಂದು ಅವರು ಪಕ್ಷೇತರವಾಗಿ ಸ್ಪರ್ಧಿಸುವ ನಿಲುವಿನಿಂದ ಹಿಂಜರಿದಿದ್ದಾರೆ ಎಂದು ತಿಳಿದು ಬಂದಿದೆ.