ಸಿದ್ದಾಪುರ, ಏ. 20: ಟೀಕ್ ವುಡ್ ಎಸ್ಟೇಟ್‍ನಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಶ್ರದ್ಧಾ ಭಕ್ತಿಯಿಂದ ನಡೆಯಿತು.

ಗಣಪತಿ ಹೋಮ, ಬಿಂಬ ಶುದ್ದಿ, ಚಂಡಿಕಾಯಾಗ ಮತ್ತು ಮಧ್ಯಾಹ್ನದ ಮಹಾಪೂಜೆಯು ನಿಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು. ವಿವಿಧ ಪೂಜಾ ಪ್ರಸಾದದೊಂದಿಗೆ ಶ್ರೀ ಚಾಮುಂಡೇಶ್ವರಿ ದೇವಿಯ ಭಾವಚಿತ್ರವನ್ನು ವಿತರಿಸಲಾಯಿತು.

ಮಂಬೈಯ ಪ್ರಸಿದ್ದ ಗಾಯಕ ಪಿ.ಎಸ್.ಕೃಷ್ಣಮೂರ್ತಿ ರಚಿಸಿದÀ ಶ್ರೀ ಚಾಮುಂಡೇಶ್ವರಿ ನಾಮ ಪಾರಾಯಣವನ್ನು ಭಗವಾನ್ ಶ್ರೀಲಾ ಶ್ರೀ ಶಕ್ತಿವಡಿವೇಲ್ ಸ್ವಾಮಿಗಳು ಲೋಕಾರ್ಪಣೆಗೊಳಿಸಿದರು.

ಮೈಸೂರಿನ ಆದಿಚುಂಚನಗಿರಿ ಮಠದ ಶ್ರೀಗಳು ಮತ್ತು ಉತ್ತರದ ಕಾಶಿ ಮಠದ ರಾಮಚಂದ್ರ ಗುರೂಜಿ ಯವರು ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದರು. ಕೇರಳದ ಚಂಡೆವಾದನ, ಕೊಡಗಿನ ಬ್ಯಾಂಡ್ ವಾದ್ಯಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವದ ಅಂಗವಾಗಿ ನಡೆದವು.

ರಾತ್ರಿ ಯಾಮಿನಿ ಮುತ್ತಣ್ಣ ಮತ್ತು ತಂಡದವರಿಂದ ಭರತನಾಟ್ಯ ಪ್ರದರ್ಶನ ಆಕರ್ಷಕ ಚಂಡೆ ವಾದ್ಯದೊಂದಿಗೆ ಶ್ರೀದೇವಿಯ ನೃತ್ಯಬಲಿ ನೆರವೇರಿತು. ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಿತು.

ಪಂಡ್ರಿಮಲೆಯ ಶ್ರೀಲಾ ಶ್ರೀ ಶಕ್ತಿವಡಿವೇಲ್ ಸ್ವಾಮಿಗಳು, ದೇವಸ್ಥಾನದ ಪ್ರಮುಖರಾದ ಕಂಬೀರಂಡ ನಂಜಪ್ಪ ಮತ್ತು ದಂಪತಿ, ಹಾಗೂ ಕುಟುಂಬಸ್ಥರು ಸೇರಿದಂತೆ ಪ್ರಮುಖರು, ಭಕ್ತರು ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.