ಮಡಿಕೇರಿ, ಏ. 20: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಡಿಕೇರಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮಡಿಕೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮಡಿಕೇರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ. ಕಾರ್ಯಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಪಾರ್ವತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ತಾಲೂಕಿನಲ್ಲಿರುವ ಕಡಿಮೆ ತೂಕದ ಹಾಗೂ ಅಪೌಷ್ಟಿಕ ಮಕ್ಕಳ ಬಗ್ಗೆ ನಡೆಸುತ್ತಿರುವ ಆರೋಗ್ಯ ತಪಾಸಣಾ ಶಿಬಿರದ ಉದ್ದೇಶದ ಬಗ್ಗೆ ತಿಳಿಸಿಕೊಟ್ಟರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮಡಿಕೇರಿಯ ನಿರ್ದೇಶಕÀ ಡಾ. ಕಾರ್ಯಪ್ಪ ಮಾತನಾಡಿ, ತಾಲೂಕಿನಲ್ಲಿರುವ ಅತೀ ಕಡಿಮೆ ತೂಕದ ಹಾಗೂ ಅಪೌಷ್ಟಿಕ ಮಕ್ಕಳ ಬಗ್ಗೆ ಹೆಚ್ಚಿನ ಗಮನಹರಿಸಿ ಅತೀ ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಜಿಲ್ಲಾ ಆಸ್ಪತ್ರೆ ಮಡಿಕೇರಿಯ ಎನ್.ಆರ್.ಸಿ. ಕೇಂದ್ರದಲ್ಲಿ ಉಚಿತವಾಗಿ 14 ದಿನಗಳು ಪ್ರೊಟೀನ್‍ಯುಕ್ತ ಆಹಾರವನ್ನು ನೀಡಲಾಗುವದೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಜಗದೀಶ್ ಮಾತನಾಡಿ, ತಾಲೂಕಿನಲ್ಲಿ 39 ಕಡಿಮೆ ತೂಕದ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರದೊಂದಿಗೆ ಗುರುತಿಸಿದ್ದು, ಇದರಲ್ಲಿ ಕಡಿಮೆ ತೂಕದ ಅತೀ ಹೆಚ್ಚು ಅಪೌಷ್ಟಿಕತೆ ಹೊಂದಿರುವ ಮಕ್ಕಳನ್ನು ಗುರುತಿಸಿ ಇದಕ್ಕೆ ತಕ್ಕಂತೆ ಚಿಕಿತ್ಸೆ ನೀಡಲಾಗುವದು ಹಾಗೂ ಅತೀ ಹೆಚ್ಚು ಅಪೌಷ್ಟಿಕತೆ ಇರುವ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಯ ಎನ್.ಆರ್.ಸಿ. ಕೇಂದ್ರದಲ್ಲಿ 14 ದಿನಗಳವರೆಗೆ ಒಳ ರೋಗಿಗಳಾಗಿ ಇರಿಸಿಕೊಂಡು ಪ್ರೊಟೀನ್‍ಯುಕ್ತ ಆಹಾರವನ್ನು ನೀಡಲಾಗುವದು ಹಾಗೂ ತೂಕ ಹೆಚ್ಚಾಗುವಂತೆ ಪೌಷ್ಟಿಕ ಆಹಾರ ನೀಡಿ ಪ್ರಯತ್ನಿಸಲಾಗುವದು ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆ ಮಕ್ಕಳ ತಜ್ಞರಾದ ಡಾ. ಕೃಷ್ಣಾನಂದ್, ಡಾ. ಪುರುಶೋತ್ತಮ್, ಡಾ. ದಿವ್ಯರಾಣಿ, ವೈದ್ಯಾಧಿಕಾರಿಗಳಾದ ಡಾ. ಶಿವಶಂಕರ್ ಭಟ್ ಭಾಗವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಪರಿಶ್ರಮದಿಂದ 32 ಅಂಗನವಾಡಿ ಕೇಂದ್ರಗಳಿಗೆ ಸಂಬಂಧಿಸಿದ ವಿಪರೀತ ಕಡಿಮೆ ತೂಕದ ಮಕ್ಕಳು ಹಾಜರಾಗಿ ಯಶಸ್ವಿಯಾಗಿ ಆರೋಗ್ಯ ತಪಾಸಣೆ ಹಾಗೂ ಮಾಹಿತಿ ಶಿಬಿರವು ನೆರವೇರಿತು. ಶಿಬಿರದಲ್ಲಿ 32 ಮಕ್ಕಳನ್ನು ಆರೋಗ್ಯ ತಪಾಸಣೆ ನಡೆಸಿ 12 ಮಕ್ಕಳನ್ನು ಅಪೌಷ್ಟಿಕತೆಯುಳ್ಳ ಮಕ್ಕಳೆಂದು ಮಕ್ಕಳ ತಜ್ಞರಾದ ಡಾ. ದಿವ್ಯರಾಣಿ ಹಾಗೂ ವೈದ್ಯಾಧಿಕಾರಿಗಳ ಮೂಲಕ ಗುರುತಿಸಲಾಯಿತು.
ಪುಷ್ಪರವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಮಯಂತಿ ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲರನ್ನು ಸ್ವಾಗತಿಸಿದರು. ಟಿ.ಎನ್. ಪಾಲಾಕ್ಷ ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತ ಕೀರ್ತನ್‍ರವರು ವಂದನಾರ್ಪಣೆ ಮಾಡಿದರು.