ಈ ದೇಶದ ಶ್ರೇಣಿಕೃತ ಜಾತಿ ವ್ಯವಸ್ಥೆಯ ಅತ್ಯಂತ ಕೆಳ ಜಾತಿಯಲ್ಲಿ ಹುಟ್ಟಿ ವಿಶ್ವ ಜ್ಞಾನಿಯಾದ ಡಾ. ಬಿ.ಆರ್. ಅಂಬೇಡ್ಕರ್‍ರವರ 127ನೇ ಜನ್ಮ ದಿನಾಚರಣೆಯನ್ನು ಇಡೀ ವಿಶ್ವವೇ ಏಪ್ರಿಲ್ 14 ರಂದು ಆಚರಿಸಿದೆ. ಇದೊಂದು ವಿಸ್ಮಯಕಾರಿ ಬೆಳವಣಿಗೆ ಎಂದರೆ ಅತಿಶಯೋಕ್ತಿಯಾಗಲಾರದು. ಏಕೆಂದರೆ ಸಾವಿರಾರು ವರ್ಷಗಳ ಕಾಲ ಈ ದೇಶದ ಬಹು ಜನರಿಗೆ ಶಿಕ್ಷಣವನ್ನೇ ನೀಡಬಾರದೆಂಬ ಕಠಿಣ ಕಾನೂನನ್ನೇ ವಿಧಿಸಿದ ಮನುಧರ್ಮ ಶಾಸ್ತ್ರದ ವಿರುದ್ಧ ಈ ಮಟ್ಟದ ಸಾಧನೆ ಮಾಡಿದ ಡಾ. ಅಂಬೇಡ್ಕರ್ ಅವರ ಬದುಕು ಅಸಮಾನ್ಯವಾದುದು. ಕಟ್ಟಿಟ್ಟ ಜ್ಞಾನ ಕೊಳೆಯುತ್ತದೆ, ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ ಎಂಬ ಮಾತು ಎಷ್ಟು ಸಮಂಜಸ ಎಂಬದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಜ್ಞಾನವೆಂಬದು ಸಾಧಕರ ಸೊತ್ತೇ ಹೊರತು ಕುತಂತ್ರಿಗಳ ಸೊತ್ತಲ್ಲ ಎಂಬದನ್ನು ಸಾರಿದ ಬಾಬಾ ಸಾಹೇಬರ ಸಾಹಸ ಗಾಥೆಯನ್ನು ಈ ದೇಶದ ಎಲ್ಲಾ ಜನರೂ ತಿಳಿದುಕೊಳ್ಳಬೇಕಾಗಿರುವದು ಇಂದಿನ ಅಗತ್ಯವಾಗಿದೆ. ಏಕೆಂದರೆ ಇಂದೂ ಸಹ ಅಸಮಾನತೆಗೆ ಕಾರಣರಾದ ಜನರ ಮುಂದುವರೆದ ಪೀಳಿಗೆ ತಮ್ಮ ಕುತಂತ್ರದ ದಾಳವನ್ನು ಉರುಳಿಸಲು ಸಜ್ಜಾಗುತ್ತಿರುವಾಗ ಬಾಬಾ ಸಾಹೇಬರು ಈ ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿಕೊಂಡು ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಈ ದೇಶದ ಎಲ್ಲಾ ಜನರ ಮೇಲಿದೆ. ಒಂದು ವೇಳೆ ನಾವು ಮೈಮರೆತಿದ್ದೇ ಆದರೆ ಇತಿಹಾಸದ ಮರುಕಳಿಕೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದನ್ನು ಬಾಬಾ ಸಾಹೇಬರ ಮಾತಿನಲ್ಲೇ ಹೇಳುವದಾದರೆ ‘ಇತಿಹಾಸವನ್ನು ಮರೆತವರು (ಅರಿಯದವರು) ಇತಿಹಾಸವನ್ನು ಸೃಷ್ಟಿಸಲಾರರು’ ಎಂಬದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಇತಿಹಾಸ ಸೃಷ್ಟಿಸುವದು ಒಂದುಕಡೆ ಇರಲಿ, ಮತ್ತೊಮ್ಮೆ ಆಂಗ್ಲ ವ್ಯಕ್ತಿ ಹೇಳಿದಂತೆ ‘ಚರಿತ್ರೆಯಿಂದ ಪಾಠ ಕಲಿಯದವರು ಅದನ್ನು ಅನುಭವಿಸುವ ಶಾಪ ಪಡೆಯುತ್ತಾರೆ ಎಂಬ ಮಾತನ್ನು ಸಹ ನಾವು ಸದಾಕಾಲ ನೆನಪಿಸಿಕೊಳ್ಳಬೇಕಾಗುತ್ತದೆ.

ಈ ದೇಶದಲ್ಲಿ ಮನುಧರ್ಮ ಸೃಷ್ಟಿಸಿದ ಅಸಮಾನತೆಯಿಂದಾಗಿ ಬಹುಜನರು ಸಾವಿರಾರು ವರ್ಷಗಳ ಗುಲಾಮಗಿರಿಯನ್ನು ಅನುಭವಿಸಬೇಕಾಯಿತು. ಮನುಧರ್ಮದ ಸೃಷ್ಟಿಯಿಂದಾದ ಚಾತುರ್ವರ್ಣ ಪದ್ಧತಿಯು ದೇಶದ ಬಹುಜನರಿಗೆ ಶಿಕ್ಷಣ, ಸಂಪತ್ತು, ಅಧಿಕಾರ ಮತ್ತು ಆಯುಧ ಹಿಡಿಯುವದರಿಂದ ವಂಚಿಸಲಾಗಿತ್ತು. ಹೀಗಾಗಿ ಈ ದೇಶ ಹಲವಾರು ಬಾರಿ ಪರಕೀಯರ ಧಾಳಿಗೆ ತುತ್ತಾಗಿತ್ತು ಎಂಬದನ್ನು ಮರೆಯಬಾರದು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳನ್ನು ಸೃಷ್ಟಿಸಿ, ಇದನ್ನು ಯಾರೂ ಪ್ರಶ್ನಿಸಬಾರದು, ಇದು ದೇವರ ಸೃಷ್ಟಿ ಎಂದು ಬಹುಜನರನ್ನು ನಂಬಿಸಲಾಗಿತ್ತು. ಇದಕ್ಕೆ ಬಲಿಯಾದ ಬಹುಜನರು ಎಂತಹ ಹೀನಾಯ ಬದುಕನ್ನು ನಡೆಸಿದರೆಂಬ ಇತಿಹಾಸವನ್ನು ತಿಳಿದಾಗ ನಾವೂ ಮನುಷ್ಯರೇ? ಎಂಬ ಪ್ರಶ್ನೆ ಏಳುತ್ತದೆ. ಸಹ ಮಾನವರನ್ನು ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಂಡು ಗುಲಾಮಗಿರಿಗೆ ತಳ್ಳಿದ ಮನುಧರ್ಮ ಶಾಸ್ತ್ರದ ವಿರುದ್ಧ ಬಾಬಾ ಸಾಹೇಬರು ರಚಿಸಿದ ಸಮಾನತೆಯ ಸಂವಿಧಾನ ಈ ದೇಶದಲ್ಲಿ ಕಳೆದ 1950 ರಿಂದ ಜಾರಿಗೆ ಬಂದಿದೆ. ಹೀಗಿದ್ದರೂ ಈ ಸಂವಿಧಾನದ ಆಶಯಗಳನ್ನು ಜಾರಿಗೆ ಬಾರದಂತೆ ಮನುವಾದಿಗಳು ಕುತಂತ್ರದ ಆಡಳಿತ ನಡೆಸುತ್ತಿರುವದನ್ನು ಇಂದೂ ಸಹ ಕಾಣಬಹುದಾಗಿದೆ. ಇದರ ಬಗ್ಗೆ ಬಾಬಾ ಸಾಹೇಬರೆ ಹೇಳಿರುವ ಮಾತನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಒಂದು ಉತ್ತಮ ಸಂವಿಧಾನವು ಅದನ್ನು ಜಾರಿ ಮಾಡುವ ಜಾಗದಲ್ಲಿ (ಅಧಿಕಾರದಲ್ಲಿ) ಉತ್ತಮ ಆಡಳಿತಗಾರರು ಇಲ್ಲದಿದ್ದಲ್ಲಿ ಯಾವದೇ ಪರಿಣಾಮವನ್ನು ಹೊಂದುವದಿಲ್ಲ ಹಾಗೂ ಕೆಟ್ಟ ಸಂವಿಧಾನವೇ ಆದರೂ ಅದನ್ನು ಜಾರಿ ಮಾಡುವವರು ಒಳ್ಳೆಯವರಾಗಿದ್ದರೆ ಅದನ್ನೂ ಸಹ ಜನಪರವಾಗಿ ಜಾರಿಗೊಳಿಸಬಹುದಾಗಿದೆ ಎಂದು ಹೇಳಿದ್ದಾರೆ. ಇಂದು ಅಧಿಕಾರದಲ್ಲಿ ಇರುವವರು ಸಂವಿಧಾನ ಜಾರಿಮಾಡುವದರಲ್ಲಿ ಸೋತ ಕಾರಣದಿಂದ ಎಲ್ಲಾ ಹಂತದಲ್ಲಿ ಬಹುಜನರು ಅಸಮಾನತೆಯಿಂದ ನರಳಬೇಕಾಗಿದೆ. ಇದರ ಮಧ್ಯೆಯೇ ಅಧಿಕಾರದಲ್ಲಿರುವ ಮಂತ್ರಿಗಳೇ ನಾವು ಅಧಿಕಾರಕ್ಕೆ ಬಂದಿರುವದೇ ಸಂವಿಧಾನವನ್ನು ಬದಲಾಯಿಸಲು ಎಂಬ ಮಾತನ್ನು ಹೇಳುತ್ತಿದ್ದಾರೆಂದರೆ ನಾವು ಯಾವ ಪರಿಸ್ಥಿತಿಯಲ್ಲಿದ್ದೇವೆ ಎಂಬದನ್ನು ಯೋಚಿಸಬೇಕಾಗಿದೆ.

ಒಂದು ಕಡೆ ಬಾಬಾ ಸಾಹೇಬರನ್ನು ಹಾಡಿ ಹೊಗಳುವಂತೆ ಮಾಡಿ ಮತ್ತೊಂದು ಕಡೆ ಅವರ ಚಿಂತನೆಗಳನ್ನು ನಾಶಮಾಡಲು ಹೊಂಚು ಹಾಕುತ್ತಿರುವದನ್ನು ಅರ್ಥ ಮಾಡಿಕೊಂಡು ಅದನ್ನು ತಡೆಯಲು ಬಹುಜನರು ಮುಂದಾಗಬೇಕಾಗಿದೆ. ಇಲ್ಲದಿದ್ದರೆ ಮುಂದೆ ನಮ್ಮ ತಲೆಯ ಮೇಲೆ ಚಪ್ಪಡಿ ಎಳೆಯಲು ಅಧಿಕಾರದಲ್ಲಿರುವವರು ಹಿಂದೆ ಮುಂದೆ ನೋಡುವದಿಲ್ಲ. ಕೇವಲ ಬಾಬಾ ಸಾಹೇಬರ ಜಯಂತಿಯನ್ನು ನಡೆಸಿ ಅವರ ವಿಚಾರಗಳನ್ನು ಕಾರ್ಯರೂಪಕ್ಕೆ ತರದಿದ್ದಲ್ಲಿ ಇದೊಂದು ದ್ರೋಹದ ಕೆಲಸವಾಗುತ್ತದೆ ಎಂಬದನ್ನು ತಿಳಿಯಬೇಕಾಗಿದೆ. ಆದುದರಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿಜವಾದ ಚಿಂತನೆಗಳನ್ನು ಅಂದರೆ ಸಂವಿಧಾನದಲ್ಲಿ ಅವರು ಅಳವಡಿಸಿರುವ ಸ್ವಾತಂತ್ರ್ಯ, ಸಮಾನತೆ, ಸೋದರತೆಯ ಆಶಯಗಳನ್ನು ಜಾರಿಗೊಳಿಸಲು ಪಣತೊಡಬೇಕಾಗಿದೆ. ಇದು ನಾವು ಅವರಿಗೆ ನೀಡುವ ಗೌರವವಾಗಿದೆ. ತಮ್ಮ ಜೀವಮಾನವನ್ನೇ ಈ ದೇಶದ ಬಹುಜನರ ಒಳಿತಿಗಾಗಿ ಮುಡಿಪಾಗಿಟ್ಟಿದ್ದನ್ನು ಅವರ ಅನುಯಾಯಿಗಳು ಮರೆಯಬಾರದು. ಇಂದೂ ಸಹ ಅಸ್ಪøಶ್ಯತೆ, ಹಸಿವು, ಬಡತನ, ಅನಕ್ಷರತೆ, ಜಾತೀಯತೆಯ ದೌರ್ಜನ್ಯ, ದಬ್ಬಾಳಿಕೆಯಲ್ಲಿ ನಲುಗಿಹೋದ ಬಹುಜನರನ್ನು ಸಮಾನತೆಯತ್ತ ಕೊಂಡುಹೋಗುವ ಜವಾಬ್ದಾರಿ ಪ್ರತಿಯೊಬ್ಬ ವಿದ್ಯಾವಂತರ ಮೇಲಿದೆ.

ನಮ್ಮ ಪೂರ್ವಿಕರ ಶ್ರಮದಿಂದ ಸಾವಿರಾರು ವರ್ಷಗಳ ಕಾಲ ಅನುಭವಿಸಿದ ಗುಲಾಮಗಿರಿಯನ್ನು ಕೇವಲ 70 ವರ್ಷಗಳಲ್ಲಿ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿರುವದು ನಮ್ಮ ನಿರ್ಲಕ್ಷ್ಯತೆ ಎನ್ನಬಹುದು. ಇದಕ್ಕೆ ಅವಕಾಶವನ್ನು ನೀಡದೆ ದೇಶದ ಯುವ ಜನಾಂಗ ಮತ್ತೊಮ್ಮೆ ದೇಶ ಗುಲಾಮಗಿರಿಗೆ ಹೋಗುವದನ್ನು ತಡೆಯುವಲ್ಲಿ ಮುನ್ನುಗ್ಗಬೇಕಾಗಿದೆ. ಯಾರು ಬಾಬಾ ಸಾಹೇಬರ ಕೊಡುಗೆಯಿಂದ ಅನುಕೂಲ ಅಂದರೆ ಶಿಕ್ಷಣ, ಉದ್ಯೋಗ, ಅಧಿಕಾರ, ಸಂಪತ್ತುಗಳಿಸಲು ಸಾಧ್ಯವಾಗಿದೆಯೋ ಅಂತಹವರ ಜವಾಬ್ದಾರಿ ಹೆಚ್ಚಿದೆ. ಇದು ಎಲ್ಲಾ ಬಹುಜನರಿಗೆ ಸಿಗುವಂತಾಗಲು ಬಹುಜನರು ಬಾಬಾ ಸಾಹೇಬರು ಹೇಳಿದಂತೆ ಸ್ವತಂತ್ರ ರಾಜಕಾರಣ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಕಾರಣವಾಗಲು ಬುದ್ಧನ ಅನುಯಾಯಿಗಳಾಗಬೇಕಾಗಿದೆ. ಆ ದಿಕ್ಕಿನಲ್ಲಿ ನಾವೆಲ್ಲರೂ ಸಾಗುವದೇ ಡಾ. ಬಾಬಾ ಸಾಹೇಬರ ಜನ್ಮ ದಿನಾಚರಣೆಗೆ ಅರ್ಥ ಒದಗಿಸಿದಂತಾಗುತ್ತದೆ ಎಂಬದನ್ನು ಮರೆಯದಿರೋಣ.

- ಜಯಪ್ಪ ಹಾನಗಲ್.