ಮಡಿಕೇರಿ, ಏ. 20: ವೀರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಗೊಂದಲ, ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಿದೆ. ಹಾಲಿ ಶಾಸಕರಾಗಿರುವ ಕೆ.ಜಿ. ಬೋಪಯ್ಯ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಈ ತನಕದ ರಾಜಕೀಯ ಕುತೂಹಲ ಮುಗಿದಂತಾಗಿದೆ.

ಬಿಜೆಪಿ ಪಕ್ಷದ ವತಿಯಿಂದ ಇಂದು ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಹಾಲಿ ಶಾಸಕರಾಗಿರುವ ಕೆ.ಜಿ. ಬೋಪಯ್ಯ ಅವರನ್ನೇ ಹುರಿಯಾಳು ಎಂದು ಪಕ್ಷ ಪ್ರಕಟಿಸಿದೆ. ಇಂದು ಬಿಜೆಪಿ ಮೂರನೇ ಪಟ್ಟಿಯಲ್ಲಿ 59 ಅಭ್ಯರ್ಥಿ ಗಳ ಹೆಸರನ್ನು ಅಂತಿಮ ಗೊಳಿಸಿದೆ. ಹಲವಾರು ಕಾರಣಗಳಿಂದಾಗಿ ವೀರಾಜಪೇಟೆ ಕ್ಷೇತ್ರ ಇಡೀ ರಾಜ್ಯದಲ್ಲಿ ಸುದ್ದಿಗೆ ಗ್ರಾಸವಾಗಿತ್ತು. ಕೆ.ಜಿ. ಬೋಪಯ್ಯ ಅವರು ಪ್ರಭಾವಿ ರಾಜಕಾರಣಿಯಾಗಿದ್ದರೂ ಬಿಜೆಪಿ ಪ್ರಕಟಿಸಿದ ಈ ಹಿಂದಿನ ಎರಡು ಪಟ್ಟಿಗಳಲ್ಲಿ ಅವರ ಹೆಸರು ಇಲ್ಲದಿದ್ದುದು ಜಿಲ್ಲೆಯ ಜನತೆ ಮಾತ್ರವಲ್ಲ ರಾಜ್ಯಮಟ್ಟದಲ್ಲೂ ಕುತೂಹಲಕ್ಕೆ ಕಾರಣವಾಗಿತ್ತು. ಬೋಪಯ್ಯ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎಂಬ ಹಲವರ ಬಹಿರಂಗ ಒತ್ತಾಯಗಳು, ಸೇರಿದಂತೆ ಇನ್ನಿತರ ಹಲವು ಟಿಕೆಟ್ ಆಕಾಂಕ್ಷಿಗಳು ನಿರಂತರವಾಗಿ ನಡೆಸುತ್ತಿದ್ದ ಪ್ರಯತ್ನದ ಹಿನ್ನೆಲೆಯಲ್ಲಿ ಬೋಪಯ್ಯ ಅವರ ಹೆಸರು ತಡವಾಗಿ ಮೂರನೇ ಪಟ್ಟಿಯಲ್ಲಿ ಪ್ರಕಟಗೊಂಡಿದೆ.

ಜಿಲ್ಲೆಯ ಎರಡು ಕ್ಷೇತ್ರಗಳಿಗೆ ಸಂಬಂಧಿಸಿದಂತೆ, ಹಾಲಿ ಶಾಸಕರುಗಳಿಗೇ ಟಿಕೆಟ್ ಸಿಗಲಿದೆ ಎಂದು ದಟ್ಟವಾದ ಮಾತಿತ್ತಾದರೂ ಪ್ರಥಮ ಪಟ್ಟಿಯಲ್ಲಿ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಕೊಡವ ಜನಾಂಗಕ್ಕೆ ಸೇರಿದ ಎಂ.ಪಿ. ಅಪ್ಪಚ್ಚುರಂಜನ್ ಅವರ ಹೆಸರು ಮಾತ್ರ ಪ್ರಕಟವಾಗಿತ್ತು. ಇದು ಹಲವರ ಹುಬ್ಬೇರಿ ಸಿತ್ತಲ್ಲದೆ, ಎರಡನೇ ಪಟ್ಟಿಯಲ್ಲೂ ಬೋಪಯ್ಯ ಹೆಸರು ಕಂಡುಬಾರದ್ದ ರಿಂದ ಮತ್ತಷ್ಟು ಕುತೂಹಲ ಕೆರಳಿಸಿತ್ತು. ಬೋಪಯ್ಯ ಅವರಿಗೆ ಟಿಕೆಟ್ ನೀಡಬಾರದು ಎಂಬ ಒತ್ತಾಯ ಒಂದೆಡೆಯಾದರೆ, ಸ್ವತಃ ಬೋಪಯ್ಯ ಸೇರಿದಂತೆ ಅವರ ಬೆಂಬಲಿಗರು ರಾಜ್ಯಮಟ್ಟದಲ್ಲೂ ಈ ಬಗ್ಗೆ ಪ್ರತಿಭಟನಾತ್ಮಕವಾಗಿ ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅಭ್ಯರ್ಥಿ ಬದಲಾವಣೆಯಾಗ ಬಹುದು ಎಂಬ ಭಾವನೆ ವಿರೋಧಿ ಬಣದವರಲ್ಲಿ ಇತ್ತಾದರೂ ಅಂತಿಮವಾಗಿ ಬೋಪಯ್ಯ ಅವರಿಗೇ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸ ಅವರ ಆಪ್ತ ಬಳಗದವರಲ್ಲಿ ಈ ತನಕ ಮುಂದುವರಿದಿತ್ತು. ಇದೀಗ ಈ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಂತಾಗಿದ್ದು,

(ಮೊದಲ ಪುಟದಿಂದ) ಕೆ.ಜಿ. ಬೋಪಯ್ಯ ಅವರು ಸತತ ನಾಲ್ಕನೇ ಬಾರಿಗೆ ಪಕ್ಷದ ಟಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಮೂರನೇ ಬಾರಿಗೆ ಅವರು ವೀರಾಜಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗುತ್ತಿದ್ದಾರೆ.

2003ರ ಚುನಾವಣೆಯಲ್ಲಿ ಮಡಿಕೇರಿ ತಾಲೂಕಿನಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದ ಬೋಪಯ್ಯ ಅವರು 2008ರ ಚುನಾವಣೆಯಲ್ಲಿ ಬದಲಾದ ವೀರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಉಪಸಭಾಪತಿ ಹಾಗೂ ರಾಜ್ಯ ವಿಧಾನಸಭಾ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದರು. 2013ರ ಚುನಾವಣೆಯಲ್ಲಿ ಮತ್ತೆ ವೀರಾಜಪೇಟೆ ಕ್ಷೇತ್ರದಿಂದ ಪ್ರತಿಸ್ಪರ್ಧಿ ದಿ. ಬಿ.ಟಿ. ಪ್ರದೀಪ್ ಎದುರು ಅಲ್ಪಮತಗಳ ಅಂತರದಿಂದ ಜಯ ಸಾಧಿಸಿದ್ದರು. ಈ ಅವಧಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಬೋಪಯ್ಯ ಅವರು ವಿಪಕ್ಷ ಶಾಸಕರಾಗಿ ಮುಂದುವರಿದಿದ್ದು, ಇದೀಗ ಮತ್ತೊಮ್ಮೆ ಆಯ್ಕೆ ಬಯಸಿ ಸ್ಪರ್ಧಾಕಣದಲ್ಲಿದ್ದಾರೆ.