ವೀರಾಜಪೇಟೆ, ಏ. 20: ಚುನಾವಣಾ ಅಖಾಡದಲ್ಲಿ ಪರ-ವಿರೋಧಗಳೆಲ್ಲವೂ ಸಹಜ. ಅವೆಲ್ಲವನ್ನು ಸರಿ ಸಮಾನವಾಗಿ ಸರಿದೂಗಿಸಿಕೊಂಡು ಚುನಾವಣೆಯನ್ನು ಎದುರಿಸುತ್ತೇವೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚೆಪ್ಪುಡಿರ ಅರುಣ್ ಮಾಚಯ್ಯ ಹೇಳಿದರು.

ಗೋಣಿಕೊಪ್ಪ ರಸ್ತೆಯಲ್ಲಿ ನೂತನ ಕಾಂಗ್ರೆಸ್ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನನ್ನನ್ನು ಅಳೆದು ತೂಗಿ ಎಲ್ಲಾ ರೀತಿಯಲ್ಲಿ ಪರಿಶೀಲನೆ ನಡೆಸಿ ಅರ್ಹತೆಯ ಮೇಲೆ ಪಕ್ಷದ ವರಿಷ್ಠರು ‘ಬಿ’ ಫಾರಂ ನೀಡಿದ್ದಾರೆ. ಪೊನ್ನಂಪೇಟೆ ತಾಲೂಕಿಗಾಗಿ ಹೋರಾಟ, ಕಸ್ತೂರಿ ರಂಗನ್, ಬರಪೊಳೆ ಯೋಜನೆ, ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪಕ್ಷಾತೀತವಾಗಿ ಹೋರಾಟದಲ್ಲಿ ಭಾಗಿಯಾಗಿದ್ದೇನೆ ನಾನು ವಿಧಾನ ಪರಿಷತ್ ಸದಸ್ಯನಾಗಿದ್ದಾಗ ಹೈಟೆನ್ಷನ್ ವಿದ್ಯುತ್ ಮಾರ್ಗವನ್ನು 6 ವರ್ಷ ತಡೆ ಹಿಡಿದಿದ್ದೇನೆ. ಬಿ.ಟಿ ಪ್ರದೀಪ್ ಸೋಲಿಗೆ ನಾನು ಕಾರಣ, ಅಲ್ಪ ಸಂಖ್ಯಾತ ವಿರೋಧಿ ಅಂತ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ಹೇಳಿಕೆ ನೀಡುವವರ ವಿರುದ್ಧ ನಾನೇನು ಹೇಳುವದಿಲ್ಲ. ಕಳೆದ 5 ವರ್ಷದ ಕಾಂಗ್ರೆಸ್ ಸರಕಾರದ ಆಡಳಿತದ ಸಾಧನೆ ಜನ ಸಾಮಾನ್ಯರಲ್ಲಿ ಮನೆಮಾತಾಗಿದೆ. ಹಿಂದೆ ನಾನು ವಿಧಾನ ಪರಿಷತ್ ಸದಸ್ಯರಾಗಿದ್ದ ಸಂದರ್ಭ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಿದೆ ಎಂದು ಹೇಳಿದರು.

ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಪಕ್ಷ, ಕುಟುಂಬಗಳಲ್ಲಿ ಅಭಿಪ್ರಾಯ ಭಿನ್ನಾಭಿಪ್ರಾಯಗಳು ಬರುವದು ಸಾಮಾನ್ಯ. ಏನೇ ಭಿನ್ನಾಭಿಪ್ರಾಯ ಗಳಿದ್ದರೂ ಅದನ್ನು ಬದಿಗೆ ಸರಿಸಿ ಗೌಪ್ಯತೆ ಕಾಪಾಡಿಕೊಂಡು ಚುನಾವಣೆಯ ಸಮಯದಲ್ಲಿ ಒಮ್ಮತದಿಂದ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು. ಹೈಕಮಾಂಡ್ ಸೂಚಿಸಿದ ಅಭ್ಯರ್ಥಿಯನ್ನು ಬೆಂಬಲಿಸುವದು ಕಾಂಗ್ರೆಸ್ ಕಾರ್ಯಕರ್ತರ ಪ್ರಾಮಾಣಿಕತೆಯ ಕರ್ತವ್ಯವಾಗಿದೆ. ಮತದಾರರು ಹಾಗೂ ಕಾರ್ಯಕರ್ತರು ಅಭ್ಯರ್ಥಿಯನ್ನು ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ಅಭ್ಯರ್ಥಿಯು ನಿಮ್ಮ ಬಾಗಿಲಿಗೆ ಬರುತ್ತಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಾದರೆ ಬೂತ್ ಮಟ್ಟದ ಸಮಿತಿಗಳು ದಕ್ಷ ಹಾಗೂ ಪ್ರಾಮಾಣಿಕತೆ ಯಿಂದ ಕಾರ್ಯ ನಿರ್ವಹಿಸಿದರೆ ಗೆಲವು ಖಚಿತ. ಕಳೆದ ಜನವರಿ ಯಿಂದಲೇ ಪಕ್ಷದ ನಾಯಕರುಗಳು, ಕಾರ್ಯಕರ್ತರುಗಳು ಚುನಾವಣೆಗೆ ಸಜ್ಜಾಗಿದ್ದಾರೆ ಎಂದು ಹೇಳಿದರು.

ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಪಕ್ಷದ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಉಸ್ಮಾನ್ ಹಾಜಿ, ಸೇವಾದಳದ ಜಿಲ್ಲಾ ಅಧ್ಯಕ್ಷ ಚಿಲ್ಲವಂಡ ಕಾವೇರಪ್ಪ, ವಕ್ತಾರ ಎಂ.ಎಸ್. ಪೂವಯ್ಯ, ತಾಲೂಕು ಪಂಚಾಯಿತಿ ಸದಸ್ಯ ಪ್ರಶಾಂತ್ ಉತ್ತಪ್ಪ, ಸ.ರ. ಚಂಗಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ ಕೊಡವ ಅಕಾಡೆಮಿ ಅಧ್ಯಕ್ಷ ಪಿ.ಕೆ. ಪೊನ್ನಪ್ಪ, ಬ್ಲಾಕ್ ಉಪಾಧ್ಯಕ್ಷ ಪಿ.ಎ. ಹನೀಫ್, ಡಿ.ಸಿ. ಧ್ರುವ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ನಗರ ಸಮಿತಿ ಕಾರ್ಯದರ್ಶಿ ಎಂ.ಎಂ. ಶಶಿಧರ್ ನಿರೂಪಿಸಿದರು. ಸಮಾರಂಭಕ್ಕೆ ಮೊದಲು ಟಿ.ಪಿ. ರಮೇಶ್ ರಿಬ್ಬನ್ ಕತ್ತರಿಸಿ ಪಕ್ಷದ ಚುನಾವಣಾ ಪ್ರಚಾರದ ಕಚೇರಿಯನ್ನು ಉದ್ಘಾಟಿಸಿದರು.