ಕುಶಾಲನಗರ, ಏ. 20: ಕೊಡಗು ಮೈಸೂರು ಗಡಿಭಾಗ ಕೊಪ್ಪ ಬಳಿ ಚುನಾವಣಾ ತಪಾಸಣಾ ಕೇಂದ್ರದ ತಾತ್ಕಾಲಿಕ ಶೆಡ್ ಮೇಲೆ ಭಾರೀ ಗಾಳಿಗೆ ಮರದ ಕೊಂಬೆ ಬಿದ್ದು ಹಾನಿಯುಂಟಾದ ಘಟನೆ ನಡೆದಿದೆ. ಅದೃಷ್ಟವಶಾತ್ ಕರ್ತವ್ಯದಲ್ಲಿದ್ದ ಚುನಾವಣಾ ಅಧಿಕಾರಿಗಳು ಸಿಬ್ಬಂದಿಗಳು ಸ್ವಲ್ಪದರಲ್ಲೆ ಪಾರಾಗಿದ್ದಾರೆ. ಕೊಪ್ಪ ಕಾವೇರಿ ಸೇತುವೆ ಸಮೀಪ ಮೈಸೂರು ಜಿಲ್ಲಾ ವ್ಯಾಪ್ತಿಯ ಚುನಾವಣಾ ಸ್ಥಿರ ಕಣ್ಗಾವಲು ತಪಾಸಣಾ ಕೇಂದ್ರದಲ್ಲಿ ಈ ಘಟನೆ ಗುರುವಾರ ರಾತ್ರಿ ಸಂಭವಿಸಿದ್ದು ಶೆಡ್ ಮೇಲೆ ಭಾರೀ ಗಾತ್ರದ ಮರದ ಕೊಂಬೆ ಬಿದ್ದಿದೆ. ಒಳಭಾಗದಲ್ಲಿದ್ದ ಅಧಿಕಾರಿಗಳು ಹೊರಗೆ ಓಡಿ ಬಂದ ಕಾರಣ ಅನಾಹುತ ತಪ್ಪಿದೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ತಿಳಿಸಿದ್ದಾರೆ.
ಪಕ್ಕದಲ್ಲೇ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೌಚಾಲಯದ ಮೇಲೆ ಕೂಡ ಮರದ ಕೊಂಬೆಗಳು ಬಿದ್ದಿರುವ ದೃಶ್ಯ ಕಂಡುಬಂದಿದೆ. ತಾತ್ಕಾಲಿಕ ಶೆಡ್ಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು ಮಳೆ ಸುರಿದ ಹಿನ್ನಲೆಯಲ್ಲಿ ಅಪಾಯ ಉಂಟಾಗುವ ಸ್ಥಿತಿ ಗೋಚರಿಸಿದೆ. ಶೆಡ್ನಲ್ಲಿ ಸಿಸಿ ಕ್ಯಾಮೆರಾ, ಕಂಪ್ಯೂಟರ್ ಕೂಡ ಸುರಿವ ಮಳೆಯಲ್ಲಿ ನೆನೆಯುತ್ತಿದ್ದ ದೃಶ್ಯ ಕಂಡುಬಂದಿದೆ.
ಈ ಕೇಂದ್ರದಲ್ಲಿ ಪೊಲೀಸರು ಸೇರಿದಂತೆ ಒಟ್ಟು ಐವರು ಅಧಿಕಾರಿ ಸಿಬ್ಬಂದಿಗಳು ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಹಗಲು ರಾತ್ರಿ ಭಯದಿಂದಲೇ ಸಮಯ ಕಳೆಯುವಂತಾಗಿದೆ.
ನಾಪೋಕ್ಲು : ಇಲ್ಲಿಗೆ ಸಮೀಪದ ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಂದೋಡ ಗ್ರಾಮದಲ್ಲಿ ಶುಕ್ರವಾರ ಸುರಿದ ಭಾರೀ ಮಳೆಗೆ ಎರಡು ಕುಟುಂಬಗಳು ನಿರ್ಗತಿಕರಾಗುವ ಪರಿಸ್ಥಿತಿ ಬಂದೊದಗಿದೆ. ಈ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದಿದ್ದು ಎರಡು ಕುಟುಂಬಗಳ ಮನೆಗಳ ಶೀಟುಗಳು ಹಾರಿಹೋಗಿ ನಷ್ಟ ಸಂಭವಿಸಿದೆ.
ಗ್ರಾಮದ ಸಹೋದರರಾದ ಬಾರಿಕೆ ಮನೆ ಸೋಮಯ್ಯ ಮತ್ತು ಈರಪ್ಪ ವಾಸವಾಗಿದ್ದ ಮನೆಯ ಶೀಟು ಹೊದಿಕೆಗಳ ಮೇಲೆ ಭಾರೀ ಗಾತ್ರದ ಬಳಂಜಿ ಮರ ಮುರಿದು ಬಿದ್ದು ಹಾನಿ ಉಂಟಾಗಿದೆ. ಮನೆ ಮಂದಿ ಕೆಲಸಕ್ಕೆ ತೆರಳಿದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ಪುತ್ರ ನಿಖಿಲ್ಗೆ ಗಾಯಗಳಾಗಿವೆ. ವಸ್ತುಗಳು ಸಂಪೂರ್ಣ ಹಾನಿಗೊಳಗಾಗಿವೆ. ಸ್ಥಳಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಮುಕ್ಕಾಟಿರ ರಮೇಶ್ ಮತ್ತು ಚಂಡೀರ ಜಗದೀಶ್ ಇನ್ನಿತರರು ಭೇಟಿ ನೀಡಿ ಪರಿಶೀಲಿಸಿದರು.
ಮರಂದೋಡ ಗ್ರಾಮದ ಚೋಯಮಾಡಂಡ ಕರುಂಬಯ್ಯ ಅವರ ಮನೆಯ ಮೇಲೆ ಬಳಂಜಿ ಮರ ಹಾಗೂ ಮುಕ್ಕಾಟಿರ ಬೋಜಪ್ಪ ಅವರ ಮನೆ ಮೇಲೆ ಅಡಿಕೆ ಮರ ಮುರಿದು ಬಿದ್ದು ನಷ್ಟ ಸಂಭವಿಸಿದೆ. ಸುತ್ತಮುತ್ತಲಿನ ತೋಟಗಳಲ್ಲಿ ಅಧಿಕ ಸಂಖ್ಯೆಯ ಮರಗಳು ಮುರಿದು ಬಿದ್ದಿರುವದಾಗಿ ತಿಳಿದು ಬಂದಿದೆ.
ಸಂಕೇತ್ ಭೇಟಿ
ಮಡಿಕೇರಿ: ಘಟನಾ ಸ್ಥಳಕ್ಕೆ ಜೆಡಿಎಸ್ ಜಿಲ್ಲಾಧ್ಯಕ್ಷ ಅಭ್ಯರ್ಥಿ ಸಂಕೇತ್ ಪೂವಯ್ಯ ಅವರು ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭ ಠಾಣಾಧಿಕಾರಿ ನಂಜುಂಡಸ್ವಾಮಿ, ಗ್ರಾಮ ಲೆಕ್ಕಿಗ ಜನಾರ್ದನ, ಜನಪ್ರತಿನಿಧಿಗಳು, ಗ್ರಾಮಸ್ಥರಿದ್ದರು.