ಮಡಿಕೇರಿ, ಏ. 20: ಸೈನಿಕ ಶಾಲೆ ಕೊಡಗು ಇಲ್ಲಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಹದಿಹರೆಯದವರ ಆರೋಗ್ಯ ಮತ್ತು ಸಮಸ್ಯೆಗಳು ವಿಚಾರವನ್ನಾಧರಿಸಿ ಎರಡು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾ ಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಮಹೇಶ್, ಸಹ ಪ್ರಾಧ್ಯಾಪಕರು, ಕಿಮ್ಸ್, ಮಡಿಕೇರಿ ಇವರು ಆಗಮಿಸಿದ್ದರು. ಹದಿಹರೆಯದ ವಯಸ್ಸಿನವರು ಅನುಭವಿಸುತ್ತಿರುವ ಸಮಸ್ಯೆಗಳು, ಆ ಸಮಸ್ಯೆಗಳ ನಿವಾರಣೆಗಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಮತ್ತು ಸಮಾಜವು ಕೈಗೊಳ್ಳಬೇಕಾದ ಜವಾಬ್ದಾರಿಗಳ ಕುರಿತು ಅವರು ಉಪನ್ಯಾಸವನ್ನು ನೀಡಿದರು.

ದೇಶದಾದ್ಯಂತ ಸರ್ಕಾರವು ಮಕ್ಕಳ ಆರೋಗ್ಯದಲ್ಲಿ ಪೌಷ್ಟಿಕಾಂಶ ವೃದ್ಧಿಗಾಗಿ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಹಾಗೆಯೇ ವಿದ್ಯಾರ್ಥಿಗಳ ಆರೋಗ್ಯ ಸಂಬಂಧ ಸಮಸ್ಯೆಗಳನ್ನು ಕುರಿತು ಸಂವಾದವನ್ನು ನಡೆಸಿ, ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ನೀಡಿದರು. ಜೊತೆಗೆ ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಕಿಮ್ಸ್, ಮಡಿಕೇರಿ ವತಿಯಿಂದ ಆರೋಗ್ಯ ಶಿಬಿರವನ್ನು ಕೈಗೊಳ್ಳುವ ಭರವಸೆಯನ್ನು ನೀಡಿದರು.

ಕಾರ್ಯಾಗಾರವು ಎರಡು ಹಂತಗಳಲ್ಲಿ ನಡೆಯಿತು. ಮೊದಲನೇ ಹಂತದ ಕಾರ್ಯಾಗಾರವು ಹಾಗೆಯೇ ಎರಡನೇ ಹಂತದ ಕಾರ್ಯಾಗಾರ ವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರವನ್ನು ಶಾಲೆಯ ಶಿಕ್ಷಕರಾದ ವೈ. ವೆಂಕಟರಮಣ ಅವರು ಸಂಘಟಿಸಿದ್ದರು. ಶಾಲೆಯ ಪ್ರಾಂಶುಪಾಲರು ಪ್ರಸ್ತುತ ಕಾರ್ಯಾಗಾರವನ್ನು ಶಾಲೆಯಲ್ಲಿ ಆಯೋಜಿಸಲು ಸಹಕರಿಸಿದ ಮಡಿಕೇರಿಯ ಕಿಮ್ಸ್‍ನ ನಿರ್ದೇಶಕರು ಮತ್ತು ಮುಖ್ಯಸ್ಥ ಡಾ. ಕೆ.ಬಿ. ಕಾರ್ಯಪ್ಪನವರಿಗೆ ಧನ್ಯವಾದ ಅರ್ಪಿಸಿದರು. ಕಾರ್ಯಾಗಾರದ ಉದ್ಘಾಟನೆ ಮತ್ತು ಸಮಾರೋಪ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ಆರ್ ಆರ್ ಲಾಲ್, ಉಪ ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಡಿ ಮ್ಯಾಥ್ಯು, ಹಿರಿಯ ಶಿಕ್ಷಕರಾದ ಸೂರ್ಯನಾರಾಯಣ, ಬೋಧಕ ಮತ್ತು ಬೋಧಕೇತರ ವರ್ಗದವರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.