ಮಡಿಕೇರಿ, ಏ. 21: ಪ್ರಸಕ್ತ ಎದುರಾಗಿರುವ ವಿಧಾನಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಪಕ್ಷದ ಕಾರ್ಯಕರ್ತರು ಹಾಗೂ ಬೂತ್ ಮಟ್ಟದವರೆಗಿನ ಎಲ್ಲಾ ಪದಾಧಿಕಾರಿಗಳು ಪ್ರಾಮಾಣಿಕ ನೆಲೆಯಲ್ಲಿ ಶ್ರಮಿಸಬೇಕೆಂದು ಜಿಲ್ಲಾ ಪ್ರಮುಖರು ಕರೆ ನೀಡಿದ್ದಾರೆ. ಇಲ್ಲಿನ ದಾಸವಾಳ ಬೀದಿಯ ಕೂರ್ಗ್ ಕಮ್ಯುನಿಟಿ ಸಭಾಂಗಣದಲ್ಲಿ ಇಂದು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರಿಗೆ ಆಯೋಜಿಸಿದ್ದ ಸಂವಾದ ಕಾರ್ಯಾಗಾರದಲ್ಲಿ ಮೇ 12ರಂದು ನಡೆಯಲಿರುವ ಚುನಾವಣೆ ಎದುರಿಸುವ ಸಂಬಂಧ ಗಂಭೀರ ಸಮಾಲೋಚನೆ ನಡೆಸಲಾಯಿತು.
ಕಳೆದ 15 ವರ್ಷಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರುಗಳಿಲ್ಲದೆ, ತಮ್ಮದೇ ತಪ್ಪಿನಿಂದ ಕಾರ್ಯಕರ್ತರು ಅನುಭವಿಸಿದ ತೊಂದರೆಗಳನ್ನು ಈ ಚುನಾವಣೆಯಲ್ಲಿ ನೆನಪಿಟ್ಟುಕೊಂಡು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಪ್ರಮುಖರು ತಿಳಿಹೇಳಿದರು. ಅರುಣ್ ಆಶಯಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದ್ದು, ಚುನಾವಣೆ ಎದುರಿಸಲು ಸಿದ್ಧವಾಗಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅರುಣ್ ಮಾಚಯ್ಯ ಅಭಿಪ್ರಾಯ ವ್ಯಕ್ತ ಪಡಿಸಿದರು.
ನಗರದ ಕೂರ್ಗ್ ಕಮ್ಯುನಿಟಿ ಹಾಲ್‍ನಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ರಮಾನಾಥ್ ಅಧ್ಯಕ್ಷತೆಯಲ್ಲಿ ನಡೆದ 2018ರ ವಿಧಾನಸಭಾ ಚುನಾವಣಾ ತಯಾರಿಗಾಗಿ ಬೂತ್, ವಲಯ ಅಧ್ಯಕ್ಷರು ಹಾಗೂ ಬ್ಲಾಕ್ ಸಮಿತಿಯ ಮತ್ತು ಕಾಂಗ್ರೆಸ್‍ನ ಪ್ರಮುಖರ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಈಗಾಗಲೇ ಹಲವು ಕಾರ್ಯಕ್ರಮದ ಮೂಲಕ ಜಿಲ್ಲೆಯಲ್ಲಿ ಚುನಾವಣಾ ಅಲೆಯನ್ನು ಹುಟ್ಟು ಹಾಕಿದೆ. ಕಾಂಗ್ರೆಸ್ ಪಕ್ಷ ಕೂಡ ಹಲವು ಕಾರ್ಯಕ್ರಮದ ಮೂಲಕ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಪಕ್ಷ ಹಲವು ಬಾರಿ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದ ಸಂದರ್ಭ ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ ಪೂರಕ ವಾತಾವರಣ ಕಂಡು ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯಕ್ರಮವೇ ನಮಗೆ ಶ್ರೀ ರಕ್ಷೆಯಾಗಲಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ ಹಾಗೂ ಹಲವರು ಜಿಲ್ಲೆಗೆ ಅನುದಾನ ತರಲು ಶ್ರಮಿಸಿದ್ದಾರೆ. 2000 ಕೋಟಿಗೂ ಅಧಿಕ ಹಣವನ್ನು ಜಿಲ್ಲೆಯ ಅಭಿವೃದ್ಧಿಗೆ ಸಿದ್ದರಾಮಯ್ಯ ಸರಕಾರ ನೀಡಿದ್ದು, ನೂತನ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದೆ ಎಂದ ಮಾಚಯ್ಯ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರವನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ವೀಣಾ ಸಲಹೆ
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಚುನಾವಣೆಯಲ್ಲಿ ಗೆಲ್ಲಲು ಬೂತ್ ಹಾಗೂ ವಲಯದ ಅಧ್ಯಕ್ಷರ ಪಾತ್ರ ಅತ್ಯಂತ ಮಹತ್ವದ್ದು. ಪಕ್ಷದಲ್ಲಿ ಯಾವದೇ ಗೊಂದಲವಿಲ್ಲದೇ ಕೆಲಸ ನಿರ್ವಹಿಸಬೇಕಿದ್ದು, ಈ ಬಾರಿ ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಗೆಲ್ಲಲು ಕಾರ್ಯಕರ್ತರು ಪಣ ತೊಡಬೇಕು ಎಂದರು.
15 ವರ್ಷಗಳಿಂದ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ನಮ್ಮ ಕಾಂಗ್ರೆಸ್ ಸರಕಾರ ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಇದ್ದರೂ ಕೂಡ ಹಲವು ಅಭಿವೃದ್ಧಿ ಕಾಮಾಗಾರಿಗೆ ಚಾಲನೆ ನೀಡಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಕಾಂಗ್ರೆಸ್ ಸರಕಾರ ಯಾವದೇ ಬೇದಭಾವ ಮಾಡಿಲ್ಲ. 5 ವರ್ಷದಲ್ಲಿ ಯಾವದೇ ಕಪ್ಪು ಚುಕ್ಕೆ ಇಲ್ಲದೇ ಆಡಳಿತ ನಿರ್ವಹಿಸಿದ ಕೀರ್ತಿ ಸಿದ್ದರಾಮಯ್ಯ ಸರಕಾರದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಸರಕಾರ ಮಾಡಿದ ಉತ್ತಮ ಕಾರ್ಯಕ್ರಮವನ್ನು ಈಗಾಗಲೇ ಮನೆಮನೆಗೆ ತಲಪಿಸುವ ಕಾರ್ಯವಾಗಿದೆ. ಮುಂದೆಯೂ ಇದನ್ನು ಪರಿಣಾಮಕಾರಿಯಾಗಿ ಜನತೆಗೆ ತಿಳಿಸಿದರೆ ಗೆಲುವು ನಮ್ಮದಾಗಲಿದೆ. ಮುಕ್ತ ಮನಸ್ಸಿನಿಂದ ಒಗ್ಗೂಡಿ ನಮ್ಮವರನ್ನು ಗೆಲ್ಲಿಸಲು ಶ್ರಮಿಸೋಣ ಎಂದು ವೀಣಾ ಅಚ್ಚಯ್ಯ ಕರೆ ನೀಡಿದರು.
ಟಿ.ಪಿ. ರಮೇಶ್ ಕಿವಿಮಾತು
ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ ರಮೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಭೀರತೆಯಿಂದ ಕೆಲಸ ನಿರ್ವಹಿಸೋಣ. ನಮ್ಮ ವಿರೋಧಿಗಳನ್ನು ಸೋಲಿಸಲು ಪ್ರತಿಯೊಬ್ಬ ಕಾರ್ಯಕರ್ತ ಪಣ ತೊಡಬೇಕು. ಈ ಹಿನ್ನೆಲೆ ಹಿಂದೆ ನಡೆದ ವಿಚಾರಗಳೆಲ್ಲವೂ ಅಪ್ರಸ್ತುತ. ಪಕ್ಷದ ಗೆಲುವಿಗಾಗಿ ಹೈಕಮಾಂಡ್ ಆದೇಶದಂತೆ ಕೆಲಸ ನಿರ್ವಹಿಸಬೇಕಿದೆ ಎಂದರು.
ಬೂತ್ ಮಟ್ಟದ ಪ್ರಮುಖರು ಮತಗಟ್ಟೆಯನ್ನು ಗಟ್ಟಿಪಡಿಸಿಕೊಂಡಲ್ಲಿ ಮಾತ್ರ ನಮ್ಮ ಗೆಲುವು ಸಾಧ್ಯ. ಇದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ನಡೆಸಬೇಕು. ಈಗಾಗಲೇ ಕಾಂಗ್ರೆಸ್ ನಡೆಸಿದ ಮನೆ ಮನೆಗೆ ಕಾಂಗ್ರೆಸ್ ಹಾಗೂ ಇತರೆ ಕಾರ್ಯಕ್ರಮ ಜನರ ಮನಸ್ಸಿಗೆ ಮುಟ್ಟಿದೆ. ಹಿಂದೆ ಆದ ಸೋಲಿನ ಅವಲೋಕನ ಈಗ ಬೇಡ ಎಂದು ಹೇಳಿದರು.
ಸುಮಾವಸಂತ್ ಸಲಹೆ
ಎಐಸಿಸಿ ಸದಸ್ಯೆ ಸುಮಾವಸಂತ್ ಮಾತನಾಡಿ, ಉಳಿದಿರುವ ಅಲ್ಪ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಸಿದ್ದರಾಮಯ್ಯ ಸರಕಾರದ ಸಾಧನೆಯನ್ನು ಮನೆಮನೆಗೆ ತಲಪಿಸುವಲ್ಲಿ ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ನಿರ್ವಹಿಸಲಿ ಎಂದು ಸಲಹೆಯಿತ್ತರು.
ಕೃಷಿ ಘಟಕದ ಪ್ರಮುಖರಾದ ನೆರವಂಡ ಉಮೇಶ್ ಮಾತನಾಡಿ, ರಾಜ್ಯದಲ್ಲಿ ಹಲವು ಯೋಜನೆ ಜಾರಿಗೆ ತಂದ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ಹಾಗೂ ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದೆ. ಮುಖ್ಯಮಂತ್ರಿ ಅವರನ್ನು ಸೋಲಿಸುವ ಮೂಲಕ ಕಾಂಗ್ರೆಸ್‍ನ್ನು ಸೋಲಿಸಲು ಪ್ರತಿಪಕ್ಷಗಳು ಸಂಚು ರೂಪಿಸುತ್ತಿದೆ ಎಂದು ದೂರಿದರು.
ಪ್ರಮುಖರಾದ ಕೊಲ್ಯದ ಗಿರೀಶ್, ತೆನ್ನೀರ ಮೈನಾ, ಸುನೀಲ್ ಪತ್ರಾವೂ ಮಾತನಾಡಿದರು.
ಹನೀಫ್ ಸಂಪಾಜೆ, ಬಾಲಚಂದ್ರ ನಾಯರ್, ಟಾಟು ಮೊಣ್ಣಪ್ಪ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.