ಬೆಂಗಳೂರು, ಏ. 21: ‘ಶಕ್ತಿ’ಗೆ ಇಂದು ತಡರಾತ್ರಿ ದೊರೆತ ಅಧಿಕೃತ ವರದಿಯನ್ವಯ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದ ವಕೀಲ ಹೆಚ್.ಎಸ್. ಚಂದ್ರಮೌಳಿ ಅವರಿಗೆ ಅಂತಿಮ ಹಂತದಲ್ಲಿ ಟಿಕೆಟ್ ಕೈತಪ್ಪಿದೆ.

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಖಚಿತಪಡಿಸಿದ್ದಾರೆ. ಚಂದ್ರಮೌಳಿಯವರು ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯ ನಡೆಸುವಂತೆ ಮುಖ್ಯಮಂತ್ರಿ ಅವರು ಚಂದ್ರಮೌಳಿ ಅವರಿಗೆ ಸಲಹೆ ಮಾಡಿದ್ದಾರೆ.

ಚಂದ್ರಮೌಳಿ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ, ಕೆಲವೊಂದು ಕಾರಣಕ್ಕಾಗಿ ತನಗೆ ಟಿಕೆಟ್ ಸಿಗುವದು ತಡವಾಗುವ ವಿದ್ಯಮಾನವನ್ನು ಗಮನಿಸಿ ಕೇವಲ ಅಲ್ಪಾವಧಿಯಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಲು ಅಸಾಧ್ಯವೆಂದು ಭಾವಿಸಿ ತಾನೂ ಕೂಡ ಸ್ಪರ್ಧೆಯಿಂದ ಹಿಂತೆಗೆದಿರುವದಾಗಿ ಮುಖ್ಯಮಂತ್ರಿಯವರಿಗೆ ಲಿಖಿತ ಪತ್ರ ನೀಡಿರುವದಾಗಿ ತಿಳಿಸಿದ್ದಾರೆ.

ನಾಪಂಡ ಮುತ್ತಪ್ಪ...?

ಮತ್ತೊಬ್ಬ ಪ್ರಬಲ ಆಕಾಂಕ್ಷಿ ನಾಪಂಡ ಮುತ್ತಪ್ಪ ಅವರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ದೊರಕುವ ಕುರಿತು ‘ಶಕ್ತಿ’ಗೆ ಮೂಲವೊಂದರಿಂದ ತಿಳಿದು ಬಂದಿದೆ.