ಶ್ರೀಮಂಗಲ, ಏ. 21: ನಿರ್ಮಾಣ ಹಂತದಲ್ಲಿದ್ದ ಸೇತುವೆ ಕಾಮಗಾರಿ 35 ಅಡಿ ಎತ್ತರದಿಂದ ಕುಸಿದ ದುರ್ಘಟ ನೆಯಲ್ಲಿ 6 ಜನ ಕಾರ್ಮಿಕರು ಕಾಂಕ್ರಿಟ್‍ನೊಳಗೆ ಸಿಲುಕಿಕೊಂಡು ಗಂಭೀರ ಗಾಯಗೊಂಡಿದ್ದಾರೆ. ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಬಿರುನಾಣಿ ಮತ್ತು ಹುದಿಕೇರಿ ಗ್ರಾ.ಪಂ. ನಡುವೆ ಪೊರಾಡು-ಬಾಡಗರಕೇರಿ ಗ್ರಾಮದ ಪಾಂಡಿಕಡವು ಎಂಬಲ್ಲಿ ಈ ಸಂಪರ್ಕ ಮಾರ್ಗಕ್ಕಾಗಿ ಕಕ್ಕಟ್ಟ್‍ನದಿಗೆ ಸೇತುವೆಯಲ್ಲಿ ಈ ದುರ್ಘಟನೆ ನಡೆದಿದೆ.

ಗಾಯಾಳುಗಳೆಲ್ಲರೂ ಉತ್ತರ ಭಾರತದ ಕಾರ್ಮಿಕರಾಗಿದ್ದಾರೆ. ದುರ್ಘಟನೆ ನಡೆದ ಸಂದರ್ಭ ಸ್ಥಳೀಯರು ಹಾಗೂ ಇತರ ಕಾರ್ಮಿಕರು ಸೇತುವೆ ಕುಸಿತದಿಂದ ಕಾಂಕ್ರಿಟ್ ಒಳಗೆ ಸಿಲುಕಿಕೊಂಡವರನ್ನು ರಕ್ಷಿಸಿ ಗೋಣಿಕೊಪ್ಪ ಆಸ್ಪತ್ರೆಗೆ ಸಾಗಿಸಿದರು. 6 ಜನ ಗಾಯಾಳುಗಳ ಪೈಕಿ 3 ಜನರಿಗೆ ಸೊಂಟ, ಕೈಕಾಲು ಗಳಿಗೆ ಗಂಭೀರ ಗಾಯಗಳಾಗಿವೆ.

ಬೆಳಿಗ್ಗೆ 8.30ಕ್ಕೆ ದುರ್ಘಟನೆ ಸಂಭವಿಸಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ ಈ ಸಂಪರ್ಕ ರಸ್ತೆ ಸೇರಿದಂತೆ ಸೇತುವೆ ಕಾಮಗಾರಿ ರೂ. 16 ಕೋಟಿ ವೆಚ್ಚದಲ್ಲಿ ಕಳೆದ 5 ವರ್ಷದಿಂದ ಆಮೆಗತಿಯಲ್ಲಿ ನಡೆಯುತ್ತಿದೆ. ರಸ್ತೆ ಕಾಮಗಾರಿ ಬಹುತೇಕ ಮುಗಿದಿದೆ. ಆದರೆ 2.25 ಕೋಟಿ ವೆಚ್ಚದಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ಪಿಲ್ಲರ್ ಪೂರ್ಣವಾಗಿದ್ದು, 5 ಸ್ಲ್ಯಾಬ್‍ಗಳಲ್ಲಿ 2 ಸ್ಲ್ಯಾಬ್ ಕಾಮಗಾರಿ ಮುಗಿದಿದೆ. ಉಳಿದ 3 ಸ್ಲ್ಯಾಬ್‍ಗಳ ಕಾಮಗಾರಿ ಗಳಿಗೆ ಸೆಂಟ್ರಿಂಗ್ ಅಳವಡಿಸಲಾಗಿತ್ತು.

ಶನಿವಾರ ಬೆಳಿಗ್ಗೆಯಿಂದಲೇ ಒಂದು ಸ್ಲ್ಯಾಬ್‍ಗೆ ಕಾಂಕ್ರಿಟ್‍ಗಳನ್ನು ಪೈಪು ಮೂಲಕ ತುಂಬಿಸಲಾಗುತ್ತಿತ್ತು. ಅರ್ಧಭಾಗದಷ್ಟು ಕಾಂಕ್ರಿಟ್ ತುಂಬಿದ ಸಂದರ್ಭ ಕೆಳಗೆ ಅಳವಡಿಸಿದ ಆಧಾರ ಸ್ತಂಭಗಳ ಭಾರ ತಡೆಯಲಾಗದೇ ಒಂದು ಬದಿಗೆ ಕುಸಿದ ಪರಿಣಾಮ ಅಳವಡಿಸಿದ ಕಬ್ಬಿಣದ ರಾಡ್, ಸೆಂಟ್ರಿಂಗ್ ಸಾಮಾಗ್ರಿ ಆಗತಾನೆ ತುಂಬಿದ್ದ ಸುಮಾರು 5 ಲಾರಿ ಲೋಡ್‍ನಷ್ಟು ಕಾಂಕ್ರಿಟ್ ಸಹಿತ ಕುಸಿದ ಪರಿಣಾಮ ಕೆಲಸ ಮಾಡುತ್ತಿದ್ದ 6 ಕಾರ್ಮಿಕರು ಸುಮಾರು 35 ಅಡಿ ಎತ್ತರದಿಂದ ಕೆಳಗೆ ಬಿದ್ದರು.

ಕೆಳಗೆ ಬಿದ್ದ ರಭಸಕ್ಕೆ ಹಲವರು ಹಸಿ ಕಾಂಕ್ರಿಟ್ ಒಳಗೆ ದೇಹದ ಬಹುಭಾಗ ಹೂತು ಹೋಯಿತು. ತಕ್ಷಣವೇ ಕಾಮಗಾರಿ ವೀಕ್ಷಿಸುತ್ತಿದ್ದ ಸ್ಥಳೀಯರಾದ ಕಳ್ಳಂಗಡ ಗಣೇಶ್, ಅಣ್ಣೀರ ಗಣೇಶ್, ಅಣ್ಣೀರ ಹರೀಶ್ ಮಾದಪ್ಪ ಸೇರಿದಂತೆ ಇತರ ಕಾರ್ಮಿಕರು ಗಾಯಾಳುಗಳನ್ನು ಎಳೆದು ಹೊರತಂದು ಸ್ಥಳೀಯ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದರು. ಆಸ್ಪತ್ರೆಗೆ ಸಾಗಿಸಲು ವಾಹನ ಲಭ್ಯವಾಗದ ಸಂದರ್ಭ ಆ ದಾರಿಯಲ್ಲೇ ಬಂದ ನೆಲ್ಲೀರ ತಮ್ಮು ಅವರು ತಮ್ಮ ಕಾರಿನಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸ್ಪಂದಿಸಿದರು.

ಇಲ್ಲದ ಮೇಲ್ವಿಚಾರಣೆ: ಕಾಮಗಾರಿಯನ್ನು ಸೋಮವಾರಪೇಟೆಯ ಗುತ್ತಿಗೆದಾರ ರಾಜೇಂದ್ರ ಪಡೆದುಕೊಂಡಿದ್ದು, ಗುತ್ತಿಗೆದಾರರಾಗಲಿ, ಇಂಜಿನಿಯರ್ ಆಗಲಿ ಸ್ಥಳದಲ್ಲಿ ಮೇಲ್ವಿಚಾರಣೆ ಮಾಡುತ್ತಿಲ್ಲ. ಕಾರ್ಮಿಕರೇ ಸೆಂಟ್ರಿಂಗ್, ಕಾಂಕ್ರಿಟ್ ಎಲ್ಲ ಕೆಲಸವನ್ನು ಮಾಡುತ್ತಿದ್ದು, ಪರಿಣಾಮ ಈ ದುರ್ಘಟನೆಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

ಚಿತ್ರ, ವರದಿ: ಹರೀಶ್ ಮಾದಪ್ಪ