ಸೋಮವಾರಪೇಟೆ, ಏ.21: ಮಲೆನಾಡು ಭಾಗಗಳಲ್ಲಿ ನಡೆಯುತ್ತಿರುವ ಸಬ್ಬಮ್ಮ ದೇವರ ಸುಗ್ಗಿ ಉತ್ಸವ ಸಮೀಪದ ಯಡೂರು ಗ್ರಾಮದಲ್ಲಿ ಸಂಭ್ರಮದಿಂದ ನಡೆಯಿತು.ಶುಕ್ರವಾರ ರಾತ್ರಿ ಯಡೂರು ಗ್ರಾಮದ ಸುಗ್ಗಿಕಟ್ಟೆಯಲ್ಲಿ ಗ್ರಾಮಸ್ಥರೊಂದಿಗೆ ನೂರಾರು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಭಾಗವಹಿಸಿದ್ದರು. ಗ್ರಾಮದÀ ನಿವಾಸಿಗಳು ಸುಗ್ಗಿಕಟ್ಟೆಯಲ್ಲಿ ಸೇರಿ ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಸುಗ್ಗಿ ಕಟ್ಟೆಯ ಮುಂಭಾಗ ಎಡೆ ಇಟ್ಟು, ಗ್ರಾಮದ ಸುಭೀಕ್ಷೆ, ಮಳೆ, ಬೆಳೆ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. 6 ಮಂದಿ ದೇವರ ಒಡೆಕಾರರು ಸುಗ್ಗಿಕಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪಟಾಕಿ ಸಿಡಿಸಲಾಯಿತು. ತಮಟೆ ವಾದ್ಯದೊಂದಿಗೆ ಗ್ರಾಮಸ್ಥರು ಸುಗ್ಗಿಕಟ್ಟೆಯ ಪ್ರದಕ್ಷಿಣೆ ಮಾಡಿದರು.

ಗ್ರಾಮದ ಮಹಿಳೆಯರು ಮಕ್ಕಳಾದಿಯಾಗಿ ಸಬ್ಬಮ್ಮ ದೇವಿಗೆ ಪೂಜೆ ಸಲ್ಲಿಸುವದರೊಂದಿಗೆ ಹಲವರು ತಮ್ಮ ಹರಕೆ ತೀರಿಸಿದರು. ದೇವಿಗೆ ಸಮರ್ಪಿಸಿದ ಎಡೆ ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸಲಾಯಿತು. ನಂತರ ಗ್ರಾಮಸ್ಥರು ಸಾಮೂಹಿಕ ಭೋಜನ ಮಾಡಿದರು.

ಶನಿವಾರ ಬೆಳಿಗ್ಗೆ ಗ್ರಾಮದ ದೇವರ ಬಾವಿಯಲ್ಲಿ ಬಸವಣ್ಣ ದೇವರ ಗಂಗಸ್ನಾನ ನಡೆಯಿತು. ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಇಟ್ಟು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಭಾನುವಾರ ಮಲ್ಲಸುಗ್ಗಿ, ಸೋಮವಾರ ಹಗಲು ಸುಗ್ಗಿ ಮಂಗಳವಾರ ಮಾರಿ ಕಳುಹಿಸುವ ಕಾರ್ಯದೊಂದಿಗೆ ಸುಗ್ಗಿ ಉತ್ಸವ ಕೊನೆಗೊಳ್ಳಲಿದೆ ಎಂದು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಪಿ.ಭಾನುಪ್ರಕಾಶ್ ತಿಳಿಸಿದರು. ಕಾರ್ಯದರ್ಶಿ ಎ.ವಿ.ಕಾರ್ತಿಕ್ ಮತ್ತು ಗ್ರಾಮಸ್ಥರು ಸುಗ್ಗಿ ಉತ್ಸವದ ಉಸ್ತುವಾರಿ ವಹಿಸಿದ್ದರು.