ಮಡಿಕೇರಿ, ಏ. 21: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೆರಿಯಮನೆ ಕಪ್ ಕ್ರಿಕೆಟ್ ಜಂಬರದ ಪ್ರಯುಕ್ತ ತಾ. 22 ರಂದು (ಇಂದು) ಪುರುಷರ ಹೊನಲು ಬೆಳಕಿನ ಕಬಡ್ಡಿ ಹಾಗೂ ಮಹಿಳೆಯರ ಕಬಡ್ಡಿ ಮತ್ತು ಥ್ರೋಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ.

ಪಂದ್ಯಾವಳಿಯನ್ನು ಬೆಳಿಗ್ಗೆ 9 ಗಂಟೆಗೆ ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್‍ನ ಜಂಟಿ ಕಾರ್ಯದರ್ಶಿ ಹಾಗೂ ಕೊಡಗು ಜಿಲ್ಲಾ ಅಧ್ಯಕ್ಷರೂ ಆಗಿರುವ ಹೊಸೊಕ್ಲು ಉತ್ತಪ್ಪ ಉದ್ಘಾಟಿಸುವರು. ಥ್ರೋಬಾಲ್ ಪಂದ್ಯಾವಳಿಯನ್ನು ಅಂತರಾಷ್ಟ್ರೀಯ ಥ್ರೋಬಾಲ್ ಆಟಗಾರ್ತಿ ಹಾಗೂ ಕರ್ನಾಟಕ ತಂಡದ ಮಾಜಿ ನಾಯಕಿ ಚೆರಿಯಮನೆ ಮೇಘ ಪ್ರಭಾಕರ್ ಉದ್ಘಾಟಿಸುವರು. ಕಳೆದ ವರ್ಷದಿಂದ ಮಹಿಳೆಯರ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದ್ದು, 8 ತಂಡಗಳು ಪಾಲ್ಗೊಂಡಿದ್ದವು. ಈ ಬಾರಿ 10 ತಂಡಗಳು ನೋಂದಾಯಿಸಿಕೊಂಡಿವೆ.

ಪುರುಷರ ಪಂದ್ಯಾವಳಿಯಲ್ಲಿ 22 ತಂಡಗಳು ಸೆಣಸಾಡಲಿವೆ. ಕುಟುಂಬವಾರು ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸು ವವರು ಬೆಳಿಗ್ಗೆ 9 ಗಂಟೆಗೆ ಸ್ಥಳದಲ್ಲೇ ಹೆಸರು ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದು ಯುವ ವೇದಿಕೆ ಕಾರ್ಯದರ್ಶಿ ಕಟ್ಟೆಮನೆ ರೋಶನ್ ತಿಳಿಸಿದ್ದಾರೆ.