ಕುಶಾಲನಗರ, ಏ. 21: ಕಾವೇರಿ ನದಿಗೆ ನೇರವಾಗಿ ಕಲುಷಿತ ನೀರು ಹರಿಸಿದ ಹಿನ್ನೆಲೆಯಲ್ಲಿ ಕೂಡಿಗೆಯ ಕಣಿವೆ ವ್ಯಾಪ್ತಿಯಲ್ಲಿ ನದಿ ನೀರು ಸಂಪೂರ್ಣ ಬಣ್ಣಮಿಶ್ರಿತವಾಗಿ ಹರಿಯುತ್ತಿರುವ ದೃಶ್ಯ ಕಂಡುಬಂದಿದೆ. ಶುಕ್ರವಾರ ಸಂಜೆಯಿಂದ ಕೂಡಿಗೆಯ ಕೆಳಭಾಗದಲ್ಲಿ ಕಣಿವೆ ಮೂಲಕ ಹರಿಯುತ್ತಿರುವ ನದಿ ನೀರು ಆಯಿಲ್ ಮಿಶ್ರಣಗೊಂಡು ಕೆಂಪು ಬಣ್ಣದಲ್ಲಿ ಹರಿಯುತ್ತಿದೆ. ಈ ಪರಿಸ್ಥಿತಿಗೆ ಖಚಿತ ಕಾರಣ ತಿಳಿದು ಬಂದಿಲ್ಲ.

ಕಣಿವೆ ರಾಮಲಿಂಗೇಶ್ವರ ದೇವಾಲಯದ ಅಕ್ವೆಡೆಕ್ಟ್ ಕೆಳಭಾಗದ ಸುಮಾರು 1 ಕಿಮೀ ಉದ್ದದಲ್ಲಿ ನದಿ ನೀರಿನಲ್ಲಿ ಬಣ್ಣ ಮಿಶ್ರಿತ ವಸ್ತುಗಳು ತೇಲುತ್ತಿದ್ದು ನೀರಿನ ಬಳಕೆಗೆ ಅನಾನುಕೂಲ ಉಂಟಾಗಿದೆ. ಇದೇ ನೀರನ್ನು ಹೆಬ್ಬಾಲೆ ಪಂಪ್ ಹೌಸ್ ಮೂಲಕ ಶೇಖರಿಸಿ ಸುಮಾರು 10 ಕ್ಕೂ ಹೆಚ್ಚು ಗ್ರಾಮಗಳ ಲಕ್ಷಾಂತರ ನಾಗರಿಕರು ಕುಡಿಯಲು ಬಳಸಬೇಕಾಗಿದೆ. ಅಪಾಯಕಾರಿ ಅಂಶಗಳನ್ನು ಒಳಗೊಂಡ ಕಲುಷಿತ ನೀರನ್ನು ಬಳಸುವದರಿಂದ ಭಾರೀ ಅನಾಹುತ ಉಂಟಾಗುವ ಸಾಧ್ಯತೆ ಎದುರಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಇದರಿಂದ ಈ ಭಾಗದ ನಾಗರಿಕರು ಆತಂಕಗೊಂಡಿದ್ದು ಘಟನೆಗೆ ಮೂಲ ಹುಡುಕುವಂತಾಗಿದೆ. ಈ ಬಗ್ಗೆ ಸ್ಥಳೀಯ ಪಂಚಾಯ್ತಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ಘಟನೆಯ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.