ಪೊನ್ನಂಪೇಟೆ, ಏ. 21: ಇದೀಗ ರಾಷ್ಟ್ರದಾದ್ಯಂತ ಸದ್ದುಮಾಡುತ್ತಿರುವ ಎಂ.ಇ.ಪಿ. (ಮಹಿಳಾ ಎಂಪವರ್‍ಮೆಂಟ್ ಪಾರ್ಟಿ) ಪಕ್ಷ ಕೊಡಗಿನ ಎರಡು ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಇದರಂತೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಮತ್ತು ಎಂ.ಇ.ಪಿ. ಪಕ್ಷದ ರಾಜ್ಯ ಚುನಾವಣಾ ಪ್ರಚಾರ ಅಧ್ಯಕ್ಷ ಹೆಚ್.ಡಿ. ಬಸವರಾಜು ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷದ ಪ್ರಮುಖರಾದ ಮಡಿಕೇರಿಯ ರಶೀದ ಅವರನ್ನು ಅಂತಿಮಗೊಳಿಸಿದ್ದು, ಎಂ.ಇ.ಪಿ.ಯ ರಾಷ್ಟ್ರಾಧ್ಯಕ್ಷರಾದ ಡಾ. ನೌಹೇರಾ ಶೇಕ್ ಅವರು ಇವರಿಗೆ ಈಗಾಗಲೇ ಪಕ್ಷದ ‘ಬಿ’ ಫಾರಂ ನೀಡಿದ್ದಾರೆ.
ಹಿಂದಿನ ವೀರಾಜಪೇಟೆ ವಿಧಾನಸಭಾ ಮೀಸಲು ಕ್ಷೇತ್ರವನ್ನು ಒಟ್ಟು 2 ಬಾರಿ ಪ್ರತಿನಿಧಿಸಿದ್ದ ಹೆಚ್.ಡಿ. ಬಸವರಾಜು ಅವರು ಇದೀಗ ಮತ್ತೊಮ್ಮೆ ಇಲ್ಲಿ ಕಣಕ್ಕಿಳಿಯುತ್ತಿರುವದು ಕುತೂಹಲ ಮೂಡಿಸಿದೆ. ಕಳೆದ ಕೆಲ ತಿಂಗಳ ಹಿಂದೆ ಜೆ.ಡಿ.(ಎಸ್.) ತೊರೆದು ಇವರು ಎಂ.ಇ.ಪಿ. ಸೇರಿದ್ದರು.
ಈ ಕುರಿತು ಬಸವರಾಜು ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ, ವೀರಾಜಪೇಟೆ ಕ್ಷೇತ್ರದಿಂದ ಎಂ.ಇ.ಪಿ. ಪಕ್ಷದಿಂದ ಸ್ಪರ್ಧಿಸುವ ವಿಷಯವನ್ನು ಖಚಿತಪಡಿಸಿದರು. ಕ್ಷೇತ್ರದ ಹಲವರು ಸ್ಪರ್ಧಿಸುವಂತೆ ಒತ್ತಡ ಹೇರಿದ್ದರು. ಅಲ್ಲದೆ ಈ ವಿಷಯವನ್ನು ಪಕ್ಷದ ರಾಷ್ಟ್ರಾಧ್ಯಕ್ಷರ ಗಮನಕ್ಕೂ ತಂದಿದ್ದರು. ವೀರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದ್ದೇನೆ. ತಮಗೆ 2 ಬಾರಿ ರಾಜಕೀಯವಾಗಿ ಜನ್ಮ ನೀಡಿದ ವೀರಾಜಪೇಟೆ ಕ್ಷೇತ್ರದ ಜನತೆ ಈ ಬಾರಿ ತಮ್ಮನ್ನು ಕೈಬಿಡುವದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಡಗಿನ ಜನತೆಗೆ ಈಗ ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಬಗ್ಗೆ ನಂಬಿಕೆಯಿಲ್ಲ. ಹಿಂದೆ ಜನರು ಈ ಪಕ್ಷಗಳ ಮೇಲೆ ಇರಿಸಿಕೊಂಡಿದ್ದ ವಿಶ್ವಾಸರ್ಹತೆಯನ್ನು ಉಳಿಸಿಕೊಳ್ಳುವಲ್ಲಿ ಎರಡೂ ಪಕ್ಷಗಳೂ ವಿಪಲವಾಗಿದೆ. ಜೆ.ಡಿ.(ಎಸ್.) ಬಗ್ಗೆ ಜನತೆಗೆ ಜಿಗುಪ್ಸೆಯಿದೆ. ಅದ್ದರಿಂದ ಈ ಪಕ್ಷ ಲೆಕ್ಕಕ್ಕಿಲ್ಲ. ಅದ್ದರಿಂದ ಜನರಿಗೆ ಎಂ.ಇ.ಪಿ. ಬಗ್ಗೆ ಒಲವಿದೆ. ಈ ಪಕ್ಷ ಹೊಸದಾದರೂ ಜನರು ಬಹುಬೇಗ ಇದನ್ನು ಸ್ವೀಕಾರ ಮಾಡಿದ್ದಾರೆ ಎಂದು ಹೇಳಿರುವ ಹೆಚ್.ಡಿ. ಬಸವರಾಜು ಅವರು, ಕ್ಷೇತ್ರದಲ್ಲಿ ತಮ್ಮ ಬಹಳಷ್ಟು ಯೋಜನೆಗಳು ಪೂರ್ಣಕೊಳ್ಳಲು ಬಾಕಿಯಿದೆ. 2 ಅವಧಿಯಲ್ಲಿ ಶಾಸಕರಾಗಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡೆ ಜನರ ಬಳಿ ತೆರಳಿ ಮತ ಯಾಚಿಸುತ್ತೇನೆ ಎಂದು ಹೇಳಿದರು. ಅಲ್ಲದೆ ಶೀಘ್ರದಲ್ಲೇ ಬೆಂಬಲಿಗರ ಮತ್ತು ಕಾರ್ಯಕರ್ತರ ಸಭೆ ನಡೆಸಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಅವರು ಇದೇ ವೇಳೆ ‘ಶಕ್ತಿ’ಗೆ ತಿಳಿಸಿದರು.
- ರಫೀಕ್ ತೂಚಮಕೇರಿ