ಮಡಿಕೇರಿ, ಏ. 21: ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಕ್ಯಾತನಹಳ್ಳಿ ಗ್ರಾಮದ ನಿವಾಸಿ ಕೆ.ಆರ್. ಅರುಣ್‍ಕುಮಾರ್ ಯಾನೆ ಹರೀಶ ಎಂಬಾತ ತನ್ನ ಪತ್ನಿ ರಾಣಿಯೊಂದಿಗೆ ಅನ್ಯೋನ್ಯವಾಗಿರದೇ ಬೇರೆ ವಾಸವಾಗಿದ್ದು, ರಾಣಿಯನ್ನು ಕೊಲ್ಲುವದಾಗಿ ಆಗಾಗ್ಗೆ ಬೆದರಿಕೆ ಹಾಕುತ್ತಿದ್ದು, ತಾ. 4.3.2013 ರಂದು ಮಧ್ಯಾಹ್ನ 12.30 ಗಂಟೆಗೆ ಆರೋಪಿಯು ರಾಣಿಯ ಕಣ್ಣಿಗೆ ಮೆಣಸಿನ ಪುಡಿ ಹಾಕಿ ಬಲ ತೊಡೆಗೆ ಕತ್ತಿಯಿಂದ ತೀವ್ರವಾಗಿ ಕಡಿದು ಗಾಯಗೊಳಿಸಿ ಕೊಲೆಗೆ ಯತ್ನಿಸಿದ್ದ.

ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಲಾಗಿತ್ತು.

ಈ ಪ್ರಕರಣದ ವಿಚಾರಣೆಯು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದು ಆರೋಪಿ ತನ್ನ ಪತ್ನಿಯನ್ನು ಕೊಲೆ ಮಾಡಲು ಪ್ರಯತ್ನಿಸಿರುವದು ಸಾಕ್ಷಿಗಳ ವಿಚಾರಣೆಯಿಂದ ಸಾಬೀತಾಗಿದೆ. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಆರೋಪಿತನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ನ್ಯಾಯಾಧೀಶರು ಸದರಿ ಆರೋಪಿತನು ಕೊಲೆ ಮಾಡಲು ಪ್ರಯತ್ನಿಸಿದ ಅಪರಾಧಕ್ಕಾಗಿ 4 ವರ್ಷಗಳ ಸಜೆ ಮತ್ತು ರೂ. 12 ಸಾವಿರ ದಂಡವನ್ನು ಪಾವತಿಸುವಂತೆ ತೀರ್ಪು ನೀಡಿರುತ್ತಾರೆ. ವಸೂಲಾಗುವ ದಂಡದ ಹಣದಲ್ಲಿ ರೂ. 10 ಸಾವಿರವನ್ನು ಆರೋಪಿಯ ಪತ್ನಿ ರಾಣಿಗೆ ಪರಿಹಾರವಾಗಿ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಸರಕಾರಿ ಅಭಿಯೋಜಕಿ ಎಂ. ಕೃಷ್ಣವೇಣಿ ವಕಾಲತ್ತು ವಹಿಸಿದ್ದರು.