ಮಡಿಕೇರಿ, ಏ. 21: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದು, ತಾ. 22 ರಂದು ಅಭ್ಯರ್ಥಿಗಳು ಯಾರೆಂದು ಘೋಷಣೆ ಮಾಡಲಿದೆ. ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕುತ್ತಿರುವ ಕುರಿತು ಪಕ್ಷದ ಜಿಲ್ಲಾಧ್ಯಕ್ಷ ಅಮಿನ್ ಮೊಯ್ಸಿನ್ ಪಕ್ಷದ ಉದ್ದೇಶದ ಕುರಿತು ‘ಶಕ್ತಿ’ ಸಂದರ್ಶನದಲ್ಲಿ ವಿವರ ಮಾಹಿತಿ ನೀಡಿದ್ದಾರೆ.
ಕೊಡಗಿನಲ್ಲಿ ಇದುವರೆಗೂ ಜನರ ಭಾವನೆಗಳನ್ನು ಮುಂದಿಟ್ಟುಕೊಂಡು ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಮೇಲುಗೈ ಸಾಧಿಸಿವೆ. ಆದರೆ ಎಸ್‍ಡಿಪಿಐ ಜಿಲ್ಲೆಯ ಅಭಿವೃದ್ಧಿಯ ಧ್ಯೇಯೋದ್ದೇಶದೊಂದಿಗೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಅನ್ಯೋನ್ಯತೆಯಿಂದ ಬದುಕು ಸಾಗಿಸುವ ಉದ್ದೇಶದೊಂದಿಗೆ ನಾವು ಜನರ ಬಳಿಗೆ ತೆರಳಿ ಮತ ಕೇಳಲಿದ್ದು, ನಾವು ಈ ಹಿಂದೆ ನಡೆಸಿದ ದಿಡ್ಡಳ್ಳಿ ಹೋರಾಟ ಸೇರಿದಂತೆ ಹಲವು ಜನಪರ ಕಾರ್ಯಗಳು ನಮಗೆ ಶ್ರೀರಕ್ಷೆಯಾಗಲಿದೆ ಎಂದು ಅಮೀನ್ ಮೊಯ್ಸಿನ್ ವಿಶ್ವಾಸ ವ್ಯಕ್ತಪಡಿಸಿದರು.
ಎಸ್‍ಡಿಪಿಐ ಕೇವಲ ಒಂದು ಧರ್ಮಕ್ಕೆ ಸೀಮಿತವಾದ ಪಕ್ಷವಲ್ಲ. ನಮ್ಮ ಪಕ್ಷದಲ್ಲಿ ಅನ್ಯಧರ್ಮಗಳ ವ್ಯಕ್ತಿಗಳು ಜಿಲ್ಲಾಮಟ್ಟದಲ್ಲಿ ಸ್ಥಾನಮಾನ ಹೊಂದಿದ್ದಾರೆ. ನಾವು ಜಾತಿ ಆಧಾರದಲ್ಲಿ ಚುನಾವಣೆ ಎದುರಿಸುವದಿಲ್ಲ. ಜಿಲ್ಲೆಯು ಅಭಿವೃದ್ಧಿ ಹೊಂದಬೇಕು. ಸರ್ವರಿಗೂ ಒಳಿತಾಗಬೇಕೆಂಬದು ನಮ್ಮ ಗುರಿ. ಈ ನಿಟ್ಟಿನಲ್ಲಿ ಎಲ್ಲಾ ಧರ್ಮದವರೂ ನಮಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‍ನೊಂದಿಗೆ ಸೇರಿಕೊಂಡು ಒಟ್ಟಾಗಿ ಚುನಾವಣೆ ಎದುರಿಸುವ ಬಗ್ಗೆ 6 ತಿಂಗಳ ಹಿಂದೆಯೇ ರಾಜ್ಯಮಟ್ಟದಲ್ಲಿ ಚರ್ಚೆಗಳಾಗಿದ್ದರೂ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ನಿರ್ಧಾರ ಪ್ರಕಟಿಸಿದ್ದರಿಂದ ಎಸ್.ಡಿ.ಪಿ.ಐ. ಕೂಡ ಸ್ವತಂತ್ರವಾಗಿ ಚುನಾವಣಾ ಕಣಕ್ಕಿಳಿಯಲು ಮುಂದಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾವದೇ ಪಕ್ಷಕ್ಕೂ ನಾವು ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಚುನಾವಣೆಯಲ್ಲಿ ನಮ್ಮ ಸ್ಪರ್ಧೆ ಖಚಿತ ಎಂದರು.
ಲೋಕಸಭಾ ಸದಸ್ಯ ಓವೈಸಿಯವರು ಜಾತ್ಯಾತೀತ ಜನತಾದಳಕ್ಕೆ ಬೆಂಬಲ ವ್ಯಕ್ತಪಡಿಸಿರುವದರಿಂದ ಎಸ್‍ಡಿಪಿಐಗೆ ಯಾವದೇ ನಷ್ಟವಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ನಮ್ಮ ಮತಬ್ಯಾಂಕ್ ಎಲ್ಲಿಯೂ ಹೋಗುವದಿಲ್ಲ. ಎಸ್‍ಡಿಪಿಐಗೆ ಬಿಜೆಪಿ ನೇರ ಪ್ರತಿಸ್ಪರ್ಧಿ ಕಾಂಗ್ರೆಸ್ ಮೂರನೇ ಹಾಗೂ ಜೆಡಿಎಸ್ ನಾಲ್ಕನೇ ಸ್ಥಾನ ತಳ್ಳಲ್ಪಡುತ್ತದೆ ಎಂದು ಅಮಿನ್ ಮೊಯ್ಸಿನ್ ಹೇಳಿದರು.
ಟಿಪ್ಪು ಜಯಂತಿ ಸರ್ಕಾರದ ಕಾರ್ಯಕ್ರಮ. ಟಿಪ್ಪು ಓರ್ವ ಸ್ವಾತಂತ್ರ್ಯ ಹೋರಾಟಗಾರರೆಂದು ಸಂವಿಧಾನದಲ್ಲೇ ಉಲ್ಲೇಖವಿದೆ. ಆದ್ದರಿಂದ ಅದಕ್ಕೆ ನಮ್ಮ ನಾಯಕರು ಬೆಂಬಲ ವ್ಯಕ್ತಪಡಿಸಿದರು ಹೊರತು, ಬೇರಾವದೇ ಉದ್ದೇಶದಿಂದಲ್ಲ; ಶಾಂತಿ-ಸಹಬಾಳ್ವೆಯನ್ನು ಸಹಿಸದ ಮಂದಿ ಟಿಪ್ಪು ಜಯಂತಿಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡರೆಂದು ಅಮೀನ್ ಟೀಕಿಸಿದರು.