ಮಡಿಕೇರಿ, ಏ. 21: ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಕ್ರಿಕೆಟ್ ಹಬ್ಬ ‘ಮಡ್ಲಂಡ ಕ್ರಿಕೆಟ್ ಕಪ್-2018’ ಇದೇ ತಾ. 29 ರಿಂದ ಮೇ 27 ರವರೆಗೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಕ್ರಿಕೆಟ್ ಕಪ್ ಸಮಿತಿ ಅಧ್ಯಕ್ಷ ಮಡ್ಲಂಡ ಮೋನಿಶ್ ಸುಬ್ಬಯ್ಯ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 19 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಡಿಕೇರಿಯಲ್ಲಿ ಕೊಡವ ಕ್ರಿಕೆಟ್ ಕಪ್ ಪಂದ್ಯಾಟ ನಡೆಯುತ್ತಿರುವದು ವಿಶೇಷವೆಂದರು. ಈ ಬಾರಿ 216 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದು, ಸಾವಿರಾರು ಅಭಿಮಾನಿಗಳನ್ನು ನಿರೀಕ್ಷಿಸಲಾಗಿದೆ. ಕೊಡವ ಹಾಕಿ ಹಬ್ಬದಂತೆ ಕೊಡವ ಕ್ರಿಕೆಟ್ ಹಬ್ಬ ಕೂಡ ಖ್ಯಾತಿ ಗಳಿಸಿದೆ. ಕಳೆದ 18 ವರ್ಷಗಳಿಂದ ಕೊಡವ ಕ್ರಿಕೆಟ್ ಅಕಾಡೆಮಿಯೊಂದಿಗೆ ಕ್ರಿಕೆಟ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬರಲಾಗುತ್ತಿದೆ. ಕ್ರಿಕೆಟ್ ಕಪ್ ಪಂದ್ಯಾವಳಿಯಿಂದಾಗಿ ಸಾಕಷ್ಟು ಎಳೆಯರು ಉತ್ತಮ ಆಟಗಾರರಾಗಿ ಹೊರ ಹೊಮ್ಮಿದ್ದಾರೆ. ಈಗಾಗಲೇ ಶಾಲಾ, ಕಾಲೇಜು ಹಾಗೂ ಕ್ಲಬ್ಗಳಲ್ಲಿ ಉತ್ತಮ ಆಟಗಾರರಾಗಿ ಗುರುತಿಸಿಕೊಂಡಿ ದ್ದಾರೆ. ಮುಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನ ಯುವಕರು ಗಮನ ಸೆಳೆಯಬೇಕು ಎನ್ನುವದು ಪಂದ್ಯಾವಳಿ ನಡೆಸುವ ಉದ್ದೇಶವಾಗಿದೆ ಎಂದು ಮೋನಿಶ್ ಸುಬ್ಬಯ್ಯ ತಿಳಿಸಿದರು. (ಮೊದಲ ಪುಟದಿಂದ)ಈ ಬಾರಿಯ ವಿಶೇಷ ಕ್ರಿಕೆಟ್ ಹಬ್ಬಕ್ಕೆ ಸುಮಾರು 20 ರಿಂದ 25 ಲಕ್ಷ ರೂ. ವೆಚ್ಚವಾಗಲಿದ್ದು, ಕಳೆದ 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಡ್ಲಂಡ ಕ್ರಿಕೆಟ್ ಕಪ್ ಪಂದ್ಯದಲ್ಲಿ ಮೂರನೇ ಅಂಪೈರ್ ಹಾಗೂ ರಿವ್ಯೂ ನಿಯಮವನ್ನು ಅಳಸಿಕೊಳ್ಳಲಾಗುತ್ತಿದೆ. ರನ್ಔಟ್ ಸಂದರ್ಭ ಆಗುವ ಗೊಂದಲ ಹಾಗೂ ವಿವಾದವನ್ನು ತಡೆಯುವ ಸಂದರ್ಭ ಈ ನಿಯಮ ವನ್ನು ಬಳಸಿಕೊಳ್ಳ ಲಾಗುವದು. ಮೈದಾನದಲ್ಲಿನ ಅಂಪೈರ್ ನೀಡುವ ರನ್ಔಟ್ ತೀರ್ಪನ್ನು ತಂಡದ ನಾಯಕ ಪ್ರಶ್ನಿಸಬಹುದಾಗಿದೆ. ಈ ಸಂದರ್ಭ ಮೂರನೇ ಅಂಪೈರ್ ನೆರವು ಪಡೆದುಕೊಳ್ಳಲಾಗುವದು. ನಾಟ್ಔಟ್ ಎಂದು ಕಂಡು ಬಂದಲ್ಲಿ ರಿವ್ಯೂ ಅವಕಾಶ ತಂಡಕ್ಕೆ ಮುಂದುವರಿ ಯಲಿದೆ. ಎರಡು ಬಾರಿ ಔಟ್ ಎನ್ನುವದು ಕಂಡು ಬಂದಲ್ಲಿ ರಿವ್ಯೂ ಅವಕಾಶವನ್ನು ಆ ತಂಡ ಕಳೆದು ಕೊಳ್ಳಲಿದೆ. ಈ ರೀತಿ ವಿಶೇಷ ಹಾಗೂ ವಿಭಿನ್ನವಾದ ಪ್ರಯತ್ನದ ಮೂಲಕ ಮಡ್ಲಂಡ ಕಪ್ ಗಮನ ಸೆಳೆಯಲಿದೆ.