*ಗೋಣಿಕೊಪ್ಪಲು, ಏ. 21 : ಪಶ್ಚಿಮಬಂಗಳಾದ ಜಲ್ದಪುರ ರಾಷ್ಟ್ರೀಯ ಉದ್ಯಾನವನಕ್ಕೆ ತಿತಿಮತಿ ಸಮೀಪದ ಮತ್ತಿಗೋಡು ಸಾಕಾನೆ ಶಿಬಿರದಿಂದ 5 ಆನೆಗಳು ರಾಣಿಗೇಟ್‍ನಿಂದ ಎರಡು ಹಾಗೂ ದುಬಾರೆಯಿಂದ ಒಂದು ಆನೆ ಸೇರಿದಂತೆ 8 ಆನೆಗಳು ಪ್ರಯಾಣ ಬೆಳೆಸಿದವು.

ಮೇರಿ (61) ಧರ್ಮರಾಯ (8), ಶ್ರೀನಿವಾಸ (15), ಸಾರಥಿ (18), ನಂಜುಂಡ (23) ಸಂಜೆ 5 ಗಂಟೆಗೆ ಸಾವಿರಾರು ಕಿಲೋ ಮೀಟರ್ ದೂರದ ಪಶ್ಚ್ಚಿಮಬಂಗಾಳಕ್ಕೆ ಹೊರಟ ಆನೆಗಳನ್ನು ಮತ್ತಿಗೋಡು ಸಾಕಾನೆ ಶಿಬಿರದ ಆರ್ ಎಫ್ ಒ ಕಿರಣ್‍ಕುಮಾರ್, ಡಿಎಫ್‍ಒ ಮರಿಯಾಕ್ರಿಸ್ತರಾಜ್, ತಿತಿಮತಿ ಎಸಿಫ್ ಶ್ರೀಪತಿ, ನಾಗರಹೊಳೆ ಎಸಿಎಫ್ ಪೌಲ್ ಆಂಟೋನಿ ಬೀಳ್ಕೊಟ್ಟರು. ಉತ್ತರ ಪಶ್ಚಿಮಬಂಗಾಳದ ಕೂಚ್‍ಬೆಹಾರ್ ಜಿಲ್ಲೆಯ ಜಲ್ದಪುರ ಅರಣ್ಯ ವಿಭಾಗದ ಜಲ್ದಪುರ ರಾಷ್ಟ್ರೀಯ ಉದ್ಯಾನವನದ ಹಿರಿಯ ಅರಣ್ಯಾಧಿಕಾರಿಗಳು ಆನೆಗಳನ್ನು ಕರೆದೊಯ್ದರು.

ಮೇರಿ ಆನೆಯನ್ನು ಸುಮಾರು 40 ವರ್ಷಗಳ ಹಿಂದೆ ಕಾಕನ ಕೋಟೆಯಲ್ಲಿ ಸೆರೆಹಿಡಿಯಲಾಗಿತ್ತು. ಆರಂಭದಲ್ಲಿ ಸುಂಕದಕಟ್ಟೆ ಸಾಕಾನೆ ಶಿಬಿರದಲ್ಲಿದ್ದ ಆನೆಯು ಮತ್ತಿಗೋಡಿಗೆ ತರಲಾಗಿತ್ತು. ಮತ್ತಿಗೋಡು ಶಿಬಿರದಲ್ಲಿ ಕಿರಿಯ ಆನೆಗಳಿಗೆ ತಾಯಿಯಂತಿತ್ತು. ಮೈಸೂರು ದಸರಾ ಉತ್ಸವದಲ್ಲಿಯೂ ಪಾಲ್ಗೊಂಡಿತ್ತು. ಇದರ ಜತೆಗೆ ಮಾವುತ ಆಹಮದ್ ಶರೀಫ್, ಕಾವಾಡಿ ಚಿನ್ನಾಣು ಪಯಣಿಸಿದರು.

ಧರ್ಮರಾಯ ಆನೆ ಬಳ್ಳೆ ಸಾಕಾನೆ ಶಿಬಿರದಲ್ಲಿ 2011 ರಂದು ವರಲಕ್ಷ್ಮಿ ಆನೆಗೆ ಜನಿಸಿತ್ತು. ಕಾವಾಡಿಗಳಾದ ಅಶೋಕ್, ಚೇತನ್ ತೆರಳಿದರು. ಶ್ರೀನಿವಾಸ ಆನೆ ಸುಂಕದಕಟ್ಟೆಯಲ್ಲಿ ಕೋಕಿಲ ಆನೆಗೆ ಜನಿಸಿತ್ತು. ಕಾವಾಡಿಗಳಾದ ವಿಶ್ವ, ಮನು ಇದರ ಜತೆಗೆ ಪ್ರಯಾಣಿಸಿದರು.

ಸಾರಥಿ ಆನೆ ಸುಂಕದಕಟ್ಟೆಯಲ್ಲಿ ಮೇರಿಗೆ ಜನಿಸಿತ್ತು. ಇದರ ಜತೆ ಮಾವುತ ದಾಸಪ್ಪ, ಕಾವಾಡಿ ದಿನು ತೆರಳಿದರು. ನಂಜುಂಡ ಆನೆಯನ್ನು ಹಾಸನ ಜಿಲ್ಲೆಯ ದೊಡ್ಡಬೆಟ್ಟದಲ್ಲಿ 2014, ಜ.16ರಂದು ಸೆರೆಹಿಡಿಯಲಾಗಿತ್ತು. ಇದರ ಜತೆಗೆ ಕಾವಾಡಿಗಳಾದ ಮಲ್ಲಿಕಾರ್ಜುನ, ವಿನೋದ್‍ರಾಜ್ ಪಯಣಿಸಿದರು. ಪಶ್ಚಿಮ ಬಂಗಳಾದಲ್ಲಿ ಕಾವಾಡಿಗಳು ಮತ್ತು ಮಾವುತರು ಕೆಲವು ತಿಂಗಳ ಕಾಲ ಇದ್ದು ಆನೆಗಳಿಗೆ ಅಭ್ಯಾಸವಾದ ಬಳಿಕ ಮರಳಲಿದ್ದಾರೆ ಎಂದು ಕಿರಣ್ ಕುಮಾರ್ ತಿಳಿಸಿದರು.

ಹತ್ತಾರು ವರ್ಷಗಳಿಂದ ಆನೆಗಳ ಒಡನಾಟದಲ್ಲಿದ್ದ ಮಾವುತ ಮತ್ತು ಕಾವಾಡಿಗಳ ಕುಟುಂಬದವರಲ್ಲಿ ಆನೆಗಳನ್ನು ಬೀಳ್ಕೊಡುವ ಸಂದರ್ಭದಲ್ಲಿ ದುಃಖ ಮಡುಗಟ್ಟಿತ್ತು. ಮತ್ತಿಗೋಡು ಶಿಬಿರದಲ್ಲಿಯೇ ಜನಿಸಿ ಮಕ್ಕಳಂತೆ ಓಡಾಡಿಕೊಂಡಿದ್ದ ಧರ್ಮರಾಯ, ಮಾತೃಸ್ಥಾನದಲ್ಲಿದ್ದ ಮೇರಿ, ಸೌಮ್ಯ ಸ್ವಭಾವದ ಶ್ರೀನಿವಾಸ, ಇತರ ಅನೆಗಳಿಗೆ ಮಾವುತರೊಂದಿಗೆ ಸೊಪ್ಪು ಸೌದೆ ಹೊತ್ತು ತರುತ್ತಿದ್ದ ಸಾರಥಿ, ಹಲವು ಮನುಷ್ಯರನ್ನು ಬಲಿ ತೆಗೆದುಕೊಂಡು ಕೊನೆಗೆ ದೊಡ್ಡಿ ಸೇರಿ ಮಾವುತರ ಮಾತಿಗೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದ ನಂಜುಂಡ ಆನೆಗಳು ತಮ್ಮ ಸಂಬಂಧವನ್ನೇ ಬಿಟ್ಟು ದೂರದ ಲೋಕಕ್ಕೆ ಹೋಗುವದನ್ನೇ ನೆನೆದ ಮಾವುತರ ಕುಟುಂಬದ ಮಹಿಳೆಯರ ಮತ್ತು ಅರಣ್ಯ ಸಿಬ್ಬಂದಿಗಳ ಕಣ್ಣಿನಲ್ಲಿ ನೀರು ತುಂಬಿಕೊಂಡಿತ್ತು.

ಕುಶಾಲನಗರ ವರದಿ

ದುಬಾರೆ ಸಾಕಾನೆ ಶಿಬಿರದಿಂದ ಮಯೂರ ಆನೆಯೊಂದಿಗೆ ಮಾವುತರಾದ ಕುಟ್ಟ ಹಾಗೂ ಪವಿ ತೆರಳಿದ್ದಾರೆ. ಈ ಸಂದರ್ಭ ಡಿಎಫ್‍ಓ ಮಂಜುನಾಥ್ ಹಾಗೂ ಜಯ ಇದ್ದರು. ರಾಣಿಗೇಟ್‍ನಿಂದ ಮದಕರಿ ಹಾಗೂ ವಿಠಲ ಆನೆಗಳು ತೆರಳಿವೆ.

ವರದಿ: ಎನ್.ಎನ್ ದಿನೇಶ್