ವೀರಾಜಪೇಟೆ, ಏ. 21: ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಜಾತ್ಯತೀತ ಜನತಾದಳದಿಂದ ಸ್ಪರ್ಧಿಸಲು ಪಕ್ಷದ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಅವರು ಇಂದು ನಾಮಪತ್ರ ಸಲ್ಲಿಸಿದರು.ತಾ. 17 ರಿಂದ 24ರವರೆಗೆ ನಾಮಪತ್ರ ಸಲ್ಲಿಸಲು ದಿನಾಂಕ ನಿಗದಿಯಾಗಿದ್ದರೂ ನಾಲ್ಕು ದಿನಗಳ ನಂತರ ಮೊದಲ ನಾಮಪತ್ರ ಸಲ್ಲಿಕೆಯಾಗಿದೆ. (ಮೊದಲ ಪುಟದಿಂದ) ಸಂಕೇತ್ ಪೂವಯ್ಯ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಾಡಾನೆ, ಹುಲಿ ಧಾಳಿಗೆ ತುತ್ತಾದ ಸಂತ್ರಸ್ತ ಮಹಿಳೆ ಹಾಗೂ ವಿಧವೆಯರಾದ ಬಸವಿ, ಲಕ್ಷ್ಮಿ, ಕೃಷ್ಣಮ್ಮ ಹಾಗೂ ಲಕ್ಷ್ಮಿ ರಮೇಶ್ ಜೊತೆಯಲ್ಲಿದ್ದರು.ಸಂಕೇತ್ ಪೂವಯ್ಯ ಅವರು ನಾಮಪತ್ರದ ಒಂದು ಪ್ರತಿಯನ್ನು ಚುನಾವಣಾಧಿಕಾರಿ ಕೆ.ರಾಜು ಅವರಿಗೆ ಸಲ್ಲಿಸಿದ ನಂತರ ಚುನಾವಣಾಧಿಕಾರಿ ಸಮ್ಮುಖದಲ್ಲಿ ‘ರೈತ ಮತ್ತು ಶ್ರಮಿಕನ’ ಹೆಸರಿನಲ್ಲಿ ಪ್ರಮಾಣ ಪೂರ್ವಕವಾಗಿ ಸ್ವಯಂ ಘೋಷಣೆ ಮಾಡಿಕೊಂಡರು.ಪ್ರಣಾಳಿಕೆಯಂತೆ ಬೇಡಿಕೆ ಈಡೇರಿಕೆ

ನಾಮಪತ್ರ ಸಲ್ಲಿಸಿ ಹೊರಗಡೆ ಬಂದ ಸಂಕೇತ್ ಪೂವಯ್ಯ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಪಕ್ಷದ ಪ್ರಣಾಳಿಕೆಯಂತೆ ರೈತರ ಹಾಗೂ ಬೆಳೆಗಾರರ ಸಾಲವನ್ನು 24ಗಂಟೆಯೊಳಗೆ ಮನ್ನಾ ಮಾಡಲಾಗುವದು. ರೈತ ಹಾಗೂ ಬೆಳೆಗಾರರ ಸಮಸ್ಯೆಗಳಿಗೆ ನೇರ ಸ್ಪಂದನ, ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ಆರ್ಥಿಕ ಸಹಾಯ ದೊಂದಿಗೆ ಸಬಲೀಕರಣ, ಸಮಾಜದ ಬಡವರಿಗೆ ದುರ್ಬಲರಿಗೆ ಆರ್ಥಿಕ ಸಹಾಯ, ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ನೇರ ಸ್ಪಂದನ ಪರಿಹಾರ ಮಾಡಲಾಗುವದು ಎಂದರು.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಿನಿ ವಿಧಾನಸೌಧದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರುಗಳು ನೆರೆದಿದ್ದರು. ಪಕ್ಷದ ಮುಖಂಡರುಗಳಾದ ಕ್ಷೇತ್ರದ ಅಧ್ಯಕ್ಷ ಎಸ್.ಎಚ್. ಮತೀನ್, ಎಂ.ಸಿ. ಬೆಳ್ಳಿಯಪ್ಪ ನಾಪೋಕ್ಲಿನ ಮನ್ಸೂರ್ ಆಲಿ, ಮಲಚೀರ ದೇವಯ್ಯ, ವಿಷಿ ದೇವರಾಜು, ಪಿ.ಎ.ಮಂಜುನಾಥ್, ಸುನೀತಾ ಮತ್ತಿತರರು ಹಾಜರಿದ್ದರು.