ಮಡಿಕೇರಿ, ಏ. 21: ಕಾಂಗ್ರೆಸ್ ಹೈಕಮಾಂಡ್ ತಳೆದಿರುವ ನಿಲುವಿನಿಂದ ಒತ್ತಡದಲ್ಲಿ ಸಿಲುಕಿರುವ ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ರಾಜಧಾನಿ ಬೆಂಗಳೂರಿನಲ್ಲಿ ಯಾವದೇ ಆಶಾದಾಯಕ ಬೆಳವಣಿಗೆ ಕಾಣದೆ ನಲುಗುವಂತಾಗಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‍ನ ಅಧಿಕೃತ ಅಭ್ಯರ್ಥಿಗಳಾಗಿ ಹೆಚ್.ಎಸ್. ಚಂದ್ರಮೌಳಿ ಹಾಗೂ ವೀರಾಜಪೇಟೆ ಕ್ಷೇತ್ರಕ್ಕೆ ಸಿ.ಎಸ್. ಅರುಣ್ ಮಾಚಯ್ಯ ಹೆಸರು ಪ್ರಕಟಿಸಲಾಗಿತ್ತು.

ಆ ಬೆನ್ನಲ್ಲೇ ‘ಕೈ’ ಪಾಳಯದಲ್ಲಿ ಸ್ಫೋಟಗೊಂಡ ಅಸಮಾಧಾನದ ಒಳಬೇಹುದಿ ಒಂದು ವಾರ ಕಳೆದರೂ ಶಮನಗೊಳ್ಳದೆ ಅನೇಕರು ಇನ್ನೂ ರಾಜಧಾನಿಯಲ್ಲಿ ಬೀಡುಬಿಟ್ಟಿದ್ದಾರೆ. ಕೈ ಪಾಳಯದ ಮೇಲಾಟದಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳುವ ತವಕದಿಂದ ಲಾಭಿ ನಡೆಸುತ್ತಿದ್ದಾರೆ. ಒಬ್ಬೊಬ್ಬರು ಒಬ್ಬೊಬ್ಬರಂತೆ ಕೆಪಿಸಿಸಿ ನಾಯಕರನ್ನು ಟಿಕೆಟ್‍ಗಾಗಿ ಗೋಗರೆಯುವ ಪ್ರಯತ್ನದಲ್ಲಿದ್ದಾರೆ. ಮೇಲ್ನೋಟಕ್ಕೆ ಈ ನಾಯಕರು ಕೂಡ ತಮ್ಮನ್ನು ನಂಬಿ ಬಂದಿರುವ ಕೊಡಗಿನ ಟಿಕೆಟ್ ಆಕಾಂಕ್ಷಿಗಳನ್ನು ಸಮಾಧಾನಗೊಳಿಸುವ ತಂತ್ರಗಾರಿಕೆಯಲ್ಲಿ ದಿನಗಳನ್ನು ಮುಂದೂಡುತ್ತಿರುವದು ಖಾತರಿಯಾಗತೊಡಗಿದೆ.ಚಂದ್ರಮೌಳಿ ಪತ್ರ: ಮೂಲಗಳ ಪ್ರಕಾರ ಈಗಾಗಲೇ ಅಭ್ಯರ್ಥಿಯೆಂದು ಘೋಷಿಸಲ್ಪಟ್ಟು ಟಿಕೆಟ್ ತಡೆಹಿಡಿಯಲ್ಪಟ್ಟಿರುವ ಹೆಚ್.ಎಸ್. ಚಂದ್ರಮೌಳಿ ನೇರವಾಗಿ ‘ಕೈ’ ನಾಯಕರಿಗೆ ಲಿಖಿತ ರೂಪದಲ್ಲಿ ಪತ್ರ ಬರೆದಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ. ಆ ಪತ್ರದಲ್ಲಿ ತನ್ನ ಟಿಕೆಟ್ ತಡೆಹಿಡಿಯಲು ಕಾರಣವಾಗಿರುವ ವ್ಯಾಜ್ಯವೊಂದರ ವಿವರವನ್ನು ಅವರು ಉಲ್ಲೇಖಿಸಿ ಓರ್ವ ವಕೀಲನಾಗಿ ನಿರ್ವಹಿಸಿರುವ ಕರ್ತವ್ಯವನ್ನು ಬೊಟ್ಟು ಮಾಡಿದ್ದಾರೆ ಎನ್ನಲಾಗಿದೆ.

ಈ ಪತ್ರದ ಒಕ್ಕಣೆಯಿಂದÀ ಚಂದ್ರಮೌಳಿ ಯಾವದೆ ಲೋಪ ಎಸಗದಿದ್ದರೂ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೊಬ್ಬರ ಹುನ್ನಾರದಿಂದಲೇ ಗೊಂದಲ ಸೃಷ್ಟಿಯಾಗಿದೆ ಎಂಬ ಅಂಶವನ್ನು ವರಿಷ್ಠರು ಮನವರಿಕೆ ಮಾಡಿಕೊಂಡಿದ್ದರೂ, ಚಂದ್ರಮೌಳಿಗೆ ‘ಬಿ’ ಫಾರಂ ನೀಡಲು ಮೀನಮೇಷ ಎಣಿಸುತ್ತಿರುವದಾಗಿ ಸುಳಿವು ಲಭಿಸಿದೆ.

ಅಲ್ಲದೆ ಈ ಗೊಂದಲದೊಂದಿಗೆ ಮಾಧ್ಯಮಗಳಲ್ಲಿ ಇಲ್ಲ ಸಲ್ಲದ ಟೀಕೆಗಳು ಚಂದ್ರಮೌಳಿ ಅವರ ಕುರಿತು ಬರಲು ಕಾರಣರೆನ್ನಲಾದ ಸರ್ವೋಚ್ಛ ನ್ಯಾಯಾಲಯದ ವಕೀಲರೊಬ್ಬರ

(ಮೊದಲ ಪುಟದಿಂದ) (ಮೊದಲ ಪುಟದಿಂದ) ವಿರುದ್ಧ ಕ್ರಮ ಜರುಗಿಸುವಂತೆ ಚಂದ್ರಮೌಳಿ ಆಪ್ತರು ಒತ್ತಡ ಹೇರುತ್ತಿರುವದಾಗಿ ತಿಳಿದು ಬಂದಿದೆ.

ಚಂದ್ರಮೌಳಿ ಸ್ಪಷ್ಟನೆ: ಏಳು ದಿನಗಳ ಹಿಂದೆ ತನ್ನನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಿದ ಬೆನ್ನಲ್ಲೇ, ಅನಂತರದ ಐದು ದಿನಗ ಳಿಂದ ಎದುರಾಗಿರುವ ಗೊಂದಲ ಕುರಿತು ಈಗಾಗಲೇ ಚಂದ್ರಮೌಳಿ ಸ್ಪಷ್ಟನೆ ನೀಡಿದ್ದರೂ, ಕಾಂಗ್ರೆಸ್ ವರಿಷ್ಠರು ಯಾವದೇ ಪ್ರತಿಕ್ರಿಯೆ ನೀಡದಿರುವದು ಹೊಸ ಬೆಳವಣಿಗೆ ಎನ್ನಲಾಗಿದೆ. ಹೀಗಾಗಿ ಚಂದ್ರಮೌಳಿ ಕಾಂಗ್ರೆಸ್ ಮೇಲಿನ ವಿಶ್ವಾಸದಿಂದ ತೀವ್ರ ಗೊಂದಲದಲ್ಲಿ ಸಿಲುಕಿದ್ದಾರೆ ಎಂದು ಆಪ್ತ ಮೂಲಗಳು ಹೇಳಿಕೊಂಡಿವೆ.ಕಾರಣ ಚುನಾವಣೆಗೆ ಕೇವಲ 20 ದಿನಗಳು ಇದ್ದರೂ, ತಮ್ಮ ಉಮೇದುವಾರಿಕೆ ಮುಂದುವರಿಸಬೇಕೆ? ಅಥವಾ ಬೇಡವೇ ಎಂಬ ಜಿಜ್ಞಾಸೆಗೆ ಇನ್ನು ಉತ್ತರ ಸಿಕ್ಕಿಲ್ಲವಂತೆ.

ಕುಗ್ಗದ ಆಕಾಂಕ್ಷೆ: ಈ ಪರಿಸ್ಥಿತಿ ನಡುವೆಯೂ ಹೈಕಮಾಂಡ್ ತನಗೆ ‘ಬಿ’ ಫಾರಂ ನೀಡಲಿದೆ ಎಂಬ ವಿಶ್ವಾಸದಲ್ಲಿರುವ ಚಂದ್ರಮೌಳಿ, ‘ಹೆಣ್ಣೊಬ್ಬಳನ್ನು ನಿಶ್ಚಿತಾರ್ಥ ಮಾಡಿಕೊಂಡವರ ವಿವಾಹ ಮಂಟಪಕ್ಕೆ ಕರೆಸಿ ಆಕೆಯ ಶೀಲ ಶಂಕಿಸಿದಂತಾಗಿದೆ’ ತನ್ನ ಪರಿಸ್ಥಿತಿಯೆಂದು ಆಪ್ತ ವಲಯದಲ್ಲಿ ನೋವು ತೋಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ಮುತ್ತಪ್ಪ ಅಭ್ಯರ್ಥಿ? ಇನ್ನೊಂದೆಡೆ ಹೆಚ್.ಎಸ್. ಚಂದ್ರಮೌಳಿ ಅವರನ್ನು ಒಂದು ವೇಳೆ ಕಣಕ್ಕೆ ಇಳಿಸದೆ ಹೋದರೆ ಇನ್ನೋರ್ವ ಆಕಾಂಕ್ಷಿ ನಾಪಂಡ ಎಂ. ಮುತ್ತಪ್ಪ ಕಡೆಗೆ ಪಕ್ಷದ ವರಿಷ್ಠರು ಒಲವು ಹೊಂದಿದ್ದಾರೆ ಎನ್ನಲಾಗುತ್ತಿದ್ದರೂ, ಪ್ರತಿಯಾಗಿ ಮತ್ತೋರ್ವ ಆಕಾಂಕ್ಷಿ ಬ್ರಿಜೇಶ್ ಕಾಳಪ್ಪ, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ವಿರೂಪಾಕ್ಷಪ್ಪ ಅವರುಗಳು ರಾಜಧಾನಿಯಲ್ಲಿ ಟಿಕೆಟ್‍ಗಾಗಿ ಸತತ ಪ್ರಯತ್ನದಲ್ಲಿದ್ದಾರೆ ಎಂದು ಗೊತ್ತಾಗಿದೆ.

ಬೆಂಬಲಿಗರ ಪ್ರಶ್ನೆ: ಕಾಂಗ್ರೆಸ್ ನಿಷ್ಠಾವಂತರಾಗಿ ಅನೇಕ ವರ್ಷಗಳಿಂಧ ಪಕ್ಷದಲ್ಲಿ ವಿವಿಧ ಹೊಣೆಗಾರಿಕೆ ನಿಭಾಯಸಿರುವ ಕೆ.ಪಿ. ಚಂದ್ರಕಲಾ ಅವರಿಗೆ ಏಕೆ ಟಿಕೆಟ್ ನೀಡುತ್ತಿಲ್ಲವೆಂದು ಅವರ ಬೆಂಬಲಿಗರು ಪಕ್ಷದ ವರಿಷ್ಠರಲ್ಲಿ ಪ್ರಶ್ನಿಸಿದ್ದು, ಯಾರೂ ಉತ್ತರಿಸುವ ಸ್ಥಿತಿಯಲ್ಲಿಲ್ಲ ಎಂಬ ಅಸಮಾಧಾನವನ್ನು ಕೆಲವರು ಹೊರಗೆಡವಿದ್ದಾರೆಂದು ತಿಳಿದು ಬಂದಿದೆ.

ಇನ್ನೂ ವಿರೂಪಾಕ್ಷಪ್ಪ ಮಾತ್ರ ಈ ಬಾರಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯಿತ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಲೇಬೇಕೆಂದೂ, ಚಂದ್ರಮೌಳಿ ಅವಕಾಶದಿಂದ ವಂಚಿಸಲ್ಪಟ್ಟರೆ ತನಗೆ ಅವಕಾಶ ನೀಡಬೇಕೆಂದು ಒತ್ತಡ ಹಾಕುತ್ತಿದ್ದು, ಕೆಲಮಂದಿ ಸ್ವಾಮೀಜಿಗಳು ಕೂಡ ಈ ವಿಷಯದಲ್ಲಿ ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ ವೀರಾಜಪೇಟೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸಿ.ಎಸ್. ಅರುಣ್ ಮಾಚಯ್ಯ ಅಧಿಕೃತ ಟಿಕೆಟ್ ಪಡೆದಿದ್ದರೂ ಕೂಡ, ಗೊಂದಲದೊಂದಿಗೆ ಕದ್ದಣಿಯಂಡ ಹರೀಶ್ ಬೋಪಣ್ಣ ಹಾಗೂ ಪದ್ಮಿನಿ ಪೊನ್ನಪ್ಪ ಅಭ್ಯರ್ಥಿ ಬದಲಾವಣೆಗೆ ಆಗ್ರಹಿಸುತ್ತಿರುವದು ಗುಟ್ಟಾಗಿ ಉಳಿದಿಲ್ಲ. ಆದರೆ ಕಾಂಗ್ರೆಸ್‍ನ ಕೆಪಿಸಿಸಿ ಹಾಗೂ ಎಐಸಿಸಿ ವರಿಷ್ಠರು ಯಾವದೇ ನಿಲುವು ತೆಗೆದುಕೊಳ್ಳದೆ, ತಮ್ಮ ನಿರ್ಧಾರದಂತೆಯೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಗಂಭೀರ ನಡೆ ಅನುಸರಿಸುವ ಮಾತು ಕೇಳಿಬರತೊಡಗಿದೆ.

ಈಗಿನ ಮೂಲಗಳ ಪ್ರಕಾರ ಸೋಮವಾರ ಸಂಜೆ ಹೊತ್ತಿಗೆ ಕಾಂಗ್ರೆಸ್‍ನ ಸ್ಪಷ್ಟ ನಿರ್ಧಾರ ಕೊಡಗಿನ ವಿಷಯದಲ್ಲಿ ಅಂತಿಮವಾಗಿ ಹೊರಬೀಳಲಿದೆ ಎಂದು ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ.