ಗೋಣಿಕೊಪ್ಪಲು, ಏ. 22: ಕೊಡಗು ಜಿಲ್ಲೆಯ ಪ್ರಜ್ಞಾವಂತ ಮತದಾರರು ಕಳೆದ ಹಲವು ಚುನಾವಣೆಗಳಲ್ಲಿ ತಾವು ಜಾತಿ ರಾಜಕಾರಣದ ಪರವಾಗಿಲ್ಲ ಎಂದು ಸಾಬೀತು ಪಡಿಸಿದ್ದಾರೆ. ಆದ್ದರಿಂದ ಕೊಡಗಿನಲ್ಲಿ ಯಾವದೇ ಜಾತಿ ರಾಜಕೀಯ ನಡೆಯುವದಿಲ್ಲ. ವೀರಾಜಪೇಟೆ ತಾಲೂಕಿನಾದ್ಯಂತ ಕಳೆದ ಎರಡು ಅವಧಿಯಲ್ಲಿ ಶಾಸಕನಾಗಿ, ವಿಧಾನ ಸಭಾಧ್ಯಕ್ಷನಾಗಿ, ಸ್ಪೀಕರ್ ಅವಧಿಯಲ್ಲಿ ಮಾಡಿರುವ ಜನಪರ ಕೆಲಸವೇ ತನಗೆ ಶ್ರೀರಕ್ಷೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ಅವಧಿಗೆ ಶಾಸಕರಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ.ಗೋಣಿಕೊಪ್ಪಲಿನ ಬೆಳ್ಳಿಯಪ್ಪ ಕಾಂಪ್ಲೆಕ್ಸ್‍ನಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಚುನಾವಣಾ ಪ್ರಚಾರ ಕಚೇರಿಯನ್ನು ಉದ್ಘಾಟಿಸಿ ‘ಶಕ್ತಿ’ಯೊಂದಿಗೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ತಿಂಗಳಿನ ಹಿಂದೆಯೇ ಪ್ರಚಾರ ಆರಂಭಿಸಿದ್ದು, ಮುಂದಿನ 20 ದಿನಗಳ ಅವಧಿ ಇಡೀ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳಲು ಸಾಕೆ? ಎಂಬ ಪ್ರಶ್ನೆಗೆ ಉತ್ತರಿಸಿದ ಬೋಪಯ್ಯ ಅವರು ವೀರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷದ ನಡುವೆ ಮಾತ್ರ ನೇರ ಸ್ಪರ್ಧೆ ಇದ್ದು, ತೃತೀಯ ಶಕ್ತಿಯ ಬಗ್ಗೆ ಈ ಭಾಗದ ಜನತೆ ಯಾವತ್ತೂ ಒಲವು ತೋರಿಲ್ಲ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ತಾನು ವಿಧಾನ ಸಭಾಧ್ಯಕ್ಷನಾಗಿದ್ದ ಸಂದರ್ಭ ಜಮಾ ಸಮಸ್ಯೆ ಇತ್ಯರ್ಥವಾಗದಿದ್ದಲ್ಲಿ ಪದಾತ್ಯಾಗಕ್ಕೂ ಸಿದ್ಧನಾಗಿದ್ದೆ. ಕೊಡಗು ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ, ಎರಡು ತಾಲೂಕು ರಚನೆ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಇದ್ದು ಮುಂದೆ ಕ್ಷೇತ್ರದ ಜನತೆ ಆಶೀರ್ವದಿಸಿದ್ದಲ್ಲಿ ಮೊದಲು ಇಂತಹಾ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಪಡುವದಾಗಿ ಬೋಪಯ್ಯ ಸ್ಪಷ್ಟಪಡಿಸಿದರು.

ವೀರಾಜಪೇಟೆಯ ಎರಡು ಕುಡಿಯುವ ನೀರಿನ ಯೋಜನೆ ಇದ್ದು ಕೇಂದ್ರ ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿರುವದಾಗಿ ಮಾಹಿತಿ ನೀಡಿದರು. ವೀರಾಜಪೇಟೆ ಕ್ಷೇತ್ರದಲ್ಲಿ ಕೊಡವ ಅಭ್ಯರ್ಥಿ ಒಳಗೊಂಡಂತೆ ಹೊಸಬರಿಗೆ ಬಿಜೆಪಿ ಟಿಕೆಟ್ ಎಂಬ ಹೋರಾಟ ಕಂಡು ಬಂದಿತ್ತು. ಇದೀಗ ಅಸಮಾಧಾನಿತರು, ಟಿಕೆಟ್ ವಂಚಿತರು ತಮಗೆ ಸಹಕರಿಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿ ಬೋಪಯ್ಯ, ಅಸಮಾಧಾನ ಶಮನಗೊಳ್ಳಲಿದೆ. ರಾಜ್ಯ ನಾಯಕರು ಈ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ವಿವರಿಸಿದರು.

ಈ ಬಾರಿಯ ಚುನಾವಣಾ ಪ್ರಚಾರಕ್ಕೆ ಎರಡೂ ಕ್ಷೇತ್ರಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿ, ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅಮಿತ್ ಶಾ ಒಳಗೊಂಡಂತೆ ಹಲವು ಪ್ರಭಾವಿ ನಾಯಕರು ಆಗಮಿಸಲಿದ್ದಾರೆ. ತಾ. 24 ರಂದು ವೀರಾಜಪೇಟೆಯಲ್ಲಿ ನಾಮಪತ್ರ ಸಲ್ಲಿಸಲಿದ್ದು, ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಕೇಂದ್ರದ ಮಾಜಿ ಮಂತ್ರಿ ಅನಂತ್ ಕುಮಾರ್, ಸಂಸದ ಪ್ರತಾಪ್ ಸಿಂಹ, ಮಧ್ಯಪ್ರದೇಶದ ಬಿಜೆಪಿ ಕ್ಯಾಬಿನೆಟ್ ದರ್ಜೆ ಸಚಿವರು ಮುಂತಾದವರು ಆಗಮಿಸಲಿದ್ದಾರೆ ಎಂದು ಹೇಳಿದರು.

ಬಿಜೆಪಿಗೆ ಬಹುಮತ!

ರಾಜ್ಯದಲ್ಲಿ ಬಿಜೆಪಿ ಈ ಬಾರಿ ನಿಚ್ಚಳ ಬಹುಮತಗಳಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ಅವರು, ಕರಿಕೆಯಿಂದ ಕುಟ್ಟದವರೆಗೆ ಕಳೆದ ಒಂದು ವರ್ಷದಿಂದಲೇ ಕಾರ್ಯಕರ್ತರ ಮೂಲಕ ಸುಮಾರು 19 ಸೂತ್ರಗಳ ಪ್ರಚಾರವನ್ನು ಹಂತ ಹಂತವಾಗಿ ಆರಂಭಿಸಲಾಗಿದೆ. ಪಿರಿಯಾಪಟ್ಟಣದಲ್ಲಿಯೂ ತಾನು ಪ್ರಚಾರ ಕಾರ್ಯಕೈಗೊಂಡಿದ್ದೆ ವೀರಾಜಪೇಟೆ ಕ್ಷೇತ್ರದ ಜನತೆ ಹಾರೈಸಿದರೆ ಇಲ್ಲಿ ಉಳಿದಿರುವ ಸಮಸ್ಯೆ ಇತ್ಯರ್ಥಕ್ಕೆ ಹೋರಾಟ ಮಾಡುವದಾಗಿಯೂ, ಸ್ಪೀಕರ್ ಅವಧಿಯಲ್ಲಿ ಕೊಡಗು ಜಿಲ್ಲೆಗೆ ರೂ. 1850 ಕೋಟಿ ಅನುದಾನ ಬಿಡುಗಡೆಯಾಗಿದ್ದು, ವೀರಾಜಪೇಟೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸುಮಾರು ರೂ. 950 ಕೋಟಿ ವಿನಿಯೋಗವಾಗಿತ್ತು.

ಕಳೆದ 5 ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸುಳ್ಳು ಲೆಕ್ಕ ಹೇಳುವದು ಬಿಟ್ಟರೆ ಏನೇನೂ ಮಾಡಿಲ್ಲ ಎಂದು ಆರೋಪಿಸಿದರು. ಗೋಣಿಕೊಪ್ಪಲು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಗಾಂಧಿ ದೇವಯ್ಯ, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಬಿಜೆಪಿ ಕ್ಷೇತ್ರದ ಅಧ್ಯಕ್ಷ ಅರುಣ್ ಭೀಮಯ್ಯ, ವೀರಾಜಪೇಟೆ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ, ಜಿ.ಪಂ. ಸದಸ್ಯ ಶಶಿ ಸುಬ್ರಮಣಿ, ಬಿಜೆಪಿ ಪ್ರಮುಖರಾದ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಚೇಂದಂಡ ಸುಮಿ ಸುಬ್ಬಯ್ಯ, ರಾಣಿ ನಾರಾಯಣ, ವೀರಾಜಪೇಟೆ ಪ.ಪಂ. ಅಧ್ಯಕ್ಷ ಇ.ಸಿ. ಜೀವನ್, ಚೆಕ್ಕೇರ ಸೂರ್ಯ, ಕಾನೂರು ಭರತ್, ಮಲ್ಲಂಡ ಮಧು ದೇವಯ್ಯ, ಬಿ. ಶೆಟ್ಟಿಗೇರಿಯ ಲಾಲಾ ಭೀಮಯ್ಯ, ಚೋಟು ಕಾವೇರಪ್ಪ, ವಾಟೇರಿರ ಬೋಪಣ್ಣ, ಪಟ್ಟಡ ಮನು ರಾಮಚಂದ್ರ, ವೀರಾಜಪೇಟೆಯ ಜೋಕಿಮ್ ರೋಡ್ರಿಗಸ್, ರಾಜಾ ಚಂದ್ರಶೇಖರ್, ಕಾವೇರಿ ಮಂದಣ್ಣ, ಮನೆಯಪಂಡ ಸೋಮಣ್ಣ, ಕೆ.ಪಿ. ಬೋಪಣ್ಣ, ಚೀಯಕ್‍ಪೂವಂಡ ಸುಬ್ರಮಣಿ, ಕುಂಬೆಯಂಡ ಗಣೇಶ್, ತಾ.ಪಂ.ಸದಸ್ಯ ಜಯಾ ಪೂವಯ್ಯ, ಕಾಯೇರ ಕಿರಣ್ ಮುಂತಾದವರು ಪ್ರಚಾರ ಕಚೇರಿ ಉದ್ಘಾಟನೆ ಸಂದರ್ಭ ಉಪಸ್ಥಿತರಿದ್ದರು.