ಮಡಿಕೇರಿ, ಏ. 22: ತಾನು ಹುಟ್ಟುಹಾಕಿರುವ ‘ಜಸ್ಟ್ ಆಸ್ಕಿಂಗ್’ ಸಂಸ್ಥೆಯ ಮೂಲಕ ಇಡೀ ರಾಜ್ಯದಲ್ಲಿ ಪ್ರತಿ ಪ್ರಜೆಯೂ ಪ್ರಶ್ನಿಸುವ ಮನೋಭಾವ ಬೆಳೆಸುವಂತೆ ಮಾಡುವದು ತನ್ನ ಉದ್ದೇಶ ಎಂದು ಹಿರಿಯ ಕಲಾವಿದ ಪ್ರಕಾಶ್ ರೈ ವಿವರಿಸಿದರು.ನಗರದ ಪತ್ರಿಕಾಭವನದಲ್ಲಿ ಪ್ರೆಸ್‍ಕ್ಲಬ್ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಮಾಜ ಕುರಿತ ತಮ್ಮ ಚಿಂತನೆಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು. ಪತ್ರಕರ್ತೆ ಗೌರಿ ಸಾವು ತನ್ನ ಮನಸ್ಥಿತಿಯನ್ನು ಬದಲಾಯಿಸಿ, ಹತ್ಯೆಯನ್ನು ಸಂಭ್ರಮಿಸುವವರನ್ನು ಕಂಡಾಗ ಹಾಗೂ ಈ ಬಗ್ಗೆ ಪ್ರಶ್ನಿಸುವವರನ್ನು ಹತ್ತಿಕ್ಕುವ ಕೆಲಸ ಮುಂದುವರಿದಾಗ ಈ ಬಗ್ಗೆ ಪ್ರಜೆಗಳೊಡನೆ ಸಂವಾದ ಮಾಡಬೇಕು ಎನಿಸಿತು ಎಂದು ತಮ್ಮ ಸಂಸ್ಥೆಯ ಉದ್ದೇಶದ ಬಗ್ಗೆ ವಿವರಿಸಿದ ಪ್ರಕಾಶ್ ರೈ ಇಂದು ಕೋಮುವಾದ ಹಬ್ಬುತ್ತಿರುವ ಬಿಜೆಪಿಯನ್ನು ವಿರೋಧಿಸುತ್ತಿರುವ ತಾನು ಮುಂದೆ ವಿರೋಧ ಪಕ್ಷಗಳ ತಪ್ಪುಗಳನ್ನೂ ಎತ್ತಿ ಹಿಡಿಯುತ್ತೇನೆ ಎಂದರು. ಭಾರತ ಜಾತ್ಯಾತೀತ ರಾಷ್ಟ್ರವಾಗಲು ಸಾಧ್ಯವಿಲ್ಲ. ಧರ್ಮ ಬೇಡ ಎನ್ನುವದನ್ನು ತಾನು ಒಪ್ಪುವದಿಲ್ಲ. ಮನುಷ್ಯನ ಶರಣಾಗತ ಭಾವಕ್ಕೆ ಬದುಕಿನಲ್ಲಿ ಧರ್ಮವಿರಬೇಕು ಎಂದು ಪ್ರತಿಪಾದಿಸಿ, ರೈ ಇನ್ನೊಂದು ಧರ್ಮವನ್ನು ತುಳಿಯುವ ಕೆಲಸವನ್ನು ಬಿಜೆಪಿ ಮಾಡುತ್ತಿರುವದರಿಂದ ಅದನ್ನು ವಿರೋಧಿಸುತ್ತೇವೆ ಎಂದರು.ತಮ್ಮ ಸಂಘಟನೆ ಎಂದಿಗೂ ಕೂಡ ರಾಜಕೀಯ ಪ್ರವೇಶ ಮಾಡದೆ ಪ್ರತಿ ವ್ಯಕ್ತಿಯ ತನ್ನ ವ್ಯಾಪ್ತಿಯಲ್ಲಿ ಪ್ರಶ್ನಿಸುವ ಹಕ್ಕನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲೆಡೆ ಸಂಘಟನೆಯನ್ನು ಬಲಿಷ್ಠಗೊಳಿಸಲಾಗುವದು ಎಂದರು. ನಕ್ಸಲ್ ಹೋರಾಟ ಹಿಂಸೆಯಿಂದ ಕೂಡಿದ್ದು, ತಮ್ಮದು ಭಾವನಾತ್ಮಕ ಹೋರಾಟ ಎಂದು ಅವರು ಸ್ಪಷ್ಟಪಡಿಸಿದರಲ್ಲದೆ, ರಾಜಕೀಯವಿಲ್ಲದೆ ಈ ದೇಶದಲ್ಲಿ ಯಾವ ಕೆಲಸಗಳೂ ನಡೆಯದು ಎಂಬ ಬಗ್ಗೆ ಸೂಚ್ಯವಾಗಿ ನುಡಿದರು.

ಎಡಪಂಥೀಯ ಬಲಪಂಥೀಯ ಅಥವಾ ಯಾವದೇ ವರ್ಗದಲ್ಲಿ ತನಗೆ ನಂಬಿಕೆ ಇಲ್ಲದಿದ್ದು, ಸಮಾಜ ಮನುಷ್ಯ ಧರ್ಮದ ಬಗ್ಗೆ ಮಾತನಾಡಿ, ಎಲ್ಲರನ್ನೂ ಮನುಷ್ಯ ನೋಡಿ ಎಂದು ಕರೆ ನೀಡಿದ ಪ್ರಕಾಶ್, ಸಮಾಜದಲ್ಲಿ ಎಲ್ಲೆಡೆ ಜನರಿಗೆ ನಂಬಿಕೆ ದ್ರೋಹ ಆಗಿರುವದರಿಂದ ಅವರೂ ಕೂಡ ಭ್ರಷ್ಟರಾಗಿದ್ದಾರೆ ಎಂದರು. ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲಾ ಪಕ್ಷಗಳು ತಪ್ಪಿತಸ್ಥ ಸ್ಥಾನದಲ್ಲಿದ್ದರೂ ಬಿಜೆಪಿ ಅತೀ ದೊಡ್ಡ ಸಮಸ್ಯೆ ಆಗಿರುವದರಿಂದ ಅದನ್ನು ಮೊದಲು ಓಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರಲ್ಲದೆ, ಕರ್ನಾಟಕದ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ದೂರವಿಡಬೇಕು. ಅನಿವಾರ್ಯವಾದಲ್ಲಿ ಜೆಡಿಎಸ್ ಪಕ್ಷ ಯಾವದೇ ಕಾರಣಕ್ಕೂ ಬಿಜೆಪಿಯೊಂದಿಗೆ

(ಮೊದಲ ಪುಟದಿಂದ) ಹೊಂದಾಣಿಕೆ ಮಾಡಿಕೊಳ್ಳಬಾರ ದೆಂದು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದರು. ಮನುಷ್ಯ ಯಾವ ಧರ್ಮದವನು ಎಂದು ಹೆತ್ತವರು ಸೂಚಿಸುತ್ತಾರೆ ಹೊರತು ಆತ ಯಾವದೇ ಧರ್ಮದಲ್ಲೂ ಹುಟ್ಟಿಲ್ಲ ಎಂದು ವಿಶ್ಲೇಷಿಸಿದ ಪ್ರಕಾಶ್ ರೈ ಪ್ರಬುದ್ಧರಾದ ಮೇಲೆ ಯಾವ ಧರ್ಮವನ್ನು ಸ್ವೀಕರಿಸಬೇಕು ಎಂಬ ಸ್ವಾತಂತ್ರ್ಯವನ್ನು ಪ್ರತಿಯೊಬ್ಬ ವ್ಯಕ್ತಿ ಹೊಂದಿರುತ್ತಾನೆ ಎಂದು ತಮ್ಮ ಧರ್ಮ ಚಿಂತನೆಯನ್ನು ಹೊರಗೆಡವಿದರು. ಈ ಸಂದರ್ಭ ಪ್ರೆಸ್‍ಕ್ಲಬ್ ಅಧ್ಯಕ್ಷ ರಮೇಶ್ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಸುಬ್ರಮಣಿ, ಶಿವಮೊಗ್ಗ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಉಪಸ್ಥಿತರಿದ್ದರು.