ಮಡಿಕೇರಿ, ಏ. 22: ಹಿಡಿರಾ.., ಬುಡ್ಬಡ್ರಾ.., ಎಳ್ದಕ್ರಾ..., ಅಯ್ಯೋ..., ಕಪ್ಪೆ ಹಿಡ್ಯೋಕ್ಕೋಗು.., ಬಕೆಟ್ ಬೇಕಾ..., ಥೂ.., ದೇವ್ರೇ...? ಈ ರೀತಿಯ ಉದ್ಘೋಷಗಳು ಜನರಲ್ ತಿಮ್ಮಯ್ಯ ಆಟದ ಮೈದಾನದೆಲ್ಲೆಡೆಯಲ್ಲೂ ಪಸರಿಸಿತು. ಕಬಡ್ಡಿ ಹಾಗೂ ಥ್ರೋಬಾಲ್ ಪಂದ್ಯಾವಳಿಯನ್ನು ಅತ್ಯಂತ ಉತ್ಸುಕತೆಯಿಂದ ವೀಕ್ಷಿಸುತ್ತಿದ್ದ ಕ್ರೀಡಾಭಿಮಾನಿಗಳ.., ತಂಡದ ಪರ ಹಿತೈಷಿಗಳ ಬಾಯಿಂದ ಹೊರಬರುತ್ತಿದ್ದ ನುಡಿಗಳವು. ಪಂದ್ಯ ಗೆಲ್ಲಲೇಬೇಕೆಂಬ ಛಲದಿಂದ ಕ್ರೀಡಾಳುಗಳನ್ನು ಮೈದಾನದಲ್ಲಿ ಉರುಳುರುಳಿ ಬಿದ್ದು ಆಡುತ್ತಿದ್ದರೆ ಇತ್ತ ಪ್ರೇಕ್ಷಕರ ಉತ್ಸುಕತೆ ಉತ್ತುಂಗಕ್ಕೇರಿ ಹುರಿದುಂಬಿಸುತ್ತಿದ್ದ ಪರಿಯಂತೂ ನೆರೆದವರೆಲ್ಲರಿಗೂ ರೋಮಾಂಚಕತೆಯ ರಸದೌತಣ ಬಡಿಸಿತು...ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ಬಾಂಧವರ ನಡುವೆ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಹಬ್ಬದ ಪ್ರಯುಕ್ತ ಇಂದು ವಿಶೇಷವಾಗಿ ಏರ್ಪಡಿಸಿದ್ದ ಪುರುಷ ಹಾಗೂ ಮಹಿಳೆಯ ಕಬಡ್ಡಿ ಮತ್ತು ಮಹಿಳೆಯ ಥ್ರೋಬಾಲ್ ಪಂದ್ಯಾಟಗಳು ಕ್ರೀಡಾ ಪ್ರೇಮಿಗಳಿಗೆ ರಸದೌತಣ ಬಡಿಸಿದವು. ಬೆಳಿಗ್ಗೆಯಿಂದ ಪ್ರಾರಂಭಗೊಂಡು ನಡು ರಾತ್ರಿಯವರೆಗೆ ನಡೆದ ಪುರುಷರ ಕಬಡ್ಡಿ ಪಂದ್ಯಾವಳಿ ಪ್ರೊ. ಕಬಡ್ಡಿಗೆ ಸರಿಸಮವಾಗಿತ್ತು.
22 ಕುಟುಂಬ ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ ಒಂದಕ್ಕಿಂತ ಮತ್ತೊಂದು ಎಂಬಂತೆ ತಂಡಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದವು. ರಾಜ್ಯ, ರಾಷ್ಟ್ರಮಟ್ಟದ ಆಟಗಾರರಿಗಿಂತ ತಾವೇನೂ ಕಡಿಮೆ ಇಲ್ಲ ಎಂಬಂತೆ
(ಮೊದಲ ಪುಟದಿಂದ) ಆಟಗಾರರು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಕರ್ನಾಟಕ ರಾಜ್ಯ ಕಬಡ್ಡಿ ಅಸೋಸಿಯೇಶನ್‍ನ ಕೊಡಗು ಜಿಲ್ಲಾ ಘಟಕದ ಆಶ್ರಯದೊಂದಿಗೆ ಏರ್ಪಡಿಸಲಾಗಿದ್ದ ಪಂದ್ಯಾವಳಿಯಲ್ಲಿ ನುರಿತ ತೀರ್ಪುಗಾರರು ಭಾಗವಹಿಸಿದ್ದರು.
ಮಹಿಳೆಯರ ಗತ್ತು...
ಪುರುಷರಿಗಿಂತ ತಾವೇನೂ ಕಡಿಮೆ ಇಲ್ಲವೆಂಬಂತೆ ಮಹಿಳೆಯರೂ ಕೂಡ ಕಬಡ್ಡಿ, ಕಬಡ್ಡಿ ಎಂದು ಕಣಕ್ಕಿಳಿದರು. ಈ ಹೆಂಗಸರದ್ದು, ಹುಡುಗಿಯರದ್ದೇನೆಂದು ಮೂಗು ಮುರಿಯುತ್ತಿದ್ದವರೆಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ತಮ್ಮಲ್ಲಡಗಿರುವ ಪ್ರತಿಭೆಯನ್ನು ಪ್ರದರ್ಶಿಸಿ ತಾವೂ ಕೂಡ ಕಬಡ್ಡಿಗೆ ಸೈ ಎಂದು ತೋರಿಸಿಕೊಟ್ಟರು. ಪಾಲ್ಗೊಂಡಿದ್ದ 10 ತಂಡಗಳಲ್ಲಿ ರಾಜ್ಯ, ರಾಷ್ಟ್ರಮಟ್ಟದ ಆಟಗಾರ್ತಿಯರಿಗೇನೂ ಕಡಿಮೆ ಇಲ್ಲವೆಂಬಂತೆ ಆಟವಾಡಿದರು.
ಥ್ರೋಬಾಲ್: ಮಹಿಳೆಯರಿಗೆ ಸುಲಲಿತವಾದ ಥ್ರೋಬಾಲ್ ಎಂಬದು ಎಲ್ಲರಿಗೂ ತಿಳಿದ ವಿಷಯ. ಆದರೆ ಇಲ್ಲಿ ಇಂದು ಅದೂ ಕೂಡ ಕಷ್ಟದ ಕೆಲಸವೆಂಬದನ್ನು ಮಹಿಳಾಮಣಿಗಳು ಸಾಬೀತುಪಡಿಸಿದರು. ಒಬ್ಬರಿಗಿಂತ ಇನ್ನೊಬ್ಬರು ಮೇಲೆಂಬಂತೆ ಚೆಂಡನ್ನು ಎಸೆಯುತ್ತಿದ್ದುದು ಕ್ರೀಡಾಸಕ್ತರಿಗೆ ಮನರಂಜನೆ ನೀಡಿತು. ಪಾಲ್ಗೊಂಡಿದ್ದ 12 ಕುಟುಂಬ ತಂಡಗಳು ತಮ್ಮಲ್ಲಿರುವ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದರು.
ಉದ್ಘಾಟನೆ: ಕಬಡ್ಡಿ ಪಂದ್ಯಾವಳಿಯನ್ನು ಚೆರಿಯಮನೆ ಕ್ರಿಕೆಟ್ ಕಪ್ ಸಮಿತಿ ಅಧ್ಯಕ್ಷ ಡಾ. ಚೆರಿಯಮನೆ ಚಂದ್ರಶೇಖರ್ ಉದ್ಘಾಟಿಸಿದರು. ಈ ಸಂದರ್ಭ ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಕೊಡಗು ಜಿಲ್ಲಾಧ್ಯಕ್ಷ ಹೊಸೊಕ್ಲು ಉತ್ತಪ್ಪ, ಕಾರ್ಯದರ್ಶಿ ದುಗ್ಗಳ ಕಪಿಲ್, ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಯುವ ವೇದಿಕೆ ಪದಾಧಿಕಾರಿಗಳು, ಚೆರಿಯಮನೆ ಕುಟುಂಬಸ್ಥರು, ಯುವ ವೇದಿಕೆ ಪದಾಧಿಕಾರಿಗಳು ಇದ್ದರು. ಚೆರಿಯಮನೆ ಹಾಗೂ ಯುವ ವೇದಿಕೆ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆದು ಯುವ ವೇದಿಕೆ ತಂಡ ಜಯಗಳಿಸಿತು.
ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯನ್ನು ಅಂತರ್ರಾಷ್ಟ್ರೀಯ ಥ್ರೋಬಾಲ್ ಆಟಗಾರ್ತಿ ಚೆರಿಯಮನೆ ಮೇಘ ಪ್ರಭಾಕರ್ ಉದ್ಘಾಟಿಸಿದರು. ಈ ಸಂದರ್ಭ ಯುವ ವೇದಿಕೆ ಪ್ರಚಾರ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್, ಆಹಾರ ಸಮಿತಿ ಅಧ್ಯಕ್ಷ ಪರಿಚನ ಸತೀಶ್ ಇನ್ನಿತರರಿದ್ದರು. ಕಟ್ಟೆಮನೆ ಸೋನಾಜಿತ್, ಯಾಲದಾಳು ಮದನ್ ಕಾರ್ಯಕ್ರಮ ನಿರ್ವಹಿಸಿದರು.